ನಾಯಿಗೆ ಆಹಾರ ನೀಡುತ್ತಿದ್ದ ಯುವತಿಯನ್ನು ಗುದ್ದಿಕೊಂಡು ಹೋದ ಕಾರು: ವಿಡಿಯೋ
ಬೀದಿ ಬದಿ ನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿ ಗಂಭೀರ ಗಾಯಗೊಂಡ ಘಟನೆ ಚಂಡೀಗಢದಲ್ಲಿ ನಡೆದಿದ್ದು, ಈ ಅವಘಡದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಚಂಡೀಗಢ: ಬೀದಿ ಬದಿ ನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿ ಗಂಭೀರ ಗಾಯಗೊಂಡ ಘಟನೆ ಚಂಡೀಗಢದಲ್ಲಿ ನಡೆದಿದ್ದು, ಈ ಅವಘಡದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇದೊಂದು ಹಿಟ್ & ರನ್ ಪ್ರಕರಣವಾಗಿದ್ದು, ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಬೀದಿನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ತೇಜಸ್ವಿತ ಎಂದು ಗುರುತಿಸಲಾಗಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಕೆ ಮನೆ ಮುಂದೆ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಿಂದ ಯವತಿಯ ತಲೆಗೆ ಗಂಭೀರ ಗಾಯವಾಗಿದ್ದು, ಆಕೆಯ ತಲೆಯ ಎರಡು ಭಾಗಕ್ಕೂ ಸ್ಟಿಚ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಆಕೆ ನಮ್ಮೊಂದಿಗೆ ಮಾತನಾಡಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕುಟುಂಬದವರ ಪ್ರಕಾರ, ಶನಿವಾರ ರಾತ್ರಿ ಈ ಘಟನೆ ನಡೆದಿದೆ. ತೇಜಸ್ವಿತಾ ಹಾಗೂ ಆಕೆಯ ತಾಯಿ ಮಂಜಿದೆರ್ ಕೌರ್ ಅವರು ಫುಟ್‌ಪಾತ್‌ನಲ್ಲಿ ಬೀದಿನಾಯಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಮನೆ ಸಮೀಪದ ಸಿಸಿಟಿವಿಯಲ್ಲಿ(CCTV footage) ಈ ದೃಶ್ಯ ಸೆರೆ ಆಗಿದ್ದು, ತೇಜಸ್ವಿತಾ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಮಹೀಂದ್ರ ಥಾರ್ (Mahindra Thar SUV) ಗಾಡಿ ಆಗಮಿಸಿದ್ದು, ಯೂಟರ್ನ್ ಆಗುವ ವೇಳೆ ಯುವತಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ತೇಜಸ್ವಿನಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ನೋಡಿ ತಾಯಿ ಗಾಬರಿಯಾಗಿದ್ದಾರೆ. ಅಪಘಾತದ ವೇಳೆ ಒಬ್ಬರು ಸಹಾಯಕ್ಕೆ ಬಂದಿಲ್ಲ. ನಂತರ ನಾನು ಮನೆಯವರಿಗೆ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ ಎಂದು ತೇಜಸ್ವಿ ತಾಯಿ ಹೇಳಿದ್ದಾರೆ.
ತೇಜಸ್ವಿತಾ (Tejashwita) ವಾಸ್ತುಶಿಲ್ಪ ಶಾಸ್ತ್ರದಲ್ಲಿ (Architecture) ಪದವಿ ಪಡೆದಿದ್ದು, ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆಕೆ ದಿನವೂ ತನ್ನ ತಾಯಿಯೊಂದಿಗೆ ಬೀದಿನಾಯಿಗಳಿಗೆ ಆಹಾರ ನೀಡಲು ಹೋಗುತ್ತಿದ್ದಳು ಎಂದು ತೇಜಸ್ವಿತಾ ತಂದೆ ಒಜಸ್ವಿ ಕೌಶಲ್ ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಗೆ ಡಿಕ್ಕಿ ಹೊಡೆದ ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತಹ ಹಲವು ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಕಾರೊಂದು ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದು ಆಕೆಯನ್ನು ಎಳೆದುಕೊಂಡು ಹೋದ ಪರಿಣಾಮ ಆಕೆ ಸಾವನ್ನಪ್ಪಿದ್ದಳು.