ಹೈದರಾಬಾದ್‌ನಲ್ಲಿ ಯುವಕನೊಬ್ಬ ಪ್ರಿಯತಮೆಗೆ ಮಾಡಿದ ಕಿಡ್ನಾಪ್ ಪ್ರಾಂಕ್ ಮೆಸೇಜ್‌ನಿಂದಾಗಿ 30 ಲಕ್ಷ ರೂ. ಹವಾಲಾ ಹಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಕಿಡ್ನಾಪ್ ದೂರಿನ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸರಿಗೆ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದ ಅಕ್ರಮ ಹಣ ಪತ್ತೆಯಾಗಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್: ತಮಾಷೆಗಾಗಿ ಪ್ರಿಯತಮೆಗೆ ಕಳುಹಿಸಿದ ಒಂದು ಕಿಡ್ನಾಪ್ ಸಂದೇಶವು ಹವಾಲಾ ದಂಧೆಯನ್ನು ಬಯಲಿಗೆಳೆದಿದೆ. ಗೆಳತಿಯನ್ನು ಹೆದರಿಸಲು ಹೋಗಿ ಯುವಕರು ಈಗ ಪೊಲೀಸರ ಅತಿಥಿಗಳಾಗಿರುವ ಘಟನೆ ಹೈದರಾಬಾದ್‌ನ ಕೆಪಿಎಚ್‌ಬಿ (KPHB) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದಿದ್ದೇನು?
ಕೆಪಿಎಚ್‌ಬಿಯ 'ಇಂಡೀಸ್ ಒನ್' ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸುಮಂತ್, ಮನೋಜ್ ಮತ್ತು ಗೌತಮ್ ಎಂಬ ಮೂವರು ಯುವಕರು ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಮಂತ್ ತನ್ನ ಪ್ರಿಯತಮೆಗೆ ಪ್ರಾಂಕ್ (ತಮಾಷೆ) ಮಾಡಲು ನಿರ್ಧರಿಸಿ, ನನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಮೆಸೇಜ್ ಕಳುಹಿಸಿದ್ದಾನೆ.
ಪೊಲೀಸರ ಎಂಟ್ರಿ, ಶಾಕಿಂಗ್ ಸತ್ಯ
ಸಂದೇಶ ನೋಡಿ ತೀವ್ರ ಗಾಬರಿಗೊಂಡ ಯುವತಿ ವಿಳಂಬ ಮಾಡದೆ ಕೆಪಿಎಚ್‌ಬಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕಿಡ್ನಾಪ್ ಕೇಸ್ ಎಂದು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಲೊಕೇಶನ್ ಆಧರಿಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಧಾವಿಸಿದ್ದಾರೆ. ಅಲ್ಲಿ ಯುವಕರು ಸುಖವಾಗಿರುವುದನ್ನು ನೋಡಿ ಪೊಲೀಸರು ಸಮಾಧಾನಗೊಂಡರು. ಆದರೆ, ಅನುಮಾನಗೊಂಡು ಇಡೀ ಮನೆಯನ್ನು ತಪಾಸಣೆ ನಡೆಸಿದಾಗ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು.
ಅಲ್ಲಿನ ಒಂದು ಬ್ಯಾಗ್‌ನಲ್ಲಿ ಅಕ್ಷರಶಃ 30 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಈ ಭಾರಿ ಮೊತ್ತದ ಹಣದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ಯುವಕರು ತಡಬಡಾಯಿಸಿದ್ದಾರೆ. ತಮಗೆ ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಸುಳ್ಳು ಹೇಳಲು ಪ್ರಯತ್ನಿಸಿದ್ದಾರೆ. ಯುವಕರ ಹಾರಿಕೆ ಉತ್ತರದಿಂದ ಅನುಮಾನಗೊಂಡ ಪೊಲೀಸರು ಹಣದ ಸಮೇತ ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಹಣವು ಕ್ರಿಕೆಟ್ ಬೆಟ್ಟಿಂಗ್ ಅಥವಾ ಹವಾಲಾ ದಂಧೆಗೆ ಸಂಬಂಧಿಸಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಣದ ಮೂಲ ಯಾವುದು ಮತ್ತು ಇದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.


