ರೈಲಿನಿಂದ ಇಳಿಯುವಾಗ ತಾಯಿಯೊಬ್ಬಳು ತನ್ನ ಲಗ್ಗೇಜ್ ತೆಗೆದುಕೊಂಡು ಮಗುವನ್ನೇ ಮರೆತುಬಿಟ್ಟಿದ್ದಾಳೆ. ನಂತರ ಸಹ ಪ್ರಯಾಣಿಕನೊಬ್ಬ ಮಗುವನ್ನು ತಂದುಕೊಟ್ಟಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿ ತಾಯಿಯ ಬೇಜವಾಬ್ದಾರಿತನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಮಕ್ಕಳಿಗಾಗಿ ಜೀವವನ್ನೇ ಪಣಕ್ಕಿಡುವ ಎಷ್ಟೋ ತಾಯಂದಿರನ್ನು ದಿನನಿತ್ಯವೂ ನೋಡುತ್ತಿರುತ್ತೇವೆ. ಅದರಲ್ಲಿಯೂ ಮಗುವಿಗೆ ಪ್ರಾಣಾಪಾಯವಾಗಿದೆ ಎಂದಾಗ ತನ್ನ ಪ್ರಾಣವನ್ನೂ ಲೆಕ್ಕಿಸದೇ ಅಮ್ಮ ಎನಿಸಿಕೊಂಡಾಕೆ ಆ ಮಗುವಿನ ರಕ್ಷಣೆಗೆ ಮುಂದಾಗುವುದು ಇದೆ. ಆದರೆ ಇಲ್ಲೊಬ್ಬ ಮಹಾನ್ ತಾಯಿಗೆ ತಾನು ತನ್ನ ಜೊತೆ ಮಗುವನ್ನು ಕರೆದುಕೊಂಡು ಬಂದಿದ್ದೇನೇ ಎನ್ನುವುದೇ ಮರೆತು ಹೋಗಿದೆ. ಮಗುವನ್ನು ಬಿಟ್ಟು ಲಗ್ಗೇಜ್ ಮಾತ್ರ ತೆಗೆದುಕೊಂಡು ಟ್ರೈನ್ನಿಂದ ಇಳಿದಿದ್ದಾಳೆ. ಇದರ ವಿಡಿಯೋ ವೈರಲ್ ಆಗಿದ್ದು, ಕೆಲವರಿಗೆ ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ ಎನ್ನುವುದಕ್ಕೆ ಈ ಶಾಕಿಂಗ್ ವಿಡಿಯೋ ಸಾಕ್ಷಿಯಾಗಿದೆ.
ಶಾಕಿಂಗ್ ವಿಡಿಯೋ ವೈರಲ್
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಅಲ್ಲಿರುವ ಓಯೆಲ್ ಸ್ಟೇಷನ್ ಬೋರ್ಡ್ ನೋಡಿದರೆ ತಿಳಿಯುತ್ತದೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆಣ್ಣೊಬ್ಬಳ ಅದರಲ್ಲಿಯೂ ಅಮ್ಮ ಒಬ್ಬಳು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವೇ ಎನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಮಹಿಳೆ ತನ್ನ ಲಗ್ಗೇಜ್ ಜೊತೆ ಯಾವುದೇ ಚಿಂತೆಯಿಲ್ಲದೇ ಇಳಿದಿದ್ದಾಳೆ. ರೈಲು ಹೊರಟಿದ್ದರೂ ಮಹಿಳೆಗೆ ತನ್ನ ಜೊತೆ ಮಗು ಇತ್ತು ಎನ್ನುವುದೇ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾಳೆ.
ಅದೇ ವೇಳೆ ರೈಲಿನಲ್ಲಿ ಇದ್ದ ವ್ಯಕ್ತಿಯೊಬ್ಬ ಮಗುವನ್ನು ಕರೆದುಕೊಂಡು ಬಂದಾಗ, ಮಹಿಳೆಯ ಜೊತೆ ಇದ್ದ ಹುಡುಗಿಯೊಬ್ಬಳು ಗಾಬರಿಯಿಂದ ಓಡಿ ಹೋಗಿ ಮಗುವನ್ನು ಎತ್ತಿಕೊಳ್ಳಲು ಹೋಗಿದ್ದಾಳೆ. ಮಹಿಳೆ ಕೂಡ ಓಡಿ ಹೋಗಿ ಮಗುವನ್ನು ಎತ್ತಿಕೊಂಡಿದ್ದಾಳೆ. ಆ ಪುಣ್ಯಾತ್ಮ ಮಾತ್ರ ಯಾರೋ ಗೊತ್ತಿಲ್ಲ. ಮಗುವನ್ನು ಕೊಟ್ಟು ಚಲಿಸುತ್ತಿದ್ದ ರೈಲಿನಲ್ಲಿ ಹತ್ತಿ ಹೋಗಿದ್ದಾನೆ.
ನಿಜಕ್ಕೂ ಮರೆತಳಾ?
ಈ ಮಹಿಳೆ ನಿಜಕ್ಕೂ ಮರೆತು ಮಗುವನ್ನು ಬಿಟ್ಟಳೋ ಅಥವಾ ಉದ್ದೇಶಪೂರ್ವಕವಾಗಿ ಬಿಟ್ಟು ಬಂದಿದ್ದಳೋ ಎನ್ನುವ ಸಂದೇಹ ನೆಟ್ಟಿಗರಿಗೆ ಉಂಟು ಮಾಡುತ್ತಿದೆ. ಏಕೆಂದರೆ ತಾಯಿಯಾದವಳು ತನ್ನ ಜೊತೆ ತಂದಿದ್ದ ಹಣ, ಚಿನ್ನಗಳನ್ನಾದರೂ ಮರೆತು ಬರಬಹುದೇನೋ, ಆದರೆ ಹೆತ್ತ ಮಗುವನ್ನು ತನ್ನ ಜೊತೆ ಕರೆದುಕೊಂಡು ಬಂದಿರುವುದನ್ನೇ ಮರೆಯಲು ಎಂದಾದರೂ ಸಾಧ್ಯವೆ ಅಥ್ವಾ ಈಕೆ ಅಷ್ಟೊಂದು ಬೇಜವಾಬ್ದಾರಿಯ ತಾಯಿಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ದೇವರಂತೆ ಬಂದು ಆ ಮಗುವನ್ನು ಕಾಪಾಡಿದವನಿಗೆ ಆ ತಾಯಿ ಧನ್ಯವಾದ ಸಲ್ಲಿಸಿದಳೋ ಗೊತ್ತಿಲ್ಲ, ಆದರೆ ನೆಟ್ಟಿಗರು ಮಾತ್ರ ಕೋಟಿ ಕೋಟಿ ನಮನ ಹೇಳುತ್ತಿದ್ದಾರೆ.


