ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 30,000 ರೂಪಾಯಿ ಸಾಲದ ವಿಚಾರವಾಗಿ 21 ದಿನದ ಹಸುಗೂಸನ್ನು ಅಪಹರಿಸಲಾಗಿತ್ತು. ಆದರೆ, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎರಡು ಗಂಟೆಯೊಳಗೆ ಮಗುವನ್ನು ರಕ್ಷಿಸಿ ತಾಯಿಯ ಬಳಿಗೆ ತಲುಪಿಸಿದ್ದಾರೆ.

ಹೈದರಾಬಾದ್: ಸಾಲದ ಹಣ ತೀರಿಸಲಿಲ್ಲ ಎಂಬ ಕಾರಣಕ್ಕೆ ಕೇವಲ 21 ದಿನದ ಹಸುಗೂಸನ್ನು ಕಿಡ್ನ್ಯಾಪ್ ಮಾಡಿದ ಅಮಾನುಷ ಕೃತ್ಯ ಹೈದರಾಬಾದ್‌ನ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಹಣದ ದಾಹಕ್ಕಾಗಿ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಘಟನೆಯ ವಿವರ

ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಾನ್ ನಗರದಲ್ಲಿ ಘಟನೆ ನಡೆದಿದೆ. ಅನಿತಾ ಮತ್ತು ಆಕೆಯ ಪತಿ ರಾಘವೇಂದ್ರ ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದ ಅವಶ್ಯಕತೆಗಾಗಿ ಹಫೀಜ್‌ಪೇಟ್ ನಿವಾಸಿ ಮಂಜುಳಾ ಎಂಬಾಕೆಯಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ಮರಳಿ ನೀಡುವ ವಿಚಾರದಲ್ಲಿ ಇತ್ತಂಡಗಳ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಸೋಮವಾರ ಮಂಜುಳಾ ಪರವಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಆಟೋದಲ್ಲಿ ಅನಿತಾ ಅವರ ಮನೆಗೆ ಬಂದಿದ್ದಾರೆ. ಸಾಲದ ಹಣಕ್ಕಾಗಿ ವಾಗ್ವಾದ ನಡೆಸಿದ ಅವರು, ಕೊನೆಗೆ ಮನೆಯಲ್ಲಿದ್ದ 21 ದಿನದ ಹಸುಗೂಸನ್ನು ಬಲವಂತವಾಗಿ ಎತ್ತುಕೊಂಡು ಹೋಗಿದ್ದಾರೆ. ತನ್ನ ಮಗುವನ್ನು ಬಿಟ್ಟುಬಿಡಿ ಎಂದು ಅನಿತಾ ಕಿಡ್ನ್ಯಾಪರ್‌ಗಳ ಕಾಲು ಹಿಡಿದು ಬೇಡಿಕೊಂಡರೂ, ಆಕೆಯನ್ನು ಪಕ್ಕಕ್ಕೆ ತಳ್ಳಿ ಮಗುವಿನೊಂದಿಗೆ ಪರಾರಿಯಾಗಿದ್ದಾರೆ.

ಮಗು ಅಪಹರಣಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೇಂದ್ರನಗರ ಪೊಲೀಸರು ಅಲರ್ಟ್ ಆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಪೊಲೀಸರ ಸಮಯಪ್ರಜ್ಞೆ ಮತ್ತು ಚುರುಕಿನ ಕಾರ್ಯಾಚರಣೆಯಿಂದಾಗಿ ಕೇವಲ ಎರಡು ಗಂಟೆಗಳ ಒಳಗಾಗಿ ಮಗುವನ್ನು ಪತ್ತೆ ಹಚ್ಚಲಾಯಿತು.

ಅಪಹರಣಕಾರರ ಕಪಿಮುಷ್ಠಿಯಿಂದ ಮಗುವನ್ನು ರಕ್ಷಿಸಿದ ಪೊಲೀಸರು, ತಾಯಿ ಅನಿತಾ ಅವರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಕಳೆದುಹೋಗಿದ್ದ ಮಗು ಮರಳಿ ಕೈಗೆ ಸಿಗುತ್ತಿದ್ದಂತೆಯೇ ತಾಯಿ ಮತ್ತು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ಕೇವಲ 30 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಹಸುಗೂಸನ್ನು ಅಪಹರಿಸಿದ ಆರೋಪಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಜುಳಾ ಸೇರಿದಂತೆ ಕಿಡ್ನ್ಯಾಪ್‌ನಲ್ಲಿ ಭಾಗಿಯಾದ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಣದ ವಿವಾದ ಏನೇ ಇದ್ದರೂ ಇಂತಹ ಅಮಾನುಷ ಕೃತ್ಯ ಎಸಗುವುದು ಕ್ಷಮಾರ್ಹವಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.