ತಮಿಳುನಾಡಿನ ಹಸನೂರು ಅರಣ್ಯ ವ್ಯಾಪ್ತಿಗೆ ಸೇರಿದ ಪ್ರದೇಶವೊಂದರಲ್ಲಿ ಆನೆಗಳನ್ನು ಕೆಣಕಲು ಹೋಗಿ ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದಾರೆ.
ಆನೆಗಳು ತಮ್ಮನ್ನು ಕೆರಳಿಸದ ಹೊರತು ಅವುಗಳೇ ದಾಳಿ ಮಾಡಲು ಹೋಗುವುದು ತೀರಾ ಕಡಿಮೆ. ಮದವೇರಿದ ಸಮಯದ ಹೊರತಾಗಿ ಆನೆಗಳು ತಾವಾಗಿಯೇ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಸುಮ್ಮನಿದ್ದ ಅವುಗಳನ್ನು ಕೆರಳಿಸಿದರೆ ಕತೆ ಮುಗಿತು. ಆನೆಗಳು ಶಾಂತವಾಗಿರುವಾಗ ಎಷ್ಟು ಚೆಂದವೂ ಸಿಟ್ಟುಗೊಂಡಾಗ ಅಷ್ಟೇ ಅಪಾಯಕಾರಿ. ನಗರೀಕರಣದ ಪ್ರಭಾವದಿಂದಾಗಿ ಈ ಆನೆ ಕಾರಿಡಾರ್‌ಗಳಲ್ಲಿ ಮನುಷ್ಯರ ವಾಹನಗಳ ಸಂಚಾರ ಹೆಚ್ಚಾಗಿದ್ದು, ಇದರ ಪರಿಣಾಮ ಆಗಾಗ ಆನೆ ಹಾಗೂ ಮಾನವರ ನಡುವೆ ಸಂಘರ್ಷಗಳು ಹೆಚ್ಚಾಗಿವೆ. ಆನೆಗಳು ಪ್ರಾಣಭಯದಿಂದ ಬದುಕುತ್ತಿವೆ.
ಆನೆಗಳನ್ನು ಕೆರಳಿಸಬೇಡಿ ಎಂದು ಅರಣ್ಯ ಇಲಾಖೆ (Forest Department) ಹಾಗೂ ಪರಿಸರ ತಜ್ಞರು ಸಾರ್ವಜನಿಕರಿಗೆ ಆಗಾಗ ಅರಿವು ಮೂಡಿಸುತ್ತಲೇ ಇರುತ್ತಾರೆ. ಆದಾಗ್ಯೂ ಜನರು ಮಾತ್ರ ಸುಮ್ಮನಿರುವುದಿಲ್ಲ. ಹೀಗೆಯೇ ತಮಿಳುನಾಡಿನ ಹಸನೂರು ಅರಣ್ಯ ವ್ಯಾಪ್ತಿಗೆ ಸೇರಿದ ಪ್ರದೇಶವೊಂದರಲ್ಲಿ ಆನೆಗಳನ್ನು ಕೆಣಕಲು ಹೋಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಜೊತೆಗೆ ವಾಹನ ಸವಾರರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಜಗತ್ತಿನಲ್ಲಿ ಯಾರಿಗಿದೆ ಈ ರೀತಿಯ Z++++ ಭದ್ರತೆ: ಆನೆ ಹಿಂಡಿನ ವಿಡಿಯೋ ನೋಡಿ
ನೋಡುಗರ ಭೀಕರ ವರ್ತನೆಯ ನಂತರ ಆನೆಗಳ ಹಿಂಡು ಕೋಪಗೊಳ್ಳುವ ದೃಶ್ಯ ಇದಾಗಿದೆ. ಕಾಡಿನ ಮಧ್ಯೆ ಸಾಗುವ ಟಾರ್ ರೋಡಿನ ಮೇಲೆ ಎರಡು ದೈತ್ಯ ಆನೆಗಳು ಅವುಗಳ ಪುಟ್ಟ ಮರಿಗಳೊಂದಿಗೆ ರಸ್ತೆ ದಾಟಲು ರಸ್ತೆಗೆ ಏರಿವೆ. ಈ ವೇಳೆ ರಸ್ತೆಯಲ್ಲಿ ವಾಹನಗಳು ಇದ್ದು, ಆನೆಗಳನ್ನು ಸಮೀಪಿಸುವಷ್ಟು ಹತ್ತಿರಕ್ಕೆ ವಾಹನಗಳು ಬಂದು ನಿಂತಿವೆ. ಮತ್ತೆ ಸಾಲು ಸಾಲು ವಾಹನಗಳಿದ್ದು, ಅವುಗಳಲ್ಲಿರುವ ಜನರು ಬೊಬ್ಬೆ ಹಾಕುತ್ತಿರುವುದಲ್ಲದೇ ಆನೆಗಳ ಫೋಟೋ ತೆಗೆಯಲು ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಆನೆಗಳು ದಾಳಿ ನಡೆಸಲು ಮುಂದಾಗಿವೆ.
ಒಂದು ಕಾರಿನ ಮೇಲೆ ದಾಳಿ ನಡೆಸಲು ಆನೆ ಮುಂದಾಗಿದ್ದು, ಅದನ್ನು ಒಂದು ಭಾಗಕ್ಕೆ ತಿರುಗಿಸುತ್ತದೆ. ಕೂಡಲೇ ಕಾರು ಚಾಲಕ ಕಾರಿನಿಂದ ಇಳಿದು ಓಡುತ್ತಾನೆ. ಇತರ ವಾಹನ ಸವಾರರು ತಮ್ಮ ವಾಹನಗಳನ್ನು ಹಿಂದೆ ಹಿಂದೆ ಚಲಾಯಿಸುತ್ತಿದ್ದಾರೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ (IAS Officer) ಸುಪ್ರಿಯಾ ಸಾಹು (Supriya Sahu) ಅವರು ಟ್ವಿಟರ್‌ನಲ್ಲಿ (twitter) ಹಂಚಿಕೊಂಡಿದ್ದಾರೆ. 'ಕೆಲವು ಮೂರ್ಖ ಪ್ರೇಕ್ಷಕರಿಂದ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಮತ್ತು ಅನಾಗರಿಕ ವರ್ತನೆ ಎಂದು ಅವರು ಬರೆದಿದ್ದಾರೆ. ಈ ಆನೆಗಳು ಸೌಮ್ಯವಾಗಿರುವ ಕಾರಣ, ಅವರು ಈ ಅಸಭ್ಯವಾಗಿ ವರ್ತಿಸುವವರೊಂದಿಗೆ ಉದಾರವಾಗಿ ವರ್ತಿಸುತ್ತಿದ್ದಾರೆ. ಇಲ್ಲದಿದ್ದರೆ ಈ ಸೌಮ್ಯವಾಗಿರುವ ದೈತ್ಯ ಜೀವಿಗಳು ತಮ್ಮ ಶಕ್ತಿಯನ್ನು ತೋರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ' ಎಂದು ಅವರು ಬರೆದಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿಯಾನೆಯ ರಕ್ಷಿಸಿದ ತಾಯಿ ಆನೆ
ಈ ವೀಡಿಯೊವನ್ನು 8,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನೂರಾರು ಜನರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಪ್ರಯಾಣಿಕರ ವರ್ತನೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾದುಹೋಗುವವರೆಗೂ ಅವರು ಕಾಯಬೇಕಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವಾಗಲೂ ಹಿಮ್ಮುಖವಾಗಿರಿ ಮತ್ತು ಪ್ರಾಣಿಗಳು ಹಾದು ಹೋಗುವವರೆಗೆ ಕಾಯಿರಿ ಏಕೆಂದರೆ ಅವುಗಳ ಆವಾಸಸ್ಥಾನದಲ್ಲಿ ಹೋಗಿರುವವರು ನಾವು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.