ಹೈದರಾಬಾದ್ (ನ. 12): ಶಾಲೆಯೊಂದರಲ್ಲಿ ಮಕ್ಕಳೆಲ್ಲರೂ ಪಾಠ ಕೇಳುತ್ತಿರುವಾಗ ಬಾಗಿಲಿನ ಹೊರಗಡೆ ಹಸಿದ ಮಗುವೊಂದು ಖಾಲಿ ತಟ್ಟೆಯನ್ನು ಹಿಡಿದು ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಯೋಧ್ಯೆ ತೀರ್ಪಿಗಾಗಿ 27 ವರ್ಷಗಳಿಂದ ಊಟ ತ್ಯಜಿಸಿದ್ದ ಶಿಕ್ಷಕಿ!

ಇದರ ಪರಿಣಾಮವಾಗಿ ಆ ಮಗು ಈಗ ಅದೇ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡಿದೆ. ಹೈದರಾಬಾದ್‌ನ ಗುಡಿಮಲಕಪುರದಲ್ಲಿರುವ ದೇವಲ್ ಜಾಮ್ ಸಿಂಗ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟದ ಬಳಿಕ ಅಳಿದುಳಿದ ಆಹಾರವನ್ನು ತಿನ್ನುವ ಸಲುವಾಗಿ ಮೋತಿ ದಿವ್ಯಾ ಎಂಬ ಮಗು ಶಾಲೆಗೆ ಬರುತ್ತಿದ್ದಳು. ಆಕೆ ಕೊಠಡಿಯ ಹೊರಗಡೆ ಖಾಲಿ ಪಾತ್ರೆ ಹಿಡಿದು ಒಳಗೆ ನೋಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅವುಲಾ ಶ್ರೀನಿವಾಸ್, ‘ಹಸಿವಿನ ನೋಟ’ ಎಂಬ ಶೀರ್ಷಿಕೆ ನೀಡಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.

ಅದನ್ನು ಗಮನಿಸಿದ ಹೆಣ್ಣು ಮಕ್ಕಳ ಹಕ್ಕಿಗಾಗಿ ಕಾರ್ಯನಿರ್ವಹಿಸುತ್ತಿವ ಎಂ.ವಿ. ಫೌಂಡೇಶನ್‌ನ ರಾಷ್ಟ್ರೀಯ ಸಂಚಾಲಕ ವೆಂಕಟ್ ರೆಡ್ಡಿ, ಚಿತ್ರವನ್ನು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಮಗು ಏಕೆ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡಿಲ್ಲ ಮತ್ತು ಶಿಕ್ಷಣ ಹಕ್ಕಿನಿಂದ ಏಕೆ ವಂಚಿತವಾಗಿದೆ ಎಂದು ಪ್ರಶ್ನಿಸಿದ್ದರು. ಈ ಪೋಟೋಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸ್ಪಂದನೆ ವ್ಯಕ್ತವಾ ಗಿದೆ. ಸಾಮಾಜಿಕ ಕಾರ್ಯಕರ್ತರು, ಸ್ಥಳೀಯರು ಮಗುವಿನ ಪೋಷಕರನ್ನು ಗುರುತಿಸಿ ಶಾಲೆಗೆ ಸೇರಿಸಿದ್ದಾರೆ.