ಬೆಲ್ಜಿಯಂನಿಂದ ಬಂದಿರುವ 200 ಟನ್ ತೂಕದ ಬೃಹತ್ ಯಂತ್ರವನ್ನು 308 ಚಕ್ರಗಳ 'ಬಾಹುಬಲಿ' ಟ್ರಕ್ ಒಡಿಶಾದಿಂದ ಉತ್ತರಪ್ರದೇಶಕ್ಕೆ ಹೊತ್ತೊಯ್ಯುತ್ತಿದೆ. 60 ಜನರ ತಂಡದೊಂದಿಗೆ ದಿನಕ್ಕೆ ಕೇವಲ 15-20 ಕಿ.ಮೀ ಚಲಿಸುವ ಈ ಟ್ರಕ್ ಸಾಗಲು ಸೇತುವೆ, ಮರ ಹಾಗೂ ಕಂಬಗಳನ್ನು ತೆರವುಗೊಳಿಸಲಾಗುತ್ತಿದೆ.
ಲಖನೌ: ಒಡಿಶಾದಿಂದ ಉತ್ತರಪ್ರದೇಶದ ಬಲರಾಂಪುರಕ್ಕೆ ಹೋಗುವ ದಾರಿಯಲ್ಲಿ, ಕಾಲ್ನಡಿಗೆಯ ವೇಗದಲ್ಲಿ ಸಾಗುತ್ತಿರುವ 308 ಚಕ್ರದ ‘ಬಾಹುಬಲಿ’ ಟ್ರಕ್ ಹಾಗೂ ಅದರ ಮೇಲಿರುವ 200 ಟನ್ ತೂಕದ ಯಂತ್ರ ಜನರ ಗಮನ ಸೆಳೆಯುತ್ತಿದೆ. ಸಕ್ಕರೆ ಕಾರ್ಖಾನೆಯ ಕೈಗಾರಿಕಾ ಸಂಸ್ಕರಣೆ ಮತ್ತು ಉಪ-ಉತ್ಪನ್ನಗಳ ನಿರ್ವಹಣೆಗಾಗಿ ಬಳಸಲು ಉದ್ದೇಶಿಸಲಾಗಿರುವ ಈ ಭಾರೀ ಯಂತ್ರವು ಬೆಲ್ಜಿಯಂನಿಂದ ಒಡಿಶಾದ ಪಾರಾದೀಪ್ ಬಂದರಿಗೆ ಬಂದಿದ್ದು, ಅಲ್ಲಿಂದ ರಸ್ತೆಯ ಮಾರ್ಗವಾಗಿ ಲಖಿಂಪುರ್ ಖೇರಿಯತ್ತ ಸಾಗಿದೆ.
ಈ ಬೃಹತ್ ಯಂತ್ರದ ಸುಸೂತ್ರ ಪ್ರಯಾಣವನ್ನು ಖಚಿತಪಡಿಸುವ ಜವಾಬ್ದಾರಿಯನ್ನು 60 ಜನರಿಗೆ ವಹಿಸಲಾಗಿದೆ. 7 ಮೀಟರ್ ಅಗಲ ಹಾಗೂ 41 ಮೀಟರ್ ಉದ್ದದ ಯಂತ್ರವನ್ನು ಹೊತ್ತು 5 ತಿಂಗಳ ಹಿಂದೆ ಒಡಿಶಾದಿಂದ ಹೊರಟಿರುವ ಟ್ರಕ್, ದಿನಕ್ಕೆ 200 ಲೀಟರ್ ಡೀಸೆಲ್ ಕುಡಿಯುತ್ತಾ 15-20 ಕಿ.ಮೀ. ವೇಗದಲ್ಲಿ ಜಾರ್ಖಂಡ್, ಬಿಹಾರ ದಾಟಿ ಉತ್ತರಪ್ರದೇಶ ತಲುಪಿದೆ.
ಬಾಹುಬಲಿಗೆ ದಾರಿ ಬಿಡಿ:
ತೂಕದ ಕಾರಣದಿಂದಾಗಿ ನಿಧಾನವಾಗಿ ಚಲಿಸುತ್ತಿರುವ ಈ ಟ್ರಕ್ ಸಾಗುವ ಹಾದಿಯಲ್ಲಿ, ಅಗತ್ಯವಾದ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಬಿಹಾರದ ಕೈಮೂರ್‌ನಲ್ಲಿರುವ ಪಾದಚಾರಿ ಮೇಲ್ಸೇತುವೆಯನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಚಂದೌಲಿಯಲ್ಲಿ, ಟ್ರಕ್‌ಅನ್ನು ತಿರುಗಿಸಲು ಪರ್ಯಾಯ ಮಾರ್ಗವನ್ನು ಬಳಸಲಾಯಿತು.
ಒಂದು ಕಡೆ ಅದರ 6 ಚಕ್ರಗಳು ಮಣ್ಣಲ್ಲಿ ಹೂತುಹೋದ ಘಟನೆಯೂ ನಡೆದಿದೆ. ಉಳಿದಂತೆ ವಿದ್ಯುತ್ ಕಂಬಗಳು, ಮರಗಳು ಮತ್ತು ತಂತಿಗಳ ತೆರವು ಸಾಮಾನ್ಯವಾಗಿದೆ. ಜನ ಈ ಟ್ರಕ್ ನೋಡಲು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ, ಟ್ರಕ್ ಮುಂದೆ ಸೆಲ್ಫಿ ತೆಗೆದುಕೊಳ್ಳುವ ದೃಶ್ಯಗಳು ಹಲವೆಡೆ ಕಂಡುಬಂದಿದೆ.
ಇದನ್ನೂ ಓದಿ: ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಮಲಗಿದ ಯುವತಿ, ಮತ್ತೆ ಜೋಂಬಿ ಡ್ರಗ್ಸ್ ವಾಸನೆ; ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಆಕ್ರೋಶ


