ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ದಿನಗಳ ಆಚರಣೆ ಬಗ್ಗೆ ವಿಜಯ್‌ಗಿರುವ ಭಿನ್ನ ಅಭಿಪ್ರಾಯ..

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಸದ್ಯ ತಮ್ಮ ಮುಂಬರುವ ಸಿನಿಮಾ ‘ರಣಬಾಲಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮದುವೆಯಾಗಿರುವ ಈ ಜೋಡಿ ಸಿನಿಮಾ ಪ್ರಮೋಷನ್‌ಗಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಅವರ ನಡುವಿನ ಮಾತುಕತೆ ಹಾಗೂ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಸುಧೀರ್ ಶ್ರೀನಿವಾಸನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವಾರ್ಷಿಕೋತ್ಸವ, ತಿಂಗಳ ಸಂಭ್ರಮ ಸೇರಿದಂತೆ ವಿಶೇಷ ದಿನಗಳನ್ನು ಆಚರಿಸುವ ವಿಚಾರದಲ್ಲಿ ಇಬ್ಬರ ಅಭಿಪ್ರಾಯ ಹೇಗೆ ಭಿನ್ನವಾಗಿದೆ ಎಂಬುದನ್ನು ರಶ್ಮಿಕಾ ಬಹಿರಂಗಪಡಿಸಿದ್ದಾರೆ.

ವಿಶೇಷ ದಿನಗಳನ್ನು ಆಚರಿಸುವ ವಿಚಾರದಲ್ಲಿ ವಿಜಯ್ ಹೇಗೆ?

ಆ್ಯನಿವರ್ಸರಿ, ಮಂತ್‌ವರ್ಸರಿ ಸೇರಿದಂತೆ ಪ್ರತಿಯೊಂದು ವಿಶೇಷ ದಿನವನ್ನೂ ಆಚರಿಸುವ ವ್ಯಕ್ತಿ ವಿಜಯ್ ದೇವರಕೊಂಡ ಅಲ್ಲ ಎಂದು ರಶ್ಮಿಕಾ ಹೇಳಿದ್ದಾರೆ. ಇಂತಹ ದಿನಗಳಿಗೆ ವಿಜಯ್ ಹೆಚ್ಚು ಮಹತ್ವ ನೀಡುವುದಿಲ್ಲ. ಪ್ರತಿತಿಂಗಳು ಅಥವಾ ಪ್ರತಿಯೊಂದು ಸಂದರ್ಭವನ್ನೂ ವಿಶೇಷವಾಗಿ ಆಚರಿಸುವ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ. ಆದರೆ ರಶ್ಮಿಕಾ ಬಗ್ಗೆ ಮಾತನಾಡುವಾಗ ವಿಜಯ್ ದೇವರಕೊಂಡ ನೀಡಿದ ಉತ್ತರ ಮಾತ್ರ ಗಮನ ಸೆಳೆಯುವಂತಿತ್ತು. ಅವರು ನನ್ನ ಜೀವನಕ್ಕೆ ಸಂಭ್ರಮವನ್ನು ತಂದಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.

‘ಅವರು ಹಿಸ್ಟರಿ, ಲಾಜಿಕ್, ಸೈನ್ಸ್ ವ್ಯಕ್ತಿ’

ಇದೇ ವೇಳೆ ವಿಜಯ್ ದೇವರಕೊಂಡ ಅವರ ವ್ಯಕ್ತಿತ್ವದ ಬಗ್ಗೆಯೂ ರಶ್ಮಿಕಾ ಆಸಕ್ತಿದಾಯಕವಾಗಿ ಮಾತನಾಡಿದ್ದಾರೆ. ಅವರು ಹಿಸ್ಟರಿ ವ್ಯಕ್ತಿ. ಲಾಜಿಕ್ ವ್ಯಕ್ತಿ. ಸೈನ್ಸ್ ವ್ಯಕ್ತಿ. ಎಲ್ಲದರ ಬಗ್ಗೆಯೂ ಕುತೂಹಲ ಹೊಂದಿರುವ ವ್ಯಕ್ತಿ ಎಂದು ರಶ್ಮಿಕಾ ವಿಜಯ್ ಅವರನ್ನು ವಿವರಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ತಮ್ಮ ಸ್ವಭಾವವನ್ನು ವಿವರಿಸಿದ ರಶ್ಮಿಕಾ, ನಾನು ಒಂದು ರೀತಿಯಲ್ಲಿ ಎಮೋ ಗರ್ಲ್ ಎಂದು ಹೇಳಿದ್ದಾರೆ.

ನಟನೆಯ ಬಗ್ಗೆ ಬಂದ ಟೀಕೆಗಳಿಗೂ ರಶ್ಮಿಕಾ ಉತ್ತರ

ತಮ್ಮ ನಟನಾ ವೃತ್ತಿಜೀವನದಲ್ಲಿ ಎದುರಿಸಿದ ಟೀಕೆಗಳ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದಾರೆ. ಕೆಲವರು ತಮ್ಮನ್ನು ಉತ್ತಮ ನಟಿಯಲ್ಲ ಎಂದು ಟೀಕಿಸಿದ್ದಾರೆ ಎಂದು ಹೇಳಿದ ಅವರು, ಒಬ್ಬ ನಟನ ಅಭಿನಯದ ಮೇಲೆ ನಿರ್ದೇಶಕರ ಪಾತ್ರವೂ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ನಟ ಯಾವಾಗಲೂ ನಿರ್ದೇಶಕರ ಮೇಲೆ ಅವಲಂಬಿತರಾಗಿರುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ. ಒಂದು ಪಾತ್ರವನ್ನು ಹೇಗೆ ಬರೆಯಲಾಗಿದೆ ಎಂಬುದೂ ನಟನ ಅಭಿನಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ನಿರ್ದೇಶಕರು ಆ ಪಾತ್ರವನ್ನು ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬುದು ಕೂಡ ಬಹಳ ಮುಖ್ಯ ಎಂದು ಅವರು ವಿವರಿಸಿದ್ದಾರೆ.

‘ಡಿಯರ್ ಕಾಮ್ರೇಡ್’ ನೆನಪಿಸಿಕೊಂಡ ರಶ್ಮಿಕಾ

ವಿಜಯ್ ದೇವರಕೊಂಡ ಜೊತೆಗಿನ ತಮ್ಮ ಎರಡನೇ ಸಿನಿಮಾವಾದ ‘ಡಿಯರ್ ಕಾಮ್ರೇಡ್’ ಬಗ್ಗೆಯೂ ರಶ್ಮಿಕಾ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಿರೀಕ್ಷಿಸಿದ ಮಟ್ಟದ ಕಮರ್ಷಿಯಲ್ ಯಶಸ್ಸು ಪಡೆಯದಿದ್ದರೂ, ಇಂದಿಗೂ ಈ ಚಿತ್ರಕ್ಕೆ ಹಾಗೂ ಅದರ ಪಾತ್ರಗಳಿಗೆ ವಿಶೇಷ ಅಭಿಮಾನಿಗಳಿದ್ದಾರೆ. ವಿಶೇಷವಾಗಿ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದ ಲಿಲ್ಲಿ ಪಾತ್ರವನ್ನು ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ. ಇಂದಿಗೂ ಕೆಲವರು ತಮ್ಮನ್ನು ‘ಲಿಲ್ಲಿ’ ಎಂದೇ ಕರೆಯುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.

ಇಂದಿಗೂ ಜನರು ನನ್ನನ್ನು ಲಿಲ್ಲಿ ಎಂದು ಕರೆಯುತ್ತಾರೆ. ಅದು ಸಣ್ಣ ವಿಷಯವಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಸಿನಿಮಾದ ಪ್ರಮೋಷನ್‌ನಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ. ಇವರ ನಡುವಿನ ಮುಕ್ತ ಮಾತುಕತೆ ಹಾಗೂ ವೈಯಕ್ತಿಕ ವಿಚಾರಗಳ ಹಂಚಿಕೆ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ.