Corona update: ಭಾರತದಲ್ಲಿ ಕೊರೋನಾ ಏರಿಳಿತ, ಪಾಸಿಟಿವ್ ಕೇಸ್ ಏರಿಕೆ, ಸಕ್ರಿಯ ಸಂಖ್ಯೆಯಲ್ಲಿ ಇಳಿಕೆ
* ಭಾರತದಲ್ಲಿ ಕೊರೋನಾ ಏರಿಳಿತ
* ನಿನ್ನೆಗಿಂತ(ನ.23) ಶೇ 22ರಷ್ಟು ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆ
* ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ
ನವದೆಹಲಿ, (ನ.24): ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,283 ಹೊಸ ಕೊರೋನಾ ವೈರಸ್ (Coronavirus) ಪ್ರಕರಣಗಳು ದೃಢಪಟ್ಟಿದ್ದು ನಿನ್ನೆಗಿಂತ(ನ.23) ಶೇ 22ರಷ್ಟು ಕೊರೋನಾ ಪಾಸಿಟಿವ್ ಸಂಖ್ಯೆ (Corona positive Case) ಏರಿಕೆಯಾಗಿದೆ.
ಒಟ್ಟಾರೆ ಸೋಂಕಿತರ ಸಂಖ್ಯೆ 3 ಕೋಟಿ 45 ಲಕ್ಷದ 35 ಸಾವಿರದ 763ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ (Active Cases) ಸಂಖ್ಯೆ ದೇಶದಲ್ಲಿ 1 ಲಕ್ಷದ 11 ಸಾವಿರದ 481ಕ್ಕೆ ಇಳಿಕೆಯಾಗಿದೆ. ಇದು ಕಳೆದ 537 ದಿನಗಳಲ್ಲಿ ಅತಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.
Covid-19 Vaccine:ಎರಡನೇ ಚುಚ್ಚುಮದ್ದು ಚುಚ್ಚಿಸಿಕೊಳ್ಳಿರಿ, ಬಹುಮಾನ ಗೆಲ್ರಿ !
ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ (Deaths) ಸಂಖ್ಯೆ 4 ಲಕ್ಷದ 66 ಸಾವಿರದ 584ಕ್ಕೆ ತಲುಪಿದ್ದು 437 ಮಂದಿ ಹೊಸದಾಗಿ ಮೃತಪಟ್ಟಿದ್ದಾರೆ. ಪ್ರತಿದಿನ ಸೋಂಕಿತರ ಸಂಖ್ಯೆ ಸತತ 47 ದಿನಗಳಿಂದ 20 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದೆ ಹಾಗೂ ಸತತ 150 ದಿನಗಳಿಂದ ಪ್ರತಿದಿನ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.
ಒಟ್ಟಾರೆ ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ 0.32ರಷ್ಟಿದ್ದು, ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.33ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಗರಿಷ್ಠವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ಒಂದು ದಿನದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 2 ಸಾವಿರದ 103ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ ವರ್ಷ 2020ರ ಆಗಸ್ಟ್ 7ರಂದು 20 ಲಕ್ಷ ಗಡಿ ದಾಟಿತ್ತು. ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಗಡಿಯನ್ನು ದಾಟಿತ್ತು.
ನಂತರ 2020ರ ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತ್ತು. ಭಾರತವು ಕಳೆದ ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗೆ ಸೋಂಕಿತರ ಸಂಖ್ಯೆ ತಲುಪಿತ್ತು.
ಮಹಾರಾಷ್ಟ್ರದಲ್ಲಿ 1,40,766, ಕರ್ನಾಟಕ 38,182, ಕೇರಳ 38,045, ತಮಿಳುನಾಡು 36,401, ದೆಹಲಿ 25,095, ಉತ್ತರ ಪ್ರದೇಶ 22,909 ಮತ್ತು ಪಶ್ಚಿಮ ಬಂಗಾಳ 19,407 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 4,66,584 ಸಾವುಗಳು ವರದಿಯಾಗಿವೆ.
3ನೇ ಅಲೆ ಬಗ್ಗೆ ಎಚ್ಚರಿಕೆ
ಲೋಕಲ್ ಸರ್ಕಲ್ ಎನ್ನುವ ಸಂಸ್ಥೆ ಕೊರೊನಾ ಮೂರನೇ ಅಲೆಯ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ. ಜನರು ಇದೇ ರೀತಿ ಅಸಡ್ಡೆ, ಅಜಾಗರೂಕತೆಯಿಂದ ಇದ್ದರೆ, ಈ ಸಾಂಕ್ರಾಮಿಕ ರೋಗ ಮತ್ತೆ ಹರಡುವ ಸಾಧ್ಯತೆಯಿದೆ ಎಂದು ಸರ್ವೇಯಲ್ಲಿ ಎಚ್ಚರಿಸಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ ಜನರು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು, ಮದುವೆಯ ಸೀಸನ್ ಆಗಿರುವುದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಆಹ್ವಾನಿಸದೇ, ಕಾರ್ಯಕ್ರಮ ನಡೆಸಿದರೆ ಉತ್ತಮ ಎನ್ನುವ ಅಂಶ ಸಮೀಕ್ಷೆಯಲ್ಲಿ ಬಂದಿದೆ.
ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ, ಲಸಿಕೆಯ ಮಹತ್ವನ್ನು ಜನರು ಅರಿತಿರುವುದರಿಂದ ಜನ ಜಾಗೃತಿಯ ಅವಶ್ಯಕತೆ ಕಮ್ಮಿಯಾಗುತ್ತಿದೆ. ಇದರ ಜೊತೆಗೆ, ಕೊರೊನಾ ಮಾರ್ಗಸೂಚಿಗಳನ್ನೂ ಕಡೆಗಣಿಸಲಾಗುತ್ತಿದೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೊರೊನಾ ನಿರ್ಬಂಧವನ್ನು ಹಿಂದಕ್ಕೆ ಪಡೆದಿದೆ. ಮಾಸ್ಕ್ ಹಾಕಿಕೊಳ್ಳದೇ ಇರುವುದು, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.