೮ನೇ ವೇತನ ಆಯೋಗದ ಶಿಫಾರಸುಗಳು ೨೦೨೬ರಲ್ಲಿ ಜಾರಿಗೆ ಬರಲಿದ್ದು, ಕೇಂದ್ರ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆಯಿದೆ. ಹಣದುಬ್ಬರ, ಆರ್ಥಿಕ ಸ್ಥಿತಿ ಮತ್ತು ನೌಕರರ ಅಗತ್ಯಗಳನ್ನು ಪರಿಗಣಿಸಿ ಆಯೋಗವು ಶಿಫಾರಸುಗಳನ್ನು ರೂಪಿಸುತ್ತದೆ.

8th Pay Commission: 8ನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾಯುತ್ತಿರುವವರಿಗೆ ಶೀಘ್ರದಲ್ಲೇ ಸಂಬಳ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳದ ನಿರೀಕ್ಷೆಯಿದೆ. ಕೇಂದ್ರ ಸಚಿವ ಸಂಪುಟವು ಈ ವರ್ಷದ ಆರಂಭದಲ್ಲಿ 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದ್ದು, ಇದರ ಶಿಫಾರಸುಗಳು 2025ರ ಅಂತ್ಯದ ವೇಳೆಗೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಯಿದೆ.

8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತೆ?

ಮಿಂಟ್‌ ವರದಿಯ ಪ್ರಕಾರ, 8ನೇ ವೇತನ ಆಯೋಗದ ಶಿಫಾರಸುಗಳು ಜನವರಿ 2026ರಿಂದ ಜಾರಿಗೆ ಬರಬಹುದು. ಆದರೆ, ಇದರ ಅಧಿಕೃತ ಜಾರಿಯ ದಿನಾಂಕವು ಶಿಫಾರಸು ವರದಿ ಸಲ್ಲಿಕೆ ಮತ್ತು ಕೇಂದ್ರ ಸರ್ಕಾರದ ಅನುಮೋದನೆಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಎಲ್ಲವೂ ಯೋಜನೆಯಂತೆ ನಡೆದರೆ, 2027ರ ಆರ್ಥಿಕ ವರ್ಷದಲ್ಲಿ ಈ ಆಯೋಗದ ಶಿಫಾರಸುಗಳು ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಸಂಬಳ ಮತ್ತು ಪಿಂಚಣಿಯಲ್ಲಿ ಎಷ್ಟು ಹೆಚ್ಚಳ?

8ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದ ನಂತರ, ಕೇಂದ್ರ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಶೇ. 30 ರಿಂದ 34ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರದ ಮೇಲೆ ಸುಮಾರು 1.80 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಸಂಬಳ, ಪಿಂಚಣಿ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ.

ಹೆಚ್ಚಳದ ಆಧಾರವೇನು?

ವೇತನ ಆಯೋಗವು ದೇಶದ ಹಣದುಬ್ಬರ, ಆರ್ಥಿಕ ಸ್ಥಿತಿ, ಆರ್ಥಿಕ ಅಸಮಾನತೆ ಮತ್ತು ನೌಕರರ ಅಗತ್ಯತೆಗಳನ್ನು ಪರಿಗಣಿಸಿ ಶಿಫಾರಸುಗಳನ್ನು ರೂಪಿಸುತ್ತದೆ. ಇದರ ಜೊತೆಗೆ, ಬೋನಸ್, ಭತ್ಯೆಗಳು ಮತ್ತು ಇತರ ಸೌಲಭ್ಯಗಳನ್ನೂ ಪರಿಶೀಲಿಸಲಾಗುತ್ತದೆ. ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುತ್ತದೆ ಎಂಬುದು ಗಮನಾರ್ಹ. ಇದಕ್ಕೂ ಮೊದಲು 1946ರಲ್ಲಿ ಮೊದಲ ವೇತನ ಆಯೋಗ ರಚನೆಯಾಗಿತ್ತು.

ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಈ ಆಯೋಗದ ಶಿಫಾರಸುಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಹೆಚ್ಚಳವು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಜೊತೆಗೆ ದೇಶದ ಆರ್ಥಿಕತೆಯ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ.