83 ತೇಜಸ್ ಯುದ್ಧ ವಿಮಾನ ಖರೀದಿ, ಬೆಂಗಳೂರಿನ HALಗೆ ಇದರ ಹೊಣೆ!
83 ತೇಜಸ್ ಯುದ್ಧ ವಿಮಾನ ಖರೀದಿ| 48000 ಕೋಟಿ ರು. ಮೊತ್ತದ ಖರೀದಿಗೆ ಸಂಪುಟ ಅಸ್ತು| ಬೆಂಗಳೂರಿನ ಎಚ್‌ಎಎಲ್‌ಗೆ ಇದರ ಹೊಣೆ| ಈವರೆಗಿನ ಅತಿದೊಡ್ಡ ಸ್ವದೇಶಿ ರಕ್ಷಣಾ ಖರೀದಿ ಒಪ್ಪಂದ
ನವದೆಹಲಿ(ಜ.14): ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಿಂದ 83 ತೇಜಸ್ ಹಗುರ ಯುದ್ಧ ವಿಮಾನಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. 48,000 ಕೋಟಿ ರು. ಮೊತ್ತದ ರಕ್ಷಣಾ ಒಪ್ಪಂದ ಇದಾಗಿದೆ. ಜೊತೆಗೆ ಇದು ಈವರೆಗಿನ ಅತಿದೊಡ್ಡ ದೇಶೀಯ ರಕ್ಷಣಾ ಒಪ್ಪಂದವೆಂಬ ಹಿರಿಮೆಗೂ ಪಾತ್ರವಾಗಿದೆ.
ಬುಧವಾರ ಈ ಘೋಷಣೆ ಮಾಡಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ‘ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಿಂದ ದಿಕ್ಕುಬದಲಿಸಬಲ್ಲ ಒಪ್ಪಂದ ಇದಾಗಲಿದೆ. ತೇಜಸ್ ಲಘು ಯುದ್ಧ ವಿಮಾನಗಳು ಮುಂಬರುವ ವರ್ಷಗಳಲ್ಲಿ ಭಾರತೀಯ ವಾಯುಪಡೆಯ ಬೆನ್ನೆಲುಬಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಾಯುಪಡೆಗಾಗಿ ಸರ್ಕಾರ ಖರೀದಿಸಲು ನಿರ್ಧರಿಸಿರುವ 83 ವಿಮಾನಗಳ ಪೈಕಿ 73 ಸಿಂಗಲ್ ಎಂಜಿನ್ ಮತ್ತು 10 ಡಬಲ್ ಎಂಜಿನ್‌ಗಳದ್ದು. ಹಾಲಿ ಬಳಕೆಯಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾದ ‘ಮಾರ್ಕ್ 1ಎ’ ಮಾದರಿಯದ್ದಾಗಿದ್ದು, ಲಘು ವಿಮಾನಗಳ ಪಟ್ಟಿಯಲ್ಲಿ ವಿಶ್ವದ ಪ್ರಮುಖವಾದುದು ಎಂದೆನ್ನಿಸಿಕೊಳ್ಳಲಿದೆ.
ಈ ವಿಮಾನಗಳ ಖರೀದಿಗೆ 2020ರ ಮಾಚ್‌ರ್‍ನಲ್ಲಿ ರಕ್ಷಣಾ ಖರೀದಿ ಮಂಡಳಿ ಶಿಫಾರಸು ಮಾಡಿತ್ತು. ಇದೀಗ ಅನುಮೋದನೆ ಪಡೆದುಕೊಂಡಿರುವ ಖರೀದಿಗೆ ಫೆಬ್ರವರಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು. ಅದಾದ 3 ವರ್ಷಗಳ ಬಳಿಕ ಯುದ್ಧ ವಿಮಾನಗಳು ವಾಯು ಪಡೆಗೆ ಸೇರ್ಪಡೆ ಆಗಲಿವೆ.
ವಿಮಾನದ ವಿಶೇಷತೆ
* 132 ಮೀ. ವಿಮಾನದ ಉದ್ದ
* 4.4 ಮೀ. ವಿಮಾನದ ಅಗಲ
* 9800 ಕೆಜಿ ಒಟ್ಟು ತೂಕ
* 13500 ಕೆಜಿ ಹೊತ್ತೊಯ್ಯಬಲ್ಲ ಒಟ್ಟು ಸಾಮರ್ಥ್ಯ
* 1980 ಕಿ.ಮೀ. ಪ್ರತಿ ಗಂಟೆಗೆ ಚಲಿಸುವ ವೇಗ
* 3200 ಕಿ.ಮೀ ಸಾಗಬಲ್ಲ ಗರಿಷ್ಠ ದೂರ