Asianet Suvarna News Asianet Suvarna News

ಇತಿಹಾಸದಲ್ಲೇ ಮೊದಲು: ರಾಜ್ಯದ ಮೂವರು ಸೇರಿ ಸಂಸತ್ತಿಂದ ಒಂದೇ ದಿನ ವಿಪಕ್ಷಗಳ 78 ಸದಸ್ಯರು ಸಸ್ಪೆಂಡ್‌!

ಸೋಮವಾರ ಲೋಕಸಭೆಯಲ್ಲಿ 33 ಮಂದಿ ಹಾಗೂ ರಾಜ್ಯಸಭೆಯಲ್ಲಿ 45 ಸಂಸದರು ಅಮಾನತಾಗಿದ್ದಾರೆ. ಒಂದೇ ಅಧಿವೇಶನದಲ್ಲಿ ಇಷ್ಟು ಸಂಸದರನ್ನು ಅಮಾನತು ಮಾಡಿರುವುದು ಸಂಸತ್ತಿನ ಇತಿಹಾಸದಲ್ಲೇ ದಾಖಲೆ ಎಂದು ಹೇಳಲಾಗಿದೆ.

78 mps suspended from parliament on monday 92 in total ash
Author
First Published Dec 19, 2023, 8:27 AM IST | Last Updated Dec 19, 2023, 8:27 AM IST

ನವದೆಹಲಿ (ಡಿಸೆಂಬರ್ 19, 2023): ಕಳೆದ ವಾರ ಲೋಕಸಭೆಯಲ್ಲಿ ನಡೆದ ‘ಹೊಗೆ ಬಾಂಬ್‌’ ದಾಳಿಯ ಭದ್ರತಾಲೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಹಾಗೂ ಗೃಹ ಸಚಿವ ಅಮಿತ್‌ ಶಾ ಈ ಬಗ್ಗೆ ಹೇಳಿಕೆ ನೀಡಬೇಕೆಂದು ಕೋಲಾಹಲ ಎಬ್ಬಿಸಿದ ವಿಪಕ್ಷಗಳ 78 ಸಂಸದರನ್ನು ಉಭಯ ಸದನಗಳ ಮುಖ್ಯಸ್ಥರು ಸೋಮವಾರ ಅಮಾನತು ಮಾಡಿದ್ದಾರೆ. ಕಳೆದ ವಾರ ಇದೇ ಉದ್ದೇಶಕ್ಕೆ ಅಮಾನತಾದ 14 ಸಂಸದರನ್ನೂ ಸೇರಿಸಿದರೆ ಒಟ್ಟು 92 ಸಂಸದರು ಪ್ರಸಕ್ತ ಅಧಿವೇಶನದಿಂದ ಅಮಾನತುಗೊಂಡಂತಾಗಿದೆ.

ಸೋಮವಾರ ಲೋಕಸಭೆಯಲ್ಲಿ 33 ಮಂದಿ ಹಾಗೂ ರಾಜ್ಯಸಭೆಯಲ್ಲಿ 45 ಸಂಸದರು ಅಮಾನತಾಗಿದ್ದಾರೆ. ಒಂದೇ ಅಧಿವೇಶನದಲ್ಲಿ ಇಷ್ಟು ಸಂಸದರನ್ನು ಅಮಾನತು ಮಾಡಿರುವುದು ಸಂಸತ್ತಿನ ಇತಿಹಾಸದಲ್ಲೇ ದಾಖಲೆ ಎಂದು ಹೇಳಲಾಗಿದೆ.

ಇದನ್ನು ಓದಿ: ವಿಪಕ್ಷಕ್ಕೆ ಮತ್ತೊಂದು ಶಾಕ್, 33 ಸಂಸದರು ಲೋಕಸಭೆಯಿಂದ ಅಮಾನತು!

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಲೋಕಸಭೆಯಿಂದ ಸಂಸದರನ್ನು ಅಮಾನತುಗೊಳಿಸುವ ನಿಲುವಳಿ ಮಂಡಿಸಿದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಮತದ ಮೂಲಕ ಅಂಗೀಕಾರ ನೀಡಿದರು. ನಂತರ ಸ್ಪೀಕರ್‌ ಓಂ ಬಿರ್ಲಾ ಅವರು ಅಮಾನತುಗೊಳಿಸಿ ಆದೇಶಿಸಿದರು. ರಾಜ್ಯಸಭೆಯಲ್ಲಿ ಸಭಾಧ್ಯಕ್ಷ ಜಗದೀಪ್‌ ಧನಕರ್‌ ಅವರು ಸಂಸದರನ್ನು ಅಮಾನತುಗೊಳಿಸಿ ಆದೇಶಿಸಿದರು.

ಲೋಕಸಭೆಯಿಂದ 33 ಅಮಾನತು:
ಲೋಕಸಭೆಯಿಂದ ಸೋಮವಾರ 33 ಸಂಸದರನ್ನು ಅಮಾನತು ಮಾಡಲಾಗಿದೆ. ಇವರ ಪೈಕಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಕೂಡ ಸೇರಿದ್ದಾರೆ. 33 ಸಂಸದರಲ್ಲಿ 30 ಮಂದಿಯನ್ನು ಚಳಿಗಾಲದ ಅಧಿವೇಶನದ ಇನ್ನುಳಿದ ಅವಧಿಗೆ ಅಮಾನತು ಮಾಡಿದ್ದರೆ, 3 ಸಂಸದರನ್ನು ಹಕ್ಕುಬಾಧ್ಯತಾ ಸಮಿತಿಯ ನಿರ್ಧಾರ ಬಾಕಿಯುಳಿಸಿಕೊಂಡು ಅಮಾನತು ಮಾಡಲಾಗಿದೆ. ಕಳೆದ ವಾರ ಕೂಡ ಇದೇ ಕಾರಣಕ್ಕೆ ವಿಪಕ್ಷಗಳ 13 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು. ಹೀಗಾಗಿ ಲೋಕಸಭೆಯಿಂದ ಪ್ರಸಕ್ತ ಕಲಾಪದಲ್ಲಿ 46 ಸಂಸದರು ಅಮಾನತುಗೊಂಡಂತಾಗಿದೆ.

ಸಂಸತ್ ದಾಳಿಗೆ ಕೆರಳಿದ ಪ್ರತಿಪಕ್ಷ,ಲೋಕಸಭೆಯಿಂದ 14 ಸಂಸದರ ಅಮಾನತು!

ರಾಜ್ಯಸಭೆಯಿಂದ 45 ಅಮಾನತು:
ರಾಜ್ಯಸಭೆಯಿಂದ ಸೋಮವಾರ 45 ಸಂಸದರನ್ನು ಭದ್ರತಾಲೋಪ ಕುರಿತ ಗದ್ದಲದ ಕಾರಣಕ್ಕೆ ಅಮಾನತು ಮಾಡಲಾಗಿದೆ. ಕಳೆದ ವಾರ ಇದೇ ಕಾರಣಕ್ಕೆ ಒಬ್ಬ ಸಂಸದರನ್ನು ಅಮಾನತು ಮಾಡಲಾಗಿತ್ತು. ಹೀಗಾಗಿ ರಾಜ್ಯಸಭೆಯಿಂದ ಪ್ರಸಕ್ತ ಕಲಾಪದಲ್ಲಿ 46 ಸಂಸದರು ಅಮಾನತುಗೊಂಡಂತಾಗಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ, ಡಿಎಂಕೆಯ ಕನಿಮೋಳಿ ಮತ್ತು ಆರ್‌ಜೆಡಿಯ ಮನೋಜ್ ಕುಮಾರ್ ಝಾ ಅಮಾನತುಗೊಂಡವರಲ್ಲಿ ಸೇರಿದ್ದಾರೆ. ಅಮಾನತಾದವರಲ್ಲಿ 3 ಕರ್ನಾಟಕದ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ಎಲ್‌. ಹನುಮಂತಯ್ಯ ಹಾಗೂ ನಾಸಿರ್‌ ಹುಸೇನ್‌ ಕೂಡ ಇದ್ದಾರೆ.

ಇನ್ನು 45 ಸಂಸದರ ಪೈಕಿ 11 ಜನರ ಹೆಸರನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದೆ. ಹಕ್ಕುಬಾಧ್ಯತಾ ಸಮಿತಿ ವರದಿ ನೀಡುವವರೆಗೆ ಈ 11 ಸಂಸದರು ಕಲಾಪಕ್ಕೆ ಹಾಜರಾಗುವಂತಿಲ್ಲ. ಉಳಿದ 34 ಸಂಸದರು ಈ ಅಧಿವೇಶನದ ಮಟ್ಟಿಗೆ ಕಲಾಪಕ್ಕೆ ಬರುವಂತಿಲ್ಲ.

ಯಾವ ಪಕ್ಷದ ಎಷ್ಟು ಸಂಸದರು?:
ಲೋಕಸಭೆಯಿಂದ ಸೋಮವಾರ ಅಮಾನತುಗೊಂಡವರಲ್ಲಿ 10 ಡಿಎಂಕೆ, 9 ತೃಣಮೂಲ ಕಾಂಗ್ರೆಸ್‌, 8 ಕಾಂಗ್ರೆಸ್‌ ಹಾಗೂ ಐಯುಎಂಎಲ್‌, ಜೆಡಿಯು, ಆರ್‌ಎಸ್‌ಪಿ ಸಂಸದರು ಸೇರಿದ್ದಾರೆ.
ರಾಜ್ಯಸಭೆಯಲ್ಲಿ 19 ಕಾಂಗ್ರೆಸ್‌, 7 ಟಿಎಂಸಿ, 4 ಡಿಎಂಕೆ, 2 ಆರ್‌ಜೆಡಿ, 2 ಜೆಡಿಯು, 3 ಸಿಪಿಎಂ, 2 ಸಿಪಿಐ, ಸಿಪಿಐ, 1 ಎನ್‌ಸಿಪಿ, 2 ಎಸ್‌ಪಿ, 1 ಜೆಎಂಎಂ, 1 ಕೇರಳ ಕಾಂಗ್ರೆಸ್‌(ಎಂ), ಒಬ್ಬ ಸ್ವತಂತ್ರ ಸಂಸದ ಅಮಾನತಾಗಿದ್ದಾರೆ.

ಇದು ಸರ್ವಾಧಿಕಾರ: ಕಾಂಗ್ರೆಸ್‌
ಲೋಕಸಭೆ ಹಾಗೂ ರಾಜ್ಯಸಭೆಯಿಂದ ವಿಪಕ್ಷಗಳ ಸಂಸದರನ್ನು ಅಮಾನತು ಮಾಡಿದ ಕ್ರಮಕ್ಕೆ ವಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ‘ವಿಧ್ವಂಸಕರು ಸಂಸತ್‌ ಭವನಕ್ಕೆ ದಾಳಿ ಮಾಡಿದ ರೀತಿಯಲ್ಲೇ, ಮೋದಿ ಸರ್ಕಾರ ಸಂಸದರನ್ನು ಅಮಾನತು ಮಾಡುವ ಮೂಲಕ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ವಿಪಕ್ಷಗಳೇ ಇಲ್ಲದ ಸಂಸತ್ತು ಈಗ ಯಾವುದೇ ವಿರೋಧವಿಲ್ಲದೆ ಪ್ರಮುಖ ಮಸೂದೆಗಳನ್ನೆಲ್ಲ ಪಾಸು ಮಾಡಿಕೊಳ್ಳಬಹುದು’ ಎಂದು ಪ್ರಹಾರ ನಡೆಸಿದ್ದಾರೆ.

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಮಾತನಾಡಿ, ‘ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ. ಸಂಸತ್ತನ್ನು ಬಿಜೆಪಿಗರು ಪಕ್ಷದ ಕಚೇರಿಯಂತೆ ನಡೆಸುತ್ತಿದ್ದಾರೆ. ಆದರೆ ನಾವು ಚರ್ಚೆಯನ್ನು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಅಮಾನತು ಏಕೆ?
ಡಿಸೆಂಬರ್ 13ರ ಬುಧವಾರ ಲೋಕಸಭೆಯಲ್ಲಿ ‘ಹೊಗೆ ಬಾಂಬ್‌’ ದಾಳಿಯಾಗಿ ಭಾರಿ ಭದ್ರತಾ ಲೋಪ. ಈ ಘಟನೆ ವಿರುದ್ಧ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ. ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕೆಂದು ಕೋಲಾಹಲ ಸೃಷ್ಟಿ. ಹೀಗಾಗಿ ಗದ್ದಲ ನಡೆಸಿದ ಸಂಸದರ ಅಮಾನತು.

ಕರ್ನಾಟಕದ ಮೂವರು ಸಂಸದರೂ ಅಮಾನತು
ರಾಜ್ಯಸಭೆಯಿಂದ 45 ಸದಸ್ಯರು ಅಮಾನತಾಗಿದ್ದು ಅದರಲ್ಲಿ ಕರ್ನಾಟಕದ ಮೂವರು ಕಾಂಗ್ರೆಸ್‌ ಎಂಪಿಗಳೂ ಇದ್ದಾರೆ. ಅವರೆಂದರೆ: ಜಿ.ಸಿ. ಚಂದ್ರಶೇಖರ್‌, ಎಲ್‌. ಹನುಮಂತಯ್ಯ ಹಾಗೂ ನಾಸಿರ್‌ ಹುಸೇನ್‌.

ಪ್ರಜಾಪ್ರಭುತ್ವದ ಮೇಲೆ ದಾಳಿ
ವಿಧ್ವಂಸಕರು ಸಂಸತ್‌ ಭವನಕ್ಕೆ ದಾಳಿ ಮಾಡಿದ ರೀತಿಯಲ್ಲೇ ಮೋದಿ ಸರ್ಕಾರ ಸಂಸದರನ್ನು ಅಮಾನತು ಮಾಡಿದೆ. ಈ ಮೂಲಕ ಸಂಸತ್ತು, ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದೆ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

Latest Videos
Follow Us:
Download App:
  • android
  • ios