ಕೋವಿಡ್ 4ನೇ ಅಲೆ ಭೀತಿ: ಮುಂಬೈನಲ್ಲಿ ದಿಢೀರ್ ಕೊರೋನಾ ಸೋಂಕು ಏರಿಕೆ..!
* ಪಾಸಿಟಿವಿಟಿ ದರ ಶೇ.8.4ಕ್ಕೆ ಜಿಗಿತ
* 739 ಕೇಸು, 4 ತಿಂಗಳ ಗರಿಷ್ಠ
* 100 ದಾಟಿದ ಆಸ್ಪತ್ರೆ ದಾಖಲು ಸಂಖ್ಯೆ
ಮುಂಬೈ(ಜೂ.02): ಭಾರತದಲ್ಲಿ ಜೂನ್‌ನಲ್ಲಿ 4ನೇ ಕೋವಿಡ್ ಅಲೆ ಅಪ್ಪಳಿಸಬಹುದು ಎಂಬ ಮುನ್ಸೂಚನೆ ನಡುವೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್ ಏಕಾಏಕಿ ಹೆಚ್ಚತೊಡಗಿದೆ. ಮಂಗಳವಾರ 506ರಷ್ಟು ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ ಬುಧವಾರ 739ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಪಾಸಿಟಿವಿಟಿ ದರ ಕೂಡ ಮಂಗಳವಾರ ಶೇ.6 ಇದ್ದದ್ದು ಬುಧವಾರ ಶೇ.8.4ಕ್ಕೆ ಏರಿದೆ. ಫೆ.1ರಂದು 803 ಕೋವಿಡ್ ಕೇಸು ದಾಖಲಾಗಿದ್ದವು. ಈಗ ದಾಖಲಾದ 739 ಕೇಸುಗಳು 1 ತಿಂಗಳ ಗರಿಷ್ಠವಾಗಿವೆ.
ಇದಲ್ಲದೆ, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3000 ಸನಿಹಕ್ಕೆ (2,970) ಬಂದಿದೆ ಹಾಗೂ ಬಹುದಿನಗಳ ನಂತರ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 100 ದಾಟಿದೆ. ಉಳಿದವರು ಹೋಮ್ ಐಸೋಲೇಶನ್‌ನಲ್ಲಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಶತಕ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಅಂಶ.
ಬೆಂಗ್ಳೂರಲ್ಲಿ ದಿನೇ ದಿನೆ ಹೆಚ್ಚುತ್ತಿದೆ ಕೊರೋನಾ ಸೋಂಕು..!
ಕಟ್ಟೆಚ್ಚರ:
ಮಳೆಗಾಲ ಆರಂಭದ ಈ ಸಂದರ್ಭದಲ್ಲಿ ಕೋವಿಡ್ ಹೆಚ್ಚುತ್ತಿದ್ದಂತೆಯೇ ನಗರದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ಹಾಗೂ ಮುಂಬೈ ಮಹಾನಗರ ಪಾಲಿಕೆಗಳು ಸೂಚಿಸಿವೆ. ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮಲಾಡ್‌ನಲ್ಲಿರುವ ಆಸ್ಪತ್ರೆ ಬಳಸಿಕೊಳ್ಳಬೇಕು ಎಂದು ಸೂಚಿಸಿವೆ. 12ರಿಂದ 18 ವರ್ಷದ ವಯಸ್ಕರಿಗೆ ಲಸಿಕಾಕರಣ ಪ್ರಾರಂಭಿಸಲು ಮತ್ತು ಬೂಸ್ಟರ್ ಡೋಸ್‌ನ್ನು ಶೀಘ್ರದಲ್ಲಿ ನೀಡುವಂತೆ ಅವು ನಿರ್ದೇಶಿಸಿವೆ.