ಲಖನೌ (ಮೇ.07): ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ನಡೆದ ಪಂಚಾಯತ್‌ ಚುನಾವಣಾ ಕಾರ್ಯಗಳಿಗೆ ನಿಯೋಜಿತರಾಗಿದ್ದ ಸಾವಿರಾರು ಶಿಕ್ಷಕರ ಪೈಕಿ 706 ಶಿಕ್ಷಕರು ಕೋವಿಡ್‌ಗೆ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಸೋಂಕು ಹೆಚ್ಚಿದ್ದ ಏಪ್ರಿಲ್‌ ತಿಂಗಳಿನಲ್ಲಿ 8.69 ಲಕ್ಷ ವಿವಿಧ ಪಂಚಾಯತ್‌ ಹುದ್ದೆಗಳಿಗೆ ಚುನಾವಣೆ ನಡೆಸಲಾಗಿತ್ತು. 4 ಹಂತದಲ್ಲಿ ನಡೆದ ಚುನಾವಣೆಯಲ್ಲಿ 11.5 ಕೋಟಿ ಮತದಾರರು ಮತ ಚಲಾವಣೆ ಹಕ್ಕು ಹೊಂದಿದ್ದರು. ಈ ಚುನಾವಣೆಗೆ ಸಾಕಷ್ಟುವಿರೋಧದ ಹೊರತಾಗಿಯೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ಹೀಗೆ ನಿಯೋಜನೆಗೊಂಡವರ ಪೈಕಿ, ಚುನಾವಣೆ ಮುಗಿದ ಬಳಿಕ 706 ಶಿಕ್ಷಕರು ಕೋವಿಡ್‌ಗೆ ಸಾವನ್ನಪ್ಪಿದ್ದಾರೆ ಎಂದು ಉತ್ತರಪ್ರದೇಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆರೋಪಿಸಿದೆ. ಅಲ್ಲದೆ ಈ ಕುರಿತು ಅದು ರಾಜ್ಯ ಸರ್ಕಾರಕ್ಕೂ ಪತ್ರ ಬರೆದು ತನ್ನ ಅಸಮಾಧಾನ ತೋಡಿಕೊಂಡಿದೆ.

ಯುವಕ ಸಂಗ್ರಹಿಸಿದ ಆಕ್ಸಿಜನ್ ಸಿಲಿಂಡರ್ ಕಸಿದ ಯುಪಿ ಪೊಲೀಸ್; ಆಮ್ಲಜನಕ ಸಿಗದೆ ತಾಯಿ ಸಾವು! ..

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಿರ್ಲಕ್ಷ್ಯತೆಯಿಂದಾಗಿ 706 ಶಿಕ್ಷಕರು ಸಾವಿಗೀಡಾಗಿದ್ದಾರೆ. ಚುನಾವಣೆ ಮೂಲಕ ರಾಜ್ಯ ಮತ್ತು ಆಯೋಗವು ಮಾನವೀಯತೆಯ ಮೇಲೆ ನಡೆದ ಅಪರಾಧವಾಗಿದೆ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶ ತಲುಪಿತು ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ರೈಲು; ಅರ್ಧ ಸಮಸ್ಯೆ ನಿವಾರಣೆ! .

ಮತ್ತೊಂದೆಡೆ ಸಾವಿಗೀಡಾದ ಶಿಕ್ಷಕರ ಕುಟುಂಬಕ್ಕೆ ಹಣಕಾಸು ನೆರವು ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಒತ್ತಾಯಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona