ರೈಲುಗಳಲ್ಲಿ ಜಾಗವಿಲ್ಲ, ವಿಮಾನಗಳು ದುಬಾರಿ, ಹಾಗಾಗಿ ಬಿಹಾರದ ಏಳು ಯುವಕರು ಬೋಟ್‌ನಲ್ಲಿ 550 ಕಿ.ಮೀ. ಸಂಚರಿಸಿ ಪ್ರಯಾಗ್‌ರಾಜ್‌ನ ಕುಂಭಮೇಳ ತಲುಪಿದ್ದಾರೆ. ಗೂಗಲ್ ಮ್ಯಾಪ್ ಬಳಸಿ, ಅಗತ್ಯ ವಸ್ತುಗಳೊಂದಿಗೆ 84 ಗಂಟೆಗಳ ಪ್ರಯಾಣ ಮಾಡಿ ಕುಂಭಮೇಳ ತಲುಪಿದ್ದಾರೆ.
ಉತ್ತರ ಪ್ರದೇಶದ ಮಹಾಕುಂಭ ಮೇಳದಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಹಿಂದೆಂದು ಕಾಣದಷ್ಟು ಸಂಖ್ಯೆಯಲ್ಲಿ ಅಲ್ಲಿ ಜನ ಸೇರಿದ್ದಾರೆ. ಕೋಟ್ಯಾಂತರ ಸಂಖ್ಯೆಯ ಜನ ಈಗಾಗಲೇ ಪುಣ್ಯಸ್ನಾನ ಮಾಡಿ ಪಾವನರಾಗಿದ್ದಾರೆ. ಇನ್ನು ಲಕ್ಷಾಂತರ ಜನ ಕುಂಭ ಮೇಳಕ್ಕೆ ಹೋಗುವ ಉಮೇದಿನಲ್ಲಿದ್ದಾರೆ. ಕುಂಭ ಮೇಳದಿಂದಾಗಿ ಟ್ರಾವೆಲ್ ಏಜೆನ್ಸಿಗಳು ವಿಮಾನಯಾನ ಸಂಸ್ಥೆಗಳು ಸಾಕಷ್ಟು ಹಣ ಮಾಡಿಕೊಳ್ಳುತ್ತಿವೆ. ವಿಮಾನಯಾನ ಸಂಸ್ಥೆಗಳ ದರ ಆಕಾಶಕ್ಕೇರಿದ್ದು, ಉಳ್ಳವರಿಗೆ ಮಾತ್ರ ಎಂಬಂತಾಗಿದೆ. ಮತ್ತೊಂದೆಡೆ ರೈಲುಗಳು ತುಂಬಿ ತುಳುಕುತ್ತಿದ್ದು, ಜನರು ರೈಲಿನಲ್ಲಿ ಕನಿಷ್ಠ ಒಂದು ಕಾಲಿಡಲು ಆಗದಷ್ಟು ಇರುವೆಗಳಂತೆ ಮುತ್ತಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಮೊನ್ನೆ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತವಾಗಿ 18 ಜನ ಸಾವಿಗೀಡಾಗಿರುವುದು ನಿಮಗೆ ಗೊತ್ತೆ ಇದೆ.
ರೈಲಿನಲ್ಲಿ ಜಾಗವಿಲ್ಲ, ವಿಮಾನ ದುಬಾರಿ, ಬಸ್‌ನಲ್ಲಿ ಸಾಧ್ಯವಿಲ್ಲ, ಇವುಗಳಲ್ಲಿ ಹೋದರೂ ನಡೆಯದೇ ವಿಧಿ ಇಲ್ಲ ಎಂಬ ಯಾವುದೇ ಚಿಂತೆ ಇಲ್ಲದೇ ಬೋಟ್‌ನಲ್ಲಿ ಸಂಚರಿಸಿ ಪ್ರಯಾಗ್‌ರಾಜ್ ಸಂಗಮ ಸ್ಥಳವನ್ನು ತಲುಪಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಹೀಗೆ ನದಿಯಲ್ಲೇ ತೀರ್ಥಯಾತ್ರೆ ಮಾಡಿರುವುದು ಬಿಹಾರದ ಏಳು ಯುವಕರು, ಬಿಹಾರದಿಂದ 550 ಕಿಲೋ ಮೀಟರ್ ದೂರದಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಈ ಯುವಕರು ಬೋಟಿಂಗ್ ಮೂಲಕವೇ ಬಂದು ತಲುಪಿದ್ದಾರೆ. ತಮ್ಮ ಬುದ್ಧಿವಂತಿಕೆಯನ್ನು ಬಳಸುವ ಮೂಲಕ 'ಏಕ್ ಬಿಹಾರಿ ಸಬ್ ಸೌ ಪೇ ಬಾರಿ' ಎಂಬುದನ್ನು ನೆನಪಿಸುತ್ತಿದ್ದಾರೆ.
ಅಂದಹಾಗೆ ಈ 7 ಜನರು ಬಿಹಾರದ ಬಕ್ಸರ್ ಜಿಲ್ಲಯ ಕಮ್ಹಾರಿಯಾ ಗ್ರಾಮದವರಾಗಿದ್ದು, ಕುಂಭ ಮೇಳದ ಪವಿತ್ರ ಸ್ಥಳಕ್ಕೆ ಆಗಮಿಸಲು ತಮ್ಮದೇ ವಿಭೀನ್ನ ಮಾರ್ಗವನ್ನು ಕಂಡು ಕೊಂಡರು. ಜನದಟ್ಟಣೆಯಿಂದ ತುಂಬಿದ ರಸ್ತೆಗಳನ್ನು ಬಿಟ್ಟು ಅವರು ಬಕ್ಸಾರ್‌ನಿಂದ ಪ್ರಯಾಗ್‌ರಾಜ್‌ಗೆ 275 ಕಿಲೋಮೀಟರ್ ದೂರ ಗಂಗಾ ನದಿಯಲ್ಲಿಯೇ ಮೋಟಾರ್ ಚಾಲಿತ ದೋಣಿಯ ಮೂಲಕ ಪಯಣ ಬೆಳೆಸಿದರು. ಮನು ಚೌಧರಿ, ಸುಮಂತ್, ಸಂದೀಪ್, ಸುಖದೇವ್, ಆಡು, ರವೀಂದ್ರ ಮತ್ತು ರಮೇಶ್ ಸೇರಿದಂತೆ ವೃತ್ತಿಪರ ಬೋಟ್‌ಮೆನ್‌ಗಳನ್ನು ಒಳಗೊಂಡ ತಂಡ ಫೆಬ್ರವರಿ 11 ರಂದು ಕುಂಭಮೇಳಕ್ಕೆ ತಮ್ಮ ಪ್ರಯಾಣ ಆರಂಭಿಸಿತು, ಅವರಲ್ಲೊಬ್ಬ ಮನು ಅದೇ ದೋಣಿಯನ್ನು ಬಳಸಿಕೊಂಡು ಬಲ್ಲಿಯಾದ ಕೊತ್ವಾ ನಾರಾಯಣಪುರದಲ್ಲಿ ದಿನವೂ ನದಿ ದಾಟಿಸುವ ಕೆಲಸವನ್ನು ಆರಂಭಿಸಿದರು. ಇದರಿಂದ ಅವರಿಗೆ ವ್ಯವಹಾರವೂ ಕುದುರಿದೆ.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಹೆದ್ದಾರಿಯಲ್ಲಿ ಪ್ರಯಾಣಿಸುವವರು ಗೂಗಲ್ ಮ್ಯಾಪ್ ಬಳಸಿಕೊಂಡು ತಮ್ಮ ದಾರಿಯನ್ನು ಅನ್ವೇಷಣೆ ಮಾಡಿದರೆ, ಈ ಗುಂಪು ಕೂಡ ಅದೇ ತಂತ್ರವನ್ನು ಬಳಸಿತು. ಗೂಗಲ್ ಅವರಿಗೆ ರಾತ್ರಿಯ ಕಡು ಕತ್ತಲೆಯಲ್ಲಿ ನದಿಯ ಎಲ್ಲಾ ತಿರುವುಗಳನ್ನು ತೋರಿಸಿ, ಗಂಗಾ ನದಿಯನ್ನು ಯಶಸ್ವಿಯಾಗಿ ಕ್ರಮಿಸಲು ಸಹಾಯ ಮಾಡಿತು.
ಅವರ ನದಿ ಪ್ರಯಾಣವು ಕೇವಲ ಪ್ರಯಾಗ್‌ರಾಜ್ ತಲುಪಲು ಕಂಡುಕೊಂಡ ಒಂದು ಮಾರ್ಗವಾಗಿರಲಿಲ್ಲ, ಬದಲಾಗಿ ಎಚ್ಚರಿಕೆಯಿಂದ ಯೋಜಿಸಿ ಮಾಡಿದ ದಂಡಯಾತ್ರೆಯಾಗಿತ್ತು. ದೋಣಿಯಲ್ಲಿ ಗ್ಯಾಸ್ ಸಿಲಿಂಡರ್, ಸ್ಟೌವ್, ಆಹಾರ ಸಾಮಗ್ರಿಗಳು, ಹೆಚ್ಚುವರಿ ಎಂಜಿನ್ ಮತ್ತು ಇಂಧನ ಮೀಸಲು ಮುಂತಾದ ಅಗತ್ಯ ವಸ್ತುಗಳನ್ನು ಇರಿಸಿಕೊಂಡಿದ್ದರು. ನಂತರ ಸರಿ ಸುಮಾರು 84 ಗಂಟೆಗಳ ಪ್ರಯಾಣಿಸಿ ಅವರು ಕುಂಭ ಮೇಳದ ಸ್ಥಳವನ್ನು ತಲುಪಿದ್ದಾರೆ. ಅವರ ಹಿಂದಿರುಗುವ ಪ್ರಯಾಣವನ್ನು ಪರಿಗಣಿಸಿ ಒಟ್ಟು ಸುಮಾರು 550 ಕಿ.ಮೀ ದೂರವನ್ನು ಅವರು ನದಿಯಲ್ಲಿ ಕ್ರಮಿಸಿದ್ದಾರೆ. 7 ಜನರಿಗೆ ಒಟ್ಟು 20,000 ರೂಪಾಯಿ ವೆಚ್ಚ ಆಗಿದೆ. ಅದೂ ವಿಶೇಷವಾಗಿ ಪೆಟ್ರೋಲ್‌ಗೆ ಆದರೆ ಇವರ ಬುದ್ಧಿವಂತಿಕೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಜನ ಶಹಭಾಷ್ ಹೇಳುತ್ತಿದ್ದಾರೆ.
