ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಿಶ್ವಪ್ರಸಿದ್ಧ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಲನ್ನೇ ಖರೀದಿ ಮಾಡದ ಉತ್ತರಾಖಂಡ ಮೂಲದ ಕಂಪನಿ 68 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ತುಪ್ಪ ನಕಲಿ ಪೂರೈಕೆ ಮಾಡಿತ್ತು.

ನೆಲ್ಲೂರು: ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಿಶ್ವಪ್ರಸಿದ್ಧ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಲನ್ನೇ ಖರೀದಿ ಮಾಡದ ಉತ್ತರಾಖಂಡ ಮೂಲದ ಕಂಪನಿಯೊಂದು ಕಳೆದ 5 ವರ್ಷಗಳಿಂದ ತಿರುಪತಿಗೆ 250 ಕೋಟಿ ರು. ಮೌಲ್ಯದ ಅಂದಾಜು 68 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ತುಪ್ಪ ನಕಲಿ ಪೂರೈಕೆ ಮಾಡಿತ್ತು. ಅದನ್ನು ಬಳಸಿಯೇ ಲಡ್ಡು ತಯಾರಿಸಲಾಗಿತ್ತು ಎಂದು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಹೇಳಿದೆ.

ಕಲಬೆರಕೆ ತುಪ್ಪ ಪ್ರಕರಣದಲ್ಲಿ ನೆಲ್ಲೂರು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಈ ಆಘಾತಕಾರಿ ಅಂಶಗಳಿವೆ. ಪ್ರಕರಣ ಸಂಬಂಧ ಬಂಧಿತ ಅಜಯ್‌ ಕುಮಾರ್‌ ಎಂಬಾತ ಈ ಎಲ್ಲಾ ಅಕ್ರಮದ ಕುರಿತು ಬೆಳಕು ಚೆಲ್ಲಿದ್ದಾನೆ. ಈತ ಉತ್ತರಾಖಂಡ ಮೂಲದ ಕಂಪನಿಗೆ ನಕಲಿ ತುಪ್ಪ ತಯಾರಿಸಲು ಬೇಕಾದ ರಾಸಾಯನಿಕಗಳನ್ನು ಪೂರೈಕೆ ಮಾಡುತ್ತಿದ್ದ.

ವರದಿಯಲ್ಲಿ ಏನಿದೆ?:

ಪಾಮಿಲ್‌ ಜೈನ್‌ ಮತ್ತು ವಿಪುಲ್‌ ಜೈನ್‌ ಎಂಬಿಬ್ಬರು ಉತ್ತರಾಖಂಡದ ಭಗವಾನ್‌ಪುರ ಎಂಬಲ್ಲಿ ಭೋಲಾ ಬಾಬಾ ಆರ್ಗ್ಯಾನಿಕ್‌ ಡೈರಿ ಆರಂಭಿಸಿದ್ದರು. ಈ ಕಂಪನಿ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಗುತ್ತಿಗೆ ಪಡೆದುಕೊಂಡಿತ್ತು. ವಿಚಿತ್ರವೆಂದರೆ ಈ ಸಂಸ್ಥೆ ರೈತರಿಂದ ಒಂದೇ ಒಂದು ಲೀಟರ್ ಕೂಡಾ ಹಾಲು ಖರೀದಿ ಮಾಡುತ್ತಿರಲಿಲ್ಲ. ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾನೇ ತುಪ್ಪ ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿ ತುಪ್ಪ ಪೂರೈಕೆ ಗುತ್ತಿಗೆ ಪಡೆದುಕೊಂಡಿತ್ತು.

ನಕಲಿ ತುಪ್ಪ:

ಅಸಲಿ ತುಪ್ಪದ ರೀತಿಯಲ್ಲೇ ನಕಲಿ ತುಪ್ಪ ತಯಾರಿಸಲು ಈ ಕಂಪನಿ ತಾಳೆ ಎಣ್ಣೆ, ಪಾಮ್‌ ಕೆರ್ನೆಲ್‌ ಆಯಿಲ್‌, ಹೈಡ್ರೋಜೆನೇಟೆಡ್‌ ಕೊಬ್ಬು, ಬೇಟಾ ಕೆರೋಟಿಎನ್‌ ಸಂಯೋಜಕಗಳನ್ನು ಬಳಸುತ್ತಿತ್ತು. ಜೊತೆಗೆ ತುಪ್ಪದ ಪರಿಮಳ ಬರುವ ಸುಗಂಧವನ್ನು ಬಳಸಿ ಅದನ್ನು ನೈಜ ತುಪ್ಪವೆಂದು ಬಿಂಬಿಸುತ್ತಿತ್ತು.

ಯಂತ್ರಗಳಿಗೂ ಮಂಕುಬೂದಿ:

ತಿರುಪತಿಯಲ್ಲಿ ನಕಲಿ ತುಪ್ಪ ಪತ್ತೆಗೆಂದೇ ಅತ್ಯಾಧುನಿಕ ಯಂತ್ರಗಳಿವೆ. ಆದರೆ ಈ ವಂಚಕರು, ಕೆಲವೊಂದು ರಾಸಾಯನಿಗಳನ್ನು ಬಳಸಿಕೊಂಡು, ತುಪ್ಪದಲ್ಲಿನ ಆರ್‌ಎಂ (ರೈಕರ್ಟ್‌ ಮೈಸಲ್‌) ಪ್ರಮಾಣ ಹೆಚ್ಚುವಂತೆ ಮಾಡುತ್ತಿದ್ದರು. ಹೀಗಾಗಿ ಯಂತ್ರಗಳಿಗೂ ಕೂಡಾ ಇದು ನಕಲಿ ತುಪ್ಪವೆಂದು ಪತ್ತೆಯಾಗುತ್ತಿರಲಿಲ್ಲ. ಹೀಗಾಗಿ 5 ವರ್ಷಗಳಿಂದ ಎಗ್ಗಿಲ್ಲದ ನಕಲಿ ತುಪ್ಪ ಪೂರೈಕೆ ಮುಂದುವರೆದುಕೊಂಡು ಬಂದಿತ್ತು.

ನಿಷೇಧಿಸಿದರೂ ಪತ್ತೆ:

ಅಕ್ರಮದ ಹಿನ್ನೆಲೆಯಲ್ಲಿ 2022ರಲ್ಲೇ ಭೋಲಾ ಬಾಬಾ ಕಂಪನಿಯನ್ನು ತಿರುಪತಿ ಲಡ್ಡುಗೆ ತುಪ್ಪ ಪೂರೈಕೆ ಗುತ್ತಿಗೆ ಪಡೆಯುವ ಪ್ರಕ್ರಿಯೆಯಿಂದ ಟಿಟಿಡಿ ಆಡಳಿತ ಮಂಡಳಿ ಹೊರಗೆ ಇಟ್ಟಿತ್ತು. ಆದರೂ ಆಂಧ್ರಪ್ರದೇಶದ ವೈಷ್ಣವಿ ಡೈರಿ, ಉತ್ತರಪ್ರದೇಶದ ಮಾಲ್‌ ಗಂಗಾ ಡೈರಿ, ತಮಿಳುನಾಡಿನ ಎ.ಆರ್‌.ಡೈರಿ ಫುಡ್‌ ಕಂಪನಿಯ ಹೆಸರಿನಲ್ಲಿ ತುಪ್ಪ ಪೂರೈಕೆ ಮಾಡುವ ಕೆಲಸ ಮುಂದುವರೆಸಿಕೊಂಡು ಬಂದಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮತ್ತೆ ಮತ್ತೆ ವಂಚನೆ:

ಕಳೆದ ಜುಲೈನಲ್ಲಿ ಎ.ಆರ್‌.ಡೈರಿ ಪೂರೈಸಿದ 4 ಟ್ಯಾಂಕರ್‌ ತುಪ್ಪ ಕಲಬೆರಕೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಮರಳಿಸಲಾಗಿತ್ತು. ಆದರೆ ಆ ಟ್ಯಾಂಕರ್ ಅನ್ನು ಆಂಧ್ರದ ವೈಷ್ಣವಿ ಡೈರಿ ಸಮೀಪದಲ್ಲೇ ಇರುವ ಕಲ್ಲು ಒಡೆಯುವ ಫ್ಯಾಕ್ಟರಿಗೆ ಕೊಂಡೊಯ್ದು, ಅಲ್ಲಿ ನಕಲಿ ತುಪ್ಪದ ಗುಣಮಟ್ಟ ಹೆಚ್ಚಿಸುವ ಅಕ್ರಮ ಕೆಲಸ ನಡೆಸಿ ಪುನಃ ಅದೇ ತುಪ್ಪವನ್ನು ತಿರುಪತಿಗೆ ಲಡ್ಡು ತಯಾರಿಸಲು ಕಳುಹಿಸಿಕೊಡಲಾಗಿತ್ತು ಎಂಬ ಸ್ಫೋಟಕ ಅಂಶವನ್ನು ಕೂಡಾ ಸಿಬಿಐ ಪತ್ತೆ ಮಾಡಿದೆ.

ಮತ್ತೆ ನಂದಿನಿಗೆ ಮೊರೆ:

ಕರ್ನಾಟಕ ನಂದಿನಿ ತುಪ್ಪ ದುಬಾರಿ ಎಂಬ ಕಾರಣ ನೀಡಿ ಟಿಟಿಡಿ, ತುಪ್ಪ ಖರೀದಿ ನಿಲ್ಲಿಸಿತ್ತು. ಆದರೆ ಹಗರಣ ಬೆಳಕಿಗೆ ಬಂದ ಬಳಿಕ ಮತ್ತೆ ಕರ್ನಾಟಕದ ನಂದಿನಿ ತುಪ್ಪ ಖರೀದಿ ಪ್ರಕ್ರಿಯೆ ಪುನಾರಂಭಿಸಿತ್ತು.