Asianet Suvarna News Asianet Suvarna News

ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ

ಜನನದ ಬಳಿಕ ಮಗು ಮೃತಪಟ್ಟರೂ ಎಲ್ಲ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೂ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುವುದು ಎಂದು ಶನಿವಾರ ಕೇಂದ್ರ ಸರ್ಕಾರ ಘೋಷಿಸಿದೆ. 

60 day special leave for women in case of death of child at birth gvd
Author
First Published Sep 3, 2022, 4:45 AM IST

ನವದೆಹಲಿ (ಸೆ.03): ಜನನದ ಬಳಿಕ ಮಗು ಮೃತಪಟ್ಟರೂ ಎಲ್ಲ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೂ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುವುದು ಎಂದು ಶನಿವಾರ ಕೇಂದ್ರ ಸರ್ಕಾರ ಘೋಷಿಸಿದೆ. ಮೃತ ಮಗು ಜನನ ಅಥವಾ ಮಗುವಿನ ಜನನದ ಬಳಿಕ ಅದು ಮೃತಪಟ್ಟಲ್ಲಿ ತಾಯಿಗಾಗುವ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರಜೆ ನೀಡಲಾಗುವುದು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ತಿಳಿಸಿದೆ.

ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಯು ಈಗಾಗಲೇ ಹೆರಿಗೆ ರಜೆ ಮೇಲಿದ್ದರೆ ಅವರು ಮಗುವಿನ ಮೃತ್ಯುವಿಗಿಂತ ಮೊದಲು ಪಡೆದ ರಜೆಯನ್ನು ಅವರು ಖಾತೆಯಲ್ಲಿದ್ದ ಬೇರೆ ರಜೆಯಾಗಿ ಪರಿವರ್ತಿಸಬೇಕು. ಇದಕ್ಕಾಗಿ ಯಾವುದೇ ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಬಾರದು. ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಬೇಕು. ಅದೇ ರೀತಿ ಮಹಿಳಾ ಸಿಬ್ಬಂದಿ ಮೊದಲೇ ಹೆರಿಗೆ ರಜೆ ಮೇಲಿರದಿದ್ದರೂ ಅವರಿಗೆ ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ ಸೌಲಭ್ಯವನ್ನು ಒದಗಿಸಬೇಕು’ ಎಂದು ಇಲಾಖೆ ಸೂಚಿಸಿದೆ.

Murugha Seer Case; ಹೆಸರಾಂತ ಪತ್ರಕರ್ತ ಪಿ ಸಾಯಿನಾಥ್ ರಿಂದ ಬಸವಶ್ರೀ ಪ್ರಶಸ್ತಿ ವಾಪಸ್

ಮಗು ಹುಟ್ಟಿದ 28 ದಿನಗಳ ಅವಧಿಯಲ್ಲಿ ಮೃತಪಟ್ಟರೆ ಅಥವಾ ಗರ್ಭಧಾರಣೆ 28 ವಾರಗಳ ಬಳಿಕ ಮಗು ಜೀವಂತವಾಗಿರುವ ಯಾವ ಲಕ್ಷಣಗಳಿಲ್ಲದೇ ಜನಿಸಿದರೆ ಅದನ್ನು ಮೃತ ಮಗು ಎಂದು ಪರಿಗಣಿಸಿ ಈ ರಜೆ ಸೌಲಭ್ಯ ಒದಗಿಸಲಾಗುವುದು. ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗೆ 2ಕ್ಕಿಂತ ಕಡಿಮೆ ಜೀವಂತ ಮಕ್ಕಳಿದ್ದಲ್ಲಿ ಹಾಗೂ ಅಧಿಕೃತ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಲ್ಲಿ ಮಾತ್ರ ರಜೆ ಪಡೆಯಲು ಅರ್ಹರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಸರ್ಕಾರಿ ಗುತ್ತಿಗೆ ನೌಕರರಿಗೂ ಹೆರಿಗೆ ರಜೆ ಸೌಲಭ್ಯ ವಿಸ್ತರಣೆ: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಮತ್ತು ಅಂಗ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ (ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಈವರೆಗೆ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಇದ್ದ ಹೆರಿಗೆ ರಜೆಯ ಸೌಲಭ್ಯವನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮಹಿಳಾ ನೌಕರರಿಗೆ ವಿಸ್ತರಿಸಲಾಗಿದೆ. ಏಪ್ರಿಲ್‌ನಿಂದ ಪೂರ್ವಾನ್ವಯವಾಗುವ ರೀತಿ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದಾಗಿದೆ. 

ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆ ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು ಆರು ವಾರಗಳನ್ನು ಮೀರಬಾರದು. ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ದೃಢೀಕರಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮಾತೃತ್ವ ರಜೆಯ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ. ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ. 

KGF ಚಿತ್ರದಿಂದ ಪ್ರೇರಿತಗೊಂಡು 4 ಭದ್ರತಾ ಸಿಬ್ಬಂದಿ ಹತ್ಯೆ, ಕೊಲೆಗಾರ ಬಂಧಿಸಿದ ಪೊಲೀಸರಿಗೆ ಶಾಕ್!

ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಈ ಕುರಿತು ಸ್ವಯಂ-ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಗುತ್ತಿಗೆ ಅವಧಿಯ ವೇಳೆ ಮಾತೃತ್ವ ರಜೆಯ ಮೇಲೆ ತೆರಳಿದಾಗ ಅವರ ಗುತ್ತಿಗೆ ಅವಧಿ ಮುಕ್ತಾಯವಾದರೆ ಅಲ್ಲಿಯವರೆಗೆ ಮಾತ್ರ ರಜೆ ಸೀಮಿತಗೊಂಡಿರುತ್ತದೆ. ಒಂದು ವೇಳೆ ಗುತ್ತಿಗೆ ಅವಧಿ ವಿಸ್ತರಿಸಿದರೆ ಆಗ ಗರಿಷ್ಠ 180 ದಿನಗಳ ಮಾತೃತ್ವ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ. ಈ ಸೌಲಭ್ಯವನ್ನು ಏಪ್ರಿಲ್‌ ತಿಂಗಳಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

Follow Us:
Download App:
  • android
  • ios