ಕೇಂದ್ರ ಸರ್ಕಾರವು ಕಳೆದ 5 ವರ್ಷಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಮಾರುಕಟ್ಟೆಗೆ ತರುವ ಮೂಲಕ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ. ಅಕ್ಟೋಬರ್ 2 ರಿಂದ 31 ರವರೆಗೆ ನಡೆಯುವ ವಿಶೇಷ ಸ್ವಚ್ಛತಾ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಮಾಹಿತಿ ನೀಡಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರಿಂದ ಆರಂಭವಾದ ಈ ಅಭಿಯಾನವು ಈಗ ಯಶಸ್ವಿ ಜನ ಚಳವಳಿಯಾಗಿದೆ.
ದೆಹಲಿ: ಕಸದಿಂದ ರಸ ಎನ್ನುವ ಮಾತು ಕೇಳಿಯೇ ಇರುತ್ತೇವೆ. ಆದರೆ ನಿಜಕ್ಕೂ ತ್ಯಾಜ್ಯಗಳಿಂದ ಸಾವಿರಾರು ಕೋಟಿ ರೂಪಾಯಿ ದುಡಿಯಬಹುದು ಎಂದರೆ ನಂಬುವಿರಾ? ಇದು ಸಾಮಾನ್ಯ ಜನರಿಗೆ ಅಸಾಧ್ಯವಾದ ಮಾತೇ ಬಿಡಿ. ಆದರೆ, ಒಂದು ಸರ್ಕಾರ ಮನಸ್ಸು ಮಾಡಿದರೆ ಹೇಗೆ ತಾಜ್ಯಮುಕ್ತ ಮಾಡುವುದರ ಜೊತೆಗೆ, ಇದೇ ಕಸದಿಂದ ಸಹಸ್ರಾರು ಕೋಟಿ ರೂಪಾಯಿ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ ಕೇಂದ್ರ ಸರ್ಕಾರ. ಕಳೆದ 5 ವರ್ಷಗಳಲ್ಲಿ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಹರಿದು ಬಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ವಿಶೇಷ ಸ್ವಚ್ಛತಾ ಅಭಿಯಾನ 6.0ರ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಈ ವರ್ಷಗಳಲ್ಲಿ ಕಲಿತಿದ್ದೇವೆ; ತ್ಯಾಜ್ಯವು ವ್ಯರ್ಥವಾಗದಂತೆ ತಡೆದು, ಅದನ್ನು ಮಾರುಕಟ್ಟೆಗೆ ತರುವ ಮೂಲಕ ಆದಾಯವನ್ನಾಗಿ ಪರಿವರ್ತಿಸುತ್ತಿದ್ದೇವೆ ಎಂದು ಹೇಳಿದರು.
2014ರಲ್ಲಿ ಚಾಲನೆ
"2014ರಲ್ಲಿ ಪ್ರಧಾನಿಯಾದ ತಕ್ಷಣ, ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದು ಶೀಘ್ರದಲ್ಲೇ ಒಂದು ಜನ ಚಳವಳಿಯಾಗಿ ಮಾರ್ಪಟ್ಟಿತು. ನಾವು ಹಿಂದಿನ ಅನುಭವಗಳನ್ನು ಆಧರಿಸಿ, ಪ್ರತಿ ವರ್ಷವೂ ಇದನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದ ಸಚಿವರು, ಈ ವರ್ಷವೂ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಪ್ರತಿ ವರ್ಷವೂ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯೊಂದಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಆರು ವರ್ಷಗಳ ಚಳವಳಿ
ಕಳೆದ 6 ವರ್ಷಗಳಿಂದ ಒಂದು ತಿಂಗಳ ಕಾಲ ವಿಶೇಷ ಸ್ವಚ್ಛತಾ ಅಭಿಯಾನವನ್ನು ನಡೆಸಬೇಕೆಂದು ನಿರ್ಧರಿಸಲಾಯಿತು. ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ಅಕ್ಟೋಬರ್ 31ರ ಪಟೇಲ್ ಜಯಂತಿ ವರೆಗಿನ ಅವಧಿಯನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಉಪಕ್ರಮವನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಹಿಂದಿನ ಅಭಿಯಾನಗಳಿಂದ ಪಡೆದ ಒಳನೋಟಗಳನ್ನು ಬಳಸಿಕೊಂಡು ಹೊಸ ಆಯಾಮಗಳನ್ನು ಸೇರಿಸಲಾಗುತ್ತದೆ ಎಂದು ಸಚಿವರು ಹೇಳಿದರು.


