ಪ್ರಿನ್ಸಿಪಾಲ್ ಆಯ್ತು ಈಗ, ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ! 500 ವಿದ್ಯಾರ್ಥಿನಿಯರಿಂದ ಮೋದಿ, ಹರ್ಯಾಣ ಸಿಎಂಗೆ ಪತ್ರ
ತಮ್ಮ ಕುಟುಂಬಗಳಿಗೆ ಅಗೌರವದ ಭಯದಿಂದ ತಮ್ಮ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ. ಹಾಗೂ ಸಾರ್ವಜನಿಕರ ಒತ್ತಡವಿಲ್ಲದೆ ಪ್ರಾಧ್ಯಾಪಕರ ವಿರುದ್ಧ ಕ್ರಮವನ್ನು ನಿರೀಕ್ಷಿಸುವುದಿಲ್ಲ ಎಂದೂ ಪತ್ರದಲ್ಲಿ ಬರೆದಿದ್ದಾರೆ.
ಚಂಡೀಗಢ (ಜನವರಿ 8, 2024): ಹರ್ಯಾಣದ ಸಿರ್ಸಾದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಬಂದಿದೆ. ಈ ಹಿನ್ನೆಲೆ ಈ ಪ್ರಾಧ್ಯಾಪಕರನ್ನು ಅಮಾನತು ಮಾಡಬೇಕು ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಸಿರ್ಸಾದ 500 ಮಹಿಳಾ ಕಾಲೇಜು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಪತ್ರ ಬರೆದಿದ್ದಾರೆ.
ಅಲ್ಲದೆ, ವಿದ್ಯಾರ್ಥಿನಿಯರ ಪತ್ರದ ಪ್ರತಿಗಳನ್ನು ಉಪಕುಲಪತಿ ಡಾ. ಅಜ್ಮೀರ್ ಸಿಂಗ್ ಮಲಿಕ್, ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ಹಿರಿಯ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೂ ಕಳುಹಿಸಲಾಗಿದೆ.
ಇದನ್ನು ಓದಿ: ಲೈಂಗಿಕ ದೌರ್ಜನ್ಯಕ್ಕೆ ಸೇಡು: 25 ವರ್ಷದ ಯುವಕನ ಇರಿದು ಕೊಂದ ಮೂವರು ಅಪ್ರಾಪ್ತರು
ಈ ಪತ್ರದಲ್ಲಿ ಪ್ರೊಫೆಸರ್ ವಿರುದ್ಧ ಕೊಳಕು ಮತ್ತು ಅಶ್ಲೀಲ ಕೃತ್ಯಗಳನ್ನು ನಡೆಸಿರುವ ಬಗ್ಗೆ ಆರೋಪಿಸಲಾಗಿದೆ. ಪ್ರಾಧ್ಯಾಪಕರು ಹುಡುಗಿಯರನ್ನು ತನ್ನ ಕಚೇರಿಗೆ ಕರೆದು, ಸ್ನಾನಗೃಹಕ್ಕೆ ಕರೆದುಕೊಂಡು ಹೋಗುತ್ತಾರೆ ಮತ್ತು ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ ಹಾಗೂ ನಮ್ಮೊಂದಿಗೆ ಅಶ್ಲೀಲ ಕೆಲಸಗಳನ್ನು ಮಾಡುತ್ತಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಇದನ್ನು ಪ್ರತಿಭಟಿಸಿದರೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಯಿತು ಎಂದೂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಈ ಕೃತ್ಯಗಳು ಹಲವು ತಿಂಗಳುಗಳಿಂದ ನಡೆಯುತ್ತಿದೆ ಎಂದು ಹೇಳಲಾಗಿದೆ.
ಕಾಮುಕ ಪ್ರಿನ್ಸಿಪಾಲ್ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!
ಹಾಗೂ, ತಮ್ಮ ಸಹಾಯಕ್ಕೆ ಬರುವುದಕ್ಕಿಂತ ಹೆಚ್ಚಾಗಿ ಉಪ ಕುಲಪತಿ ನಮ್ಮನ್ನು ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಏಕೆಂದರೆ ಈ ಪ್ರಾಧ್ಯಾಪಕರು ಅಪಾರ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಅಲ್ಲದೆ, ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ನೀಡುವ ಮೂಲಕ ಉಪಕುಲಪತಿ ಆರೋಪಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.
ಈ ಮಧ್ಯೆ, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ರಾಜೇಶ್ ಕುಮಾರ್ ಬನ್ಸಾಲ್ ಪತ್ರದ ಸ್ವೀಕೃತಿಯನ್ನು ಖಚಿತಪಡಿಸಿದ್ದಾರೆ. ಹಾಗೂ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ತನ್ನದೇ ಆದ ಸಮಿತಿಯನ್ನು ಹೊಂದಿದೆ. ಇದು ಗಂಭೀರ ಆರೋಪವಾಗಿದೆ. ಪತ್ರದಲ್ಲಿ ಯಾವುದೇ ಹೆಸರಿಲ್ಲ, ಆದರೆ ನಾವು ಇದನ್ನು ತನಿಖೆ ಮಾಡುತ್ತೇವೆ ಎಂದೂ ಹೇಳಿದರು.
ಹಾಗೂ, ತನಿಖೆಯ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಗುವುದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡುವುದಿಲ್ಲ. ಆದರೆ, ಯಾರಾದರೂ ನಿರಪರಾಧಿಗಳಾಗಿದ್ದರೆ, ಅವರ ಹೆಸರು ಹಾಳಾಗಬಾರದು ಎಂದೂ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಇನ್ನು, ಸಂಬಂಧಿತ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಡಾ. ಬನ್ಸಾಲ್ ಹೇಳಿದ್ದಾರೆ. ಆದರೆ, ಆರೋಪಿ ಪ್ರೊಫೆಸರ್ ಈಗಾಗಲೇ ತಮ್ಮ ಕಚೇರಿಯ ಸಿಸಿಟಿವಿ ಫೂಟೇಜ್‌ನಿಂದ ಅವರ ಅಸಭ್ಯ ಕಾರ್ಯಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ತಮ್ಮ ಕುಟುಂಬಗಳಿಗೆ ಅಗೌರವದ ಭಯದಿಂದ ತಮ್ಮ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ. ಹಾಗೂ ಸಾರ್ವಜನಿಕರ ಒತ್ತಡವಿಲ್ಲದೆ ಪ್ರಾಧ್ಯಾಪಕರ ವಿರುದ್ಧ ಕ್ರಮವನ್ನು ನಿರೀಕ್ಷಿಸುವುದಿಲ್ಲ ಎಂದೂ ಪತ್ರದಲ್ಲಿ ಬರೆದಿದ್ದಾರೆ.
ಈ ಸಂಬಂಧ ಮಾತನಾಡಿದ ಹಿರಿಯ ಸಿರ್ಸಾ ಪೊಲೀಸ್ ಅಧಿಕಾರಿ ದೀಪ್ತಿ ಗಾರ್ಗ್, ತನಿಖೆ ನಡೆಯುತ್ತಿದೆ ಮತ್ತು ಕೆಲವು ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಪ್ರೊಫೆಸರ್ ರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಕಷ್ಟು ಪುರಾವೆಗಳು ದೊರೆತರೆ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹರ್ಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರು ಸಹ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬಂಧಿಸಲ್ಪಟ್ಟ ನಂತರ ಸೇವೆಯಿಂದ ವಜಾಗೊಳಿಸಿದ ತಿಂಗಳುಗಳ ನಂತರ ಈ ಪತ್ರ ಬಂದಿದೆ.