ನವದೆಹಲಿ(ನ.23): ಬಿಹಾರ ಮತ್ತು ವಿವಿಧ ರಾಜ್ಯಗಳ ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಒಳಬೇಗುದಿ ಮತ್ತಷ್ಟುಉಲ್ಬಣಿಸಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ 23 ಬಂಡಾಯ ಕಾಂಗ್ರೆಸ್ಸಿಗರ ಒಬ್ಬರಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್‌, ಪಕ್ಷದ ಇಂದಿನ ಸ್ಥಿತಿಗೆ ಪಕ್ಷದ ನಾಯಕರ ಫೈವ್‌ಸ್ಟಾರ್‌ ಸಂಸ್ಕೃತಿಯೇ ಕಾರಣವಾಗಿದೆ ಎಂದು ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಕ್ಷದ ನಾಯಕರು ಫೈವ್‌ ಸ್ಟಾರ್‌ ಸಂಸ್ಕೃತಿಗೆ ತಿಲಾಂಜಲಿ ಹಾಡುವವರೆಗೆ ಪಕ್ಷದ ಗೆಲವು ಸಾಧ್ಯವಿಲ್ಲ ಎಂದು ಹೇಳಿದರು.

'ಇಲ್ಲಿ ಇರಲು ಆಗದಿದ್ದರೆ ಹೊರಗೆ ಹೋಗಬಹುದು' ಕಾಂಗ್ರೆಸ್ VS ಕಾಂಗ್ರೆಸ್

ಈ ಬಗ್ಗೆ ಭಾನುವಾರ ಮಾತನಾಡಿದ ಆಜಾದ್‌, ‘ಬಿಹಾರ ಮತ್ತು ಉಪ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಕುರಿತಾಗಿ ಹೆಚ್ಚಿನ ಆತಂಕವಾಗಿದೆ. ಹಾಗೆಂದು ಇದಕ್ಕೆ ಪಕ್ಷದ ನಾಯಕತ್ವ ಕಾರಣವೆಂದು ಆರೋಪಿಸುತ್ತಿಲ್ಲ ಎಂದು ಗಾಂಧಿ ಕುಟುಂಬಕ್ಕೆ ಕ್ಲೀನ್‌ಚಿಟ್‌ ನೀಡಿದರು. ಆದರೆ, ಪಕ್ಷದಲ್ಲಿನ ಆಮೂಲಾಗ್ರ ಬದಲಾವಣೆಗೆ ಹೈಕಮಾಂಡ್‌ಗೆ ಒತ್ತಾಯಿಸಿದ ತಮ್ಮ ಕೋರಿಕೆಯಲ್ಲಿ ಬದಲಾವಣೆಯಿಲ್ಲ ಎಂದಿದ್ದಾರೆ.

'ಕೈ' ಬೇಗುದಿ ಸ್ಫೋಟ, ಅಂದು ನಾಯಕತ್ವ ಬದಲಾವಣೆ, ಇಂದು ಹಿರಿಯರ ಕಿತ್ತಾಟ!

ಏತನ್ಮಧ್ಯೆ, ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಸಲ್ಮಾನ್‌ ಖುರ್ಷಿದ್‌ ಹೇಳಿದರು. ಅಲ್ಲದೆ, ಕಾಂಗ್ರೆಸ್‌ ಒಳಗಿನ ಸಮಸ್ಯೆ ಪರಿಹಾರಕ್ಕಾಗಿ ಆಂತರಿಕ ವೇದಿಕೆಗಳಿವೆ. ಆದರೆ, ಕೆಲ ನಾಯಕರು ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.