ಉಗ್ರರ ಬೇಟೆ ವೇಳೆ 5 ಸೈನಿಕರು ಹುತಾತ್ಮ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ಸಂದರ್ಭ ಉಗ್ರರಿಂದ ಸ್ಫೋಟ
ಉಗ್ರರ ಹೆಡೆಮುರಿ ಕಟ್ಟಲು ಸೇನಾಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ರಜೌರಿ (ಮೇ 6, 2023): ಸೇನಾ ವಾಹನದ ಮೇಲೆ ಏ.20ರಂದು ಗ್ರೆನೇಡ್ ದಾಳಿ ನಡೆಸುವ ಮೂಲಕ ಬೆಂಕಿ ಹಚ್ಚಿ ಐವರು ಯೋಧರನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಬೇಟೆಯಾಡಲು ಹೋದಾಗ ದುರ್ಘಟನೆಯೊಂದು ಸಂಭವಿಸಿದೆ. ಗುಂಡಿನ ಚಕಮಕಿ ವೇಳೆ ಭಯೋತ್ಪಾದಕರು ಸ್ಫೋಟ ಮಾಡಿದ್ದರಿಂದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ಒಬ್ಬ ಮೇಜರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದರ ಹೊರತಾಗಿಯೂ ಉಗ್ರರ ಹೆಡೆಮುರಿ ಕಟ್ಟಲು ಸೇನಾಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ರಜೌರಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ
ಏನಾಯಿತು?:
ಏಪ್ರಿಲ್ 20ರಂದು ಜಮ್ಮುವಿನ ಪೂಂಛ್‌ನಲ್ಲಿ ಚಲಿಸುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಯೋಧರ ಶಸ್ತ್ರಾಸ್ತ್ರಗಳನ್ನು ಕಬಳಿಸಿ ಉಗ್ರರು ಪರಾರಿಯಾಗಿದ್ದರು. ನಾಪತ್ತೆಯಾದ ಉಗ್ರರಿಗಾಗಿ ಅಂದಿನಿಂದಲೂ ಸೇನೆ ಹುಡುಕಾಡುತ್ತಲೇ ಇತ್ತು. ಈ ನಡುವೆ, ರಜೌರಿ ಜಿಲ್ಲೆಯಲ್ಲಿ ಈ ಉಗ್ರರು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿತು.
ಹೀಗಾಗಿ ರಜೌರಿ ಜಿಲ್ಲೆಯ ಕಾಂಡಿ ಅರಣ್ಯದಲ್ಲಿ ಬುಧವಾರದಿಂದ ಕಾರ್ಯಾಚರಣೆ ಆರಂಭಿಸಲಾಯಿತು. ಶುಕ್ರವಾರ ಬೆಳಗ್ಗೆ 7.30ರ ವೇಳೆಗೆ ಉಗ್ರರ ಜತೆ ಸಂಘರ್ಷ ಆರಂಭವಾಯಿತು. ಬಂಡೆಗಳಿಂದ ಕೂಡಿದ ಕಡಿದಾದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಉಗ್ರರು ಸ್ಫೋಟಕವನ್ನು ಸಿಡಿಸಿದರು. ಸ್ಥಳದಲ್ಲೇ ಇಬ್ಬರು ಯೋಧರು ಮಡಿದರೆ, ಇನ್ನೂ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ: ಪೂಂಚ್ ದಾಳಿಗೆ ಸ್ಟಿಕ್ಕಿ ಬಾಂಬ್, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ
- ಎಲ್ಲಿ?: ಜಮ್ಮು - ಕಾಶ್ಮೀರದ ರಜೌರಿ ಜಿಲ್ಲೆಯ ಕಾಂಡಿ ಅರಣ್ಯದಲ್ಲಿ
- ಯಾವಾಗ? ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ
- ಏನಾಯ್ತು? ಏಪ್ರಿಲ್ 20 ರಂದು ಗ್ರೆನೇಡ್ ದಾಳಿ ನಡೆಸಿ 5 ಯೋಧರ ಹತ್ಯೆಗೈದ ಉಗ್ರಗಾಮಿಗಳ ಸದೆಬಡಿಯಲು ಹೋಗಿದ್ದ ಸೇನಾಪಡೆ. ಗುಂಡಿನ ಚಕಮಕಿ ವೇಳೆ ಸ್ಫೋಟಕ ಸಿಡಿಸಿದ ಉಗ್ರರು. ಇಬ್ಬರು ಸೈನಿಕರು ಸ್ಥಳದಲ್ಲಿ, ಮೂವರು ಆಸ್ಪತ್ರೆಯಲ್ಲಿ ವಿಧಿವಶ.
ಇದನ್ನೂ ಓದಿ: ಪೂಂಚ್ ಅಟ್ಯಾಕ್ ಹೊಣೆ ಹೊತ್ತ ಜೈಷ್ ಸಹವರ್ತಿ ಸಂಘಟನೆ: ಸೈನಿಕರ ಮೇಲಿನ ದಾಳಿ ವಿಡಿಯೋ ಮಾಡಿದ್ದ ಉಗ್ರರು!