Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ

ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಿದ್ದೇವೆ. ಅಲ್ಲಿಯೂ ಕೂಡ ಹಿಂಸಾಚಾರ ತೀವ್ರ ಕಡಿಮೆಯಾಗಿದೆ. ಕಲ್ಲು ತೂರುವುದು ನಿಂತು ಹೋಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

asianet suvarna news interview with amit shah talks on internal security improvement in india after modi government ash

ಬೆಂಗಳೂರು (ಏಪ್ರಿಲ್ 30, 2023): ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಯ ಬಹುಮತದ ಸರ್ಕಾರ ಅಂತ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಕೇಂದ್ರದ ನಾಯಕರು, ಅದ್ರಲ್ಲೂ ಅಮಿತ್ ಶಾ ಸಹ ಬಿಜೆಪಿ ಪೂರ್ಣಬಹುಮತದ ಸರ್ಕಾರ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ, ರಾಜ್ಯದಲ್ಲಿನ ಚುನಾವಣೆ, ಬಿಜೆಪಿ ಜನರಿಗೆ ನೀಡಿರುವ ಅಭಿವೃದ್ಧಿ ಸೇರಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ..

ಪಿಎಫ್‌ಐ ಕರ್ನಾಟಕದಲ್ಲಿ ಬೇರೂರಿದ್ದ ಸಂಘಟನೆ, ಅದನ್ನು ಬ್ಯಾನ್ ಮಾಡಿರೋದು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಪರಿಣಾಮ ಕಾಣಿಸುತ್ತಿದೆಯಾ ಎಂದು ಕೇಳಿದ್ದಕ್ಕೆ, ನನ್ನ ಪ್ರಕಾರ ಪಿಎಫ್‌ಐ ಬ್ಯಾನ್‌ ತುಂಬಾ ದೊಡ್ಡ ನಿರ್ಣಯ.. ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ಅತಿದೊಡ್ಡ ನಿರ್ಣಯ. ತುಂಬಾ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ.. ಕರ್ನಾಟಕ ಮಾತ್ರವಲ್ಲ ಇಡೀ ದೇಶಕ್ಕೆ ಇದರ ಲಾಭವಾಗಲಿದೆ. ಯಾವುದೇ ಸಂಘಟನೆ ದೇಶ ಒಡೆಯುವ ಕೆಲಸ ಮಾಡ್ತಿದ್ದಾಗ ನಾವು ಕಣ್ಣು ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದೂ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. 

ಇದನ್ನು ಓದಿ: Amit Shah Interview: ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲವಾಗಿದೆ, ಮುಸ್ಲಿಂ ಮೀಸಲಾತಿ 1 ವರ್ಷ ಮೊದಲೇ ತೆಗೆಯಬೇಕಿತ್ತು: ಅಮಿತ್ ಶಾ

ಹಾಗೂ, ನಾವೇನಾದ್ರೂ ಮಾಡದೇ ಹೋದ್ರೆ ನೀವು ಚುನಾವಣೆಯ ಕಾರಣ ಕೊಟ್ಟುಬಿಡುತ್ತಿದ್ರಿ. ಇಂತಹ   ವಿಚಾರದಲ್ಲಿ ಚುನಾವಣೆಯನ್ನೆಲ್ಲಾ ನೋಡೋದಿಲ್ಲ.. ಚುನಾವಣೆ ಬರುತ್ತೆ.. ಹೋಗುತ್ತೆ. ಆದ್ರೆ, ಸರ್ಕಾರ ಅನ್ನೋದು ಒಂದು ನಿರಂತರ ಪ್ರಕ್ರಿಯೆ. ಪಿಎಫ್‌ಐ ಬ್ಯಾನ್‌ನಿಂದ ಕೇವಲ ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಭಾರತದಲ್ಲಿ ಆಂತರಿಕ ಸುರಕ್ಷತೆ ನಿಶ್ಚತವಾಗಿ ಸುಭದ್ರವಾಗಿದೆ. ನನಗೆ ವಿಶ್ವಾಸವಿದೆ, ಪಿಎಫ್ಐ ಬ್ಯಾನ್‌ನಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಿದೆ​  ಎಂದೂ ಅಮಿತ್ ಶಾ ತಿಳಿಸಿದ್ದಾರೆ. 

ಈ ಮಧ್ಯೆ, ಮೋದಿ ಬರುವ ಮುಂಚೆ ಹಾಗೂ ಮೋದಿ ಬಂದ ನಂತರ ಆಂತರಿಕ ಸುರಕ್ಷತೆ ವಿಚಾರದಲ್ಲಿ 9 ವರ್ಷದಲ್ಲಿ ಏನೇನು ಬದಲಾವಣೆ ಆಗಿದೆ ಎಂದು ಕೇಳಿದ್ದಕ್ಕೆ, ಈಶಾನ್ಯ ಭಾರತದಲ್ಲಿ ಹಿಂಸಾಚಾರ ಶೇಕಡ 70ರಷ್ಟು ಕಡಿಮೆಯಾಗಿದೆ. 8,000 ಜನರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತಿಯಾಗಿದ್ದಾರೆ. 9 ವಿವಿಧ ಆತಂಕವಾದಿ ಸಂಘಟನೆಗಳು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸರ್ಕಾರದ ನಿರ್ಧಾರಗಳನ್ನ ಒಪ್ಪೋದಾಗಿ ತಿಳಿಸಿವೆ. 

ಇದನ್ನೂ ಓದಿ: Amit Shah Interview ಮೇ.13 ಬಿಜೆಪಿಗೆ ಶುಭದಿನ, ಗೆಲುವಿನ ನಂಬರ್ ಬಿಚ್ಚಿಟ್ಟ ಅಮಿತ್ ಶಾ!

ಕಾಶ್ಮೀರದಲ್ಲೂ 370ನೇ ವಿಧಿ ತೆಗೆದು ಹಾಕಿದ್ದೇವೆ. ಅಲ್ಲಿಯೂ ಕೂಡ ಹಿಂಸಾಚಾರ ತೀವ್ರ ಕಡಿಮೆಯಾಗಿದೆ. ಕಲ್ಲು ತೂರುವುದು ನಿಂತು ಹೋಗಿದೆ.. ಆಗ ಉಗ್ರರು ಜನರನ್ನ ಕೊಲ್ಲುತ್ತಿದ್ದರು. ಐವತ್ತು ಐವತ್ತು ಸಾವಿರ ಜನ ಗುಳೆ ಹೋಗ್ತಿದ್ರು. ಈಗ ನಿಮಗೆ ಟಿವಿಯಲ್ಲಿ ಈ ಥರ ಘಟನೆಗಳು ಕಾಣಸಿಗೋದಿಲ್ಲ.. ಯಾಕಂದ್ರೆ ಆ ಥರದ ಘಟನೆಗಳು ನಡೆಯುತ್ತಿಲ್ಲ. ಕಲ್ಲು ಹೊಡೆಯೋ ಸುದ್ದಿ ಕೂಡ ಸಿಗ್ತಾ ಇಲ್ಲ. ನಕ್ಸಲ್ ಹಿಂಸಾಚಾರ 20 ಪರ್ಸೆಂಟ್ ಕಡಿಮೆಯಾಗಿದೆ. ಪಿಎಫ್ಐ ಬ್ಯಾನ್‌ನಿಂದ ಹಿಡಿದು ಪಂಜಾಬ್‌ನಲ್ಲಿ NSA ಜಾರಿವರೆಗೂ ಆಂತರಿಕ ಸುರಕ್ಷತೆ ತುಂಬಾ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. 

ಈ ಮಧ್ಯೆ, ಜಮ್ಮು ಕಾಶ್ಮೀರದ ಮಾಜಿ ಗವರ್ನರ್‌ ಸತ್ಯಪಾಲ್ ಮಲಿಕ್‌ ಅವರ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ ಸತ್ಯಪಾಲ್ ಮಲಿಕ್‌ ಅಲ್ಲಿನ ಗವರ್ನರ್ ಆಗಿದ್ರು ಅವರಿಗೂ ಜವಾಬ್ದಾರಿ ಇರುತ್ತೆ. ದೇಶದ ವಿರುದ್ಧ ಕೆಲಸ ಮಾಡ್ತಿದ್ದಾರೆ ಅಂತಾ ಅವರ ಗಮನಕ್ಕೆ ಬಂದ್ರೆ ಆಗ ಯಾಕೆ ಅವರು ಅದನ್ನ ಹೇಳಿಕೊಂಡಿರಲಿಲ್ಲ. ಅಚಾನಕ್ ಆಗಿ ಅವರಿಗೆ 7 ವರ್ಷಗಳ ಬಳಿಕ ರಾಷ್ಟ್ರಭಕ್ತಿ ಜಾಗೃತವಾಯ್ತೇ? ಯಾಕಂದ್ರೆ ಈಗ ಚುನಾವಣೆ ಬಂದಿದೆ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

ದೇಶ ರಕ್ಷಣೆಯ ವಿಚಾರದಲ್ಲೂ ರಾಜಕೀಯ ನಡೆಯುತ್ತೆ ಎಂದು ಅನಿಸುತ್ತಾ ಎಂದು ಕೇಳಿದ್ದಕ್ಕೆ, ದೇಶದ ಜನತೆ ಇಂತಹ ಹೇಳಿಕೆಗಳಿಂದ ಪ್ರಭಾವಿತರಾಗೋದಿಲ್ಲ. ಅವರಿಗೆ ವಾಸ್ತವಿಕ ಸ್ಥಿತಿ ಏನಿದೆ ಅಂತ ಗೊತ್ತಿದೆ. ಈಶಾನ್ಯ ಭಾಗದಲ್ಲಿ 3 ರಾಜ್ಯಗಳ ಚುನಾವಣೆಗಳಲ್ಲಿ ಮೂರರಲ್ಲೂ ಜಯ ಸಾಧಿಸಿದ್ದೇವೆ. ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆಂತರಿಕ ಸುರಕ್ಷತೆ ಉತ್ತಮವಾಗಿದೆ ಎಂದು ದೇಶದ ಜನತೆಗೆ ಗೊತ್ತಾಗಿದೆ ಎಂದೂ ಏಷ್ಯಾನೆಟ್‌ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮಿತ್‌ ಶಾ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios