ಅಲಪ್ಪುಳದಲ್ಲಿ ಭೀಕರ ಅಪಘಾತ: KSRTC ಬಸ್‌ಗೆ ಡಿಕ್ಕಿ ಹೊಡೆದ ಕಾರು, 5 ವೈದ್ಯ ವಿದ್ಯಾರ್ಥಿಗಳು ಸಾವು
ಅಲಪ್ಪುಳದ ಬಳಿ ಭೀಕರ ಕಾರು ಅಪಘಾತದಲ್ಲಿ ಅಲಪ್ಪುಳ ವೈದ್ಯಕೀಯ ಕಾಲೇಜಿನ ಐವರು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಅಲಪ್ಪುಳ (ಡಿ.3): ಇಲ್ಲಿನ ಅಲಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಸೋಮವಾರ ರಾತ್ರಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕೊಟ್ಟಾಯಂನ ಆಯುಷ್ ಶಾಜಿ (19), ಪಾಲಕ್ಕಾಡ್‌ನ ಶ್ರೀದೀಪ್ ವತ್ಸನ್ (19), ಮಲಪ್ಪುರಂನ ಬಿ. ದೇವಾನಂದನ್ (19), ಕಣ್ಣೂರಿನ ಮೊಹಮ್ಮದ್ ಅಬ್ದುಲ್ ಜಬ್ಬಾರ್ (19) ಮತ್ತು ಲಕ್ಷದ್ವೀಪದ ಮೊಹಮ್ಮದ್ ಇಬ್ರಾಹಿಂ (19) ಎಂದು ಗುರುತಿಸಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಚಲಿಸುತ್ತಿದ್ದ ಟವೆರಾ ಕಾರು ನಿಯಂತ್ರಣ ತಪ್ಪಿ ಗುರುವಾಯೂರಿನಿಂದ ಕಾಯಂಕುಲಂಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಅಪಘಾತಕ್ಕೆ ಭಾರೀ ಮಳೆಯಿಂದಾಗಿ ಚಾಲಕನ ದೃಷ್ಟಿ ಮಂದವಾಗಿರುವುದೇ ಕಾರಣ ಎಂದು ನಂಬಲಾಗಿದೆ. ಓವರ್‌ಟೇಕ್ ಮಾಡುವಾಗ ಚಾಲಕನಿಗೆ ಮಬ್ಬು ಕವಿದ ಕಾರಣಕ್ಕೆ ಡಿಕ್ಕಿ ಸಂಭವಿಸಿದೆ ಎಂದು ಎಂವಿಡಿ ಅಧಿಕಾರಿಗಳು ಮತ್ತು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಸೂಪರ್‌ಫಾಸ್ಟ್ ಬಸ್ಸಿಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.
ಮೃತ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆಯನ್ನು ಇಂದು ಬೆಳಿಗ್ಗೆ 9 ಗಂಟೆಗೆ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಬೆಳಿಗ್ಗೆ 8:30 ರ ಸುಮಾರಿಗೆ ಪ್ರಕ್ರಿಯೆ ಆರಂಭವಾಗಿದೆ. ಮರಣೋತ್ತರ ಪರೀಕ್ಷೆಯ ನಂತರ, ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸುವ ಮೊದಲು ವೈದ್ಯಕೀಯ ಕಾಲೇಜಿನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಡಿಕ್ಕಿಯ ರಭಸಕ್ಕೆ ಕಾರು ಛಿದ್ರವಾಗಿ ವೈದ್ಯ ವಿದ್ಯಾರ್ಥಿಗಳು ಕಾರಿನಿಂದ ಹೊರಗೆ ಬಿದ್ದಿದ್ದು, ಅವರ ದೇಹಗಳು ಛಿದ್ರವಾಗಿದ್ದವು ಎಂದು ಹೇಳಿದ್ದಾರೆ. ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?
ಅಪಘಾತದಲ್ಲಿ ಗಾಯಗೊಂಡಿರುವ ಇನ್ನಿಬ್ಬರು ವೈದ್ಯ ವಿದ್ಯಾರ್ಥಿಗಳು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸಿದಾಗ ಕಾರಿನಲ್ಲಿ 11 ವಿದ್ಯಾರ್ಥಿಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಭಾರೀ ಮಳೆ, ಹಳೆಯ ವಾಹನ ಮತ್ತು ಅತಿಯಾದ ಭಾರ ಹೊತ್ತಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಸೂಚಿಸಿದ್ದಾರೆ.
ಕಡಲ ತೀರದಲ್ಲಿ ಕುಣಿದು ಕುಪ್ಪಳಿಸಿದ ಸ್ವೀಟಿ ರಾಧಿಕಾ ಕುಮಾರಸ್ವಾಮಿ; ಹಾಡು ಕೇಳಿ ಶಾಕ್ ಆಗ್ಬೇಡಿ..!