* ಉಗ್ರರ ಗುಂಡಿಗೆ 5 ಯೋಧರ ಬಲಿ* ಕೆಲ ದಿನಗಳ ಹಿಂದಷ್ಟೇ ಗಡಿ ದಾಟಿ ಬಂದಿದ್ದ ಭಯೋತ್ಪಾದಕರು* ಸೇನೆ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ: ಸೈನಿಕರ ಸಾವು* ಕಾಶ್ಮೀರದ ಇನ್ನೂ 2 ಕಡೆ ಎನ್‌ಕೌಂಟರ್: 2 ಉಗ್ರರು ಹತ
ಜಮ್ಮು(ಅ.12): ಕಣಿವೆ ರಾಜ್ಯ ಕಾಶ್ಮೀರದಲ್ಲಿ(Kashmir) ಉಗ್ರರ ದಾಳಿ ಹೆಚ್ಚುತ್ತಿರುವಾಗಲೇ, ಭಾರತೀಯ ಸೇನೆ(Indian Army) ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಐವರು ಯೋಧರು ಹುತಾತ್ಮರಾಗಿರುವ ಘಟನೆ ಸೋಮವಾರ ನಡೆದಿದೆ. ಮತ್ತೆರಡು ಕಡೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಯೋಧರು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಪಸಂಖ್ಯಾತ ಹಿಂದೂ ಸಮುದಾಯದ(Hindu Community) ಮೇಲೆ ಉಗ್ರರು ದಾಳಿ ನಡೆಸುತ್ತಿರುವಾಗಲೇ, ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಒಂದಷ್ಟುಉಗ್ರರು ಗಡಿ ದಾಟಿ ಕೆಲ ದಿನಗಳ ಹಿಂದೆ ಬಂದಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೂಂಛ್(Poonch) ಜಿಲ್ಲೆಯ ಸುರಾನ್‌ಕೋಟೆಯಲ್ಲಿ ನಸುಕಿನ ಜಾವ ಯೋಧರು ಪರಿಶೀಲನೆ ಆರಂಭಿಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ಮಳೆಗೆರೆದಿದ್ದರಿಂದ ಓರ್ವ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಐವರು ಯೋಧರು ಹುತಾತ್ಮರಾದರು.
ಉಗ್ರರ(Terrorists) ವಿರುದ್ಧ ಯೋಧರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಚಾಮ್ರೇರ್ ಅರಣ್ಯದಲ್ಲಿ ಉಗ್ರರ ದಂಡೇ ಇದೆ ಎನ್ನಲಾಗುತ್ತಿದ್ದು, ಅವರು ತಪ್ಪಿಸಿಕೊಂಡು ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಇಬ್ಬರು ಉಗ್ರರು ಹತ:
ಈ ನಡುವೆ ಅನಂತನಾಗ್ ಹಾಗೂ ಬಂಡಿಪೊರಾ ಜಿಲ್ಲೆಗಳಲ್ಲೂ ಯೋಧರು ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರರಿರುವ ಮಾಹಿತಿ ಮೇರೆಗೆ ಅನಂತನಾಗ್ ಜಿಲ್ಲೆಯ ಖಾಗುಂಡ್‌ನಲ್ಲಿ ಕಾರ್ಯಾಚರಣೆ ನಡೆಸಿದಾಗ ಎನ್‌ಕೌಂಟರ್ ನಡೆದು ಒಬ್ಬ ಉಗ್ರನನ್ನು ಕೊಲ್ಲಲಾಗಿದೆ. ಮತ್ತೊಂದೆಡೆ ಬಂಡಿಪೊರಾ ಜಿಲ್ಲೆಯ ಗುಂಡ್‌ಜಹಾಂಗೀರ್‌ನಲ್ಲಿ ನಡೆದ ಇಂತಹದ್ದೇ ಕಾರ್ಯಾಚರಣೆ ವೇಳೆ ಲಷ್ಕರ್ ಎ ತೊಯ್ಬಾ ಉಗ್ರಗಾಮಿಯೊಬ್ಬನನ್ನು ಕೊಲ್ಲಲಾಗಿದೆ.
