*ಉತ್ತರ ಪ್ರದೇಶ: 4ನೇ ಹಂತದ ಮತದಾನ ಇಂದು*59 ಕ್ಷೇತ್ರಗಳಲ್ಲಿ ಮತದಾನ: ಕಣದಲ್ಲಿ 624 ಅಭ್ಯರ್ಥಿಗಳು*ಲಕ್ಷ್ಮಿ ‘ಆನೆ’ ಅಥವಾ ‘ಸೈಕಲ್‌’ ಮೇಲೆ ಬರಲ್ಲ: ಸಿಂಗ್ *ಚುನಾವಣಾ ರಾರ‍ಯಲಿಯಲ್ಲಿ ಬಿಎಸ್ಪಿ, ಎಸ್ಪಿಗೆ ರಾಜನಾಥ್‌ ಟಾಂಗ್‌

ಲಖನೌ (ಫೆ. 23) : ಉತ್ತರ ಪ್ರದೇಶದ 9 ಜಿಲ್ಲೆಗಳಲ್ಲಿ (Uttar Pradesh Assembly Elections) ವ್ಯಾಪಿಸಿಕೊಂಡಿರುವ 59 ವಿಧಾನಸಭೆ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ. 4ನೇ ಹಂತದಲ್ಲಿ ನಡೆಯುತ್ತಿರುವ ಈ ಕ್ಷೇತ್ರಗಳಲ್ಲಿ ಬಿಜೆಪಿ, ಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಒಟ್ಟಾರೆ 624 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ 3ರಂದು ಕಾರು ಹರಿದು ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ ಘಟನೆಯಿಂದ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆದ ಲಖೀಂಪುರ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ 4ನೇ ಹಂತದ ಚುನಾವಣೆ ನಡೆಯಲಿದೆ. ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆವರೆಗೆ ಚುನಾವಣೆ ನಡೆಯಲಿದೆ. ಇದಾದ ಬಳಿಕ ಇನ್ನೂ 3 ಹಂತ ಬಾಕಿ ಉಳಿಯಲಿವೆ. ಮಾ.10ರಂದು ಮತಎಣಿಕೆ ನಡೆಯಲಿದೆ.

ಲಕ್ಷ್ಮಿ ‘ಆನೆ’ ಅಥವಾ ‘ಸೈಕಲ್‌’ ಮೇಲೆ ಬರಲ್ಲ: ಲಕ್ಷ್ಮಿ ದೇವತೆ ‘ಸೈಕಲ್‌’ ಅಥವಾ ‘ಆನೆ’ಯ ಮೇಲೆ ಹತ್ತಿ ಯಾರ ಮನೆಗೂ ಹೋಗುವುದಿಲ್ಲ. ಹಾಗೆಯೇ ‘ಕೈ’ಬೀಸುವುದಿಲ್ಲ. ಲಕ್ಷ್ಮೇ ಯಾವಾಗಲೂ ‘ಕಮಲ’ದ ಮೇಲೆ ಕುಳಿತು ಬರುತ್ತಾಳೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: UP Poll : ಈ ಬಾರಿ ನೋ ಸಾರಿ... ಮತ್ತೆ ಬಂದ್ರು ಡ್ರೆಸ್ಸಿಂಗ್‌ ಸ್ಟೈಲ್‌ನಿಂದಲೇ ಫೇಮಸ್‌ ಆಗಿದ್ದ ಸ್ಟೈಲಿಸ್ಟ್‌ ಆಫೀಸರ್‌

ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಸಿಂಗ್‌, ‘ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವರ್ಷಕ್ಕೆ 6 ಸಾವಿರ ರು. ಸಹಾಯಧನ, ಉಚಿತ ಪಡಿತರ, ಬಡತನ ರೇಖೆಗಿಂತ ಮೇಲಿರುವವರಿಗೂ ಮನೆ ನಿರ್ಮಿಸಿಕೊಡಲಾಗುವುದು. ನಾವು ಸರ್ಕಾರ ರಚಿಸುವುದಕ್ಕೋಸ್ಕರ ಮಾತ್ರ ರಾಜಕೀಯ ಮಾಡುತ್ತಿಲ್ಲ. ಸಮಾಜವನ್ನು ಕಟ್ಟುವುದಕ್ಕಾಗಿ ರಾಜಕೀಯ ಮಾಡುತ್ತಿದ್ದೇವೆ’ ಎಂದು ಹೇಳಿದರು.

ರೋಡ್‌ ಶೋಗಳಿಗೆ ಆಯೋಗ ಅಸ್ತು: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಚುನಾವಣಾ ಪ್ರಚಾರದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಚುನಾವಣಾ ಆಯೋಗ ತೆಗೆದುಹಾಕಿದೆ. ಜಿಲ್ಲಾಡಳಿತದ ಅನುಮತಿ ಪಡೆದು ರೋಡ್‌ ಶೋ ನಡೆಸಲು ಸಹ ಅನುಮತಿ ನೀಡಲಾಗಿದೆ. 

ಇದರೊಂದಿಗೆ ಚುನಾವಣಾ ಅಭ್ಯರ್ಥಿಗಳು ಸಾರ್ವಜನಿಕವಾಗಿ ಸಭೆಗಳು ಮತ್ತು ರಾರ‍ಯಲಿಗಳನ್ನು ಹಮ್ಮಿಕೊಳ್ಳಲು ಸಹ ಅನುಮತಿ ನೀಡಲಾಗಿದೆ. ಈ ಹಿಂದೆ ಕೇವಲ ಒಟ್ಟು ಸಾಮರ್ಥ್ಯದ ಶೇ.50ರಷ್ಟುಜನರೊಂದಿಗೆ ಮಾತ್ರ ಸಭೆ ನಡೆಸುವಂತೆ ನಿರ್ಬಂಧ ವಿಧಿಸಲಾಗಿತ್ತು. ಇನ್ನು ಮಣಿಪುರದ 2 ಹಂತ ಮತ್ತು ಉತ್ತರ ಪ್ರದೇಶದ ಐದು, ಆರು ಮತ್ತು ಏಳನೇ ಹಂತದ ಚುನಾವಣೆ ಬಾಕಿಯಿದೆ.

ಇದನ್ನೂ ಓದಿ:ರಾಮ್ ರಹೀಮ್‌ಗೆ Z+ ಭದ್ರತೆ , ಖಲಿಸ್ತಾನಿಗಳಿಂದ ಬೆದರಿಕೆ ಇದೆ ಎಂದ ಪೊಲೀಸರು

ವಿವಾದಿತ ಧರ್ಮಗುರು ರಾಮ್‌ ರಹೀಮ್‌ಗೆ ‘ಝಡ್‌ ಪ್ಲಸ್‌’ ಭದ್ರತೆ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ 21 ದಿನ ಫರ್ಲೋ ಮೇಲೆ ಬಿಡುಗಡೆಯಾಗಿರುವ ಸ್ವಘೋಷಿತ ದೇವ ಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಝಡ್‌ ಪ್ಲಸ್‌ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಫೆ.7ರಂದು ಹರಾರ‍ಯಣ ಜೈಲಿನಿಂದ ಫರ್ಲೋ ಮೇಲೆ ಬಿಡುಗಡೆಯಾಗಿರುವ ಗರ್ಮೀತ್‌ಗೆ ಭಾರತ ಮತ್ತು ವಿದೇಶಿ ಖಲಿಸ್ತಾನ ಪರ ಹೋರಾಟಗಾರರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಗುರ್ಮೀತ್‌ 2017ರಿಂದ ಹರಾರ‍ಯಣ ಕಾರಾಗೃಹದಲ್ಲಿದ್ದಾರೆ. ಝಡ್‌ ಪ್ಲಸ್‌ ಭದ್ರತೆಯಲ್ಲಿ 10ಕ್ಕೂ ಹೆಚ್ಚಿನ ಕಮಾಂಡೋಗಳು ಸೇರಿ ಒಟ್ಟು 55 ಸಿಬ್ಬಂದಿ 24 ತಾಸೂ ಭದ್ರತೆ ನೀಡುತ್ತಾರೆ.