ಸೈಬರ್ ದಾಳಿ: ಲಕ್ಷಾಂತರ ಏರಿಂಡಿಯಾ ಪ್ರಯಾಣಿಕರ ಮಾಹಿತಿ ಸೋರಿಕೆ!
* ಸೈಬರ್ ದಾಳಿ: ಲಕ್ಷಾಂತರ ಏರಿಂಡಿಯಾ ಪ್ರಯಾಣಿಕರ ಮಾಹಿತಿ ಸೋರಿಕೆ
* ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿ ಪ್ರಮುಖ ದತ್ತಾಂಶ ಸೋರಿಕೆ
* ವಿಮಾನಯಾನ ಸಂಸ್ಥೆಗಳ 45 ಲಕ್ಷ ಬಳಕೆದಾರರ ಮಾಹಿತಿಗೆ ಕನ್ನ
ನವದೆಹಲಿ(ಮೇ.22): ಏರ್ ಇಂಡಿಯಾ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲಾಗಿದ್ದು, 45 ಲಕ್ಷ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಗಳು ಪ್ರಮುಖ ದತ್ತಾಂಶಗಳು ಸೋರಿಕೆ ಆಗಿದೆ. ಇದರಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ, ಮೊಬೈಲ್ ನಂಬರ್, ಪಾಸ್‌ಪೋರ್ಟ್ ಮಾಹಿತಿ, ಪ್ರಯಾಣಿಕರ ಹೆಸರು, ವಿಮಾನ ಟಿಕೆಟ್ ಮಾಹಿತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಮಲೇಷ್ಯಾ ಏರ್‌ಲೈನ್ಸ್, ಫಿನ್‌ಏರ್, ಸಿಂಗಾಪುರ ಏರ್‌ಲೈನ್ಸ್, ಲುಫ್ತಾನ್ಸಾ ಮತ್ತು ಕ್ಯಾತೆ ಪೆಸಿಫಿಕ್ ವಿಮಾನಯಾನ ಸಂಸ್ಥೆಗಳ ಸರ್ವರ್‌ಗಳ ಮೇಲೆ ಸೈಬರ್ ದಾಳಿ ನಡೆಸಲಾಗಿದೆ. ಸ್ಟಾರ್ ಏರ್‌ಲೈನ್ ಹಾಗೂ ಏರ್ ಇಂಡಿಯಾ ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ಮಾಹಿತಿಗಳು ಸೋರಿಕೆ ಆಗಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ, ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡುವ ಎಸ್‌ಐಟಿಎ ಪಿಎಸ್‌ಎಸ್ ಸರ್ವರ್ ಸೈಬರ್ ದಾಳಿಗೆ ಒಳಗಾಗಿದೆ. 2011ರ ಆ.26ರಿಂದ 2021ರ ಫೆ.20ರವರೆಗೆ ಸರ್ವರ್‌ನಲ್ಲಿ ಇದ್ದ ಮಾಹಿತಿಯನ್ನು ಕದಿಯಲಾಗಿದೆ. ಆದರೆ, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಗೆ ಸಂಬಂಧಿಸಿದಂತೆ ಸಿವಿವಿ ಅಥವಾ ಸಿವಿಸಿ ನಂಬರ್‌ಗಳು ದಾಳಿಗೆ ಒಳಗಾಗ ಸರ್ವರ್‌ನಲ್ಲಿ ಸಂಗ್ರಹವಾಗಿ ಇರಲಿಲ್ಲ. ಅದೇ ರೀತಿ ಬಳಕೆದಾರರ ಪಾಸ್‌ವರ್ಡ್‌ಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದೆ.