2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ನವದೆಹಲಿ: 2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಸ್. ಪಿ. ಸಿಂಗ್ ‘ 2024ರಲ್ಲಿ 37.17 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇದರಲ್ಲಿ 54 ಮಂದಿ ಶಂಕಿತ ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣದ ಅಂಕಿ ಅಂಶಗಳಿಂದ ಸಂಗ್ರಹಿಸಲಾಗಿದೆ’ ಎಂದಿದ್ದಾರೆ.
ಆರೇ ತಿಂಗಳಲ್ಲಿ ರಾಜ್ಯದ 2.3 ಲಕ್ಷ ಜನರಿಗೆ ನಾಯಿ ಕಡಿತ!
ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಆರೇ ತಿಂಗಳಲ್ಲಿ 2.3 ಲಕ್ಷಕ್ಕೂ ಅಧಿಕ ನಾಯಿ ಕಡಿತ ಪ್ರಕರಣ, 19 ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
2025ರ ಜ.1ರಿಂದ ಜೂ.30ರ ನಡುವೆ 2,31,091 ನಾಯಿ ಕಡಿತ ವರದಿಯಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 1,69,672 ನಾಯಿ ಕಡಿತ ಮತ್ತು 18 ರೇಬೀಸ್ ಸಾವು ವರದಿಯಾಗಿದ್ದವು. 2024ರಲ್ಲಿ ರಾಜ್ಯದಲ್ಲಿ ಇಡೀ ವರ್ಷದಲ್ಲಿ 3.6 ಲಕ್ಷ ನಾಯಿ ಕಡಿತ ಹಾಗೂ 42 ರೇಬೀಸ್ ಸಾವು ಸಂಭವಿಸಿದ್ದವು. 2023ರ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.20ರಷ್ಟು ಹೆಚ್ಚಳ ಕಂಡುಬಂದಿದೆ.
ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ಅದಾದ ನಂತರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ದೃಢಪಟ್ಟ ರೇಬೀಸ್ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡುತ್ತಿವೆ. 2022ರ ನಂತರ ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಈ ವರ್ಷ ವರದಿಯಾಗಿವೆ.
ವಿಜಯಪುರದಲ್ಲಿ ಅತಿ ಹೆಚ್ಚು:
ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ವಿಜಯಪುರ ಜಿಲ್ಲೆಯಲ್ಲಿ. ಈ ವರ್ಷದ ಆರೇ ತಿಂಗಳ ಅವಧಿಯಲ್ಲಿ ಅಲ್ಲಿ 15,527 ಮಂದಿಗೆ ನಾಯಿಗಳು ಕಡಿದಿವೆ. ಬಿಬಿಎಂಪಿ (13,831), ಹಾಸನ (13388), ದಕ್ಷಿಣ ಕನ್ನಡ (12524) ಹಾಗೂ ಬಾಗಲಕೋಟೆ (12,392) ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಅತಿ ಕಡಿಮೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ಯಾದಗಿರಿ ಜಿಲ್ಲೆಯಲ್ಲಿ. ಅಲ್ಲಿ 1132 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ (1810), ಕೊಡಗು (2523) ನಂತರದ ಸ್ಥಾನದಲ್ಲಿವೆ.
