ಆಟವಾಡುತ್ತಿದ್ದ ವೇಳೆ ಪ್ರತ್ಯಕ್ಷಗೊಂಡ ಹಾವು, ಚೂಯಿಂಗ್ ಗಮ್ ರೀತಿ ಜಗಿದು ಕೊಂದ 3 ವರ್ಷದ ಮಗು!
3 ವರ್ಷದ ಪುಟಾಣಿ ಮಗು ಮನೆಯ ಹೊರಗೆ ಆಟವಾಡುತ್ತಿತ್ತು. ಅಜ್ಜಿ ಮನೆಯೊಳಗೆ ಕೆಲಸದಲ್ಲಿ ಮಗ್ನರಾಗಿದ್ದರು. ತಕ್ಷಣವೇ ಮಗುವಿನ ಚೀರಾಟ ಕೇಳಿಸಿದೆ ಹೊರಗೆ ಬಂದು ನೋಡಿದರೆ ಮಗುವಿನ ಬಾಯಲ್ಲಿ ಹಾವು ಜೊತೆಗೆ ರಕ್ತ. ಆಸ್ಪತ್ರೆ ದಾಖಲಿಸಿದ ಪೋಷಕರಿಗೆ ಅಚ್ಚರಿ. ಹಾವು ಮಗುವನ್ನು ಕಡಿದಿಲ್ಲ. ಅದಕ್ಕೂ ಮೊದಲೇ ಮಗು ಹಾವನ್ನು ಚೂಯಿಂಗ್ ಗಮ್ ರೀತಿ ಜಗಿದಿದ್ದಾನೆ
ಮದ್ನಾಪುರ(ಜೂ.05): ಮಗುವಿನ ವಯಸ್ಸು ಕೇವಲ 3. ಹಾವು ಅಂದರೆ ಏನೂ ಅನ್ನೋದೇ ಅರಿಯದ ವಯಸ್ಸು. ಆದರೆ ಈ ಮಗು ಹಾವನ್ನು ಕಚ್ಚಿ ಕಚ್ಚಿ ಕೊಂದ ಘಟನೆ ಉತ್ತರ ಪ್ರದೇಶದ ಫರುಖಾಬಾದ್ ಜಿಲ್ಲೆಯ ಮದ್ನಾಪುರದಲ್ಲಿ ನಡೆದಿದೆ. ಆಟವಾಡುತ್ತಿದ್ದ ವೇಳೆ ಪ್ರತ್ಯಕ್ಷಗೊಂಡ ಹಾವು ಸತ್ತಿದ್ದರೆ, ಮಗುವಿಗೆ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಈ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ.
3 ವರ್ಷದ ಮಗು ಆಯುಷ್ ಮನೆಯ ಜಗಲಿ ಪಕ್ಕದಲ್ಲಿ ಆಟವಾಡುತ್ತಿತ್ತು. ಇತ್ತ ಪೋಷಕರಿಬ್ಬರು ಪಕ್ಕದಲ್ಲೇ ಕೆಲಸಕ್ಕೆ ತೆರಳಿದ್ದರೆ, ಮನೆಯಲ್ಲಿ ಮಗುವಿನ ಅಜ್ಜಿ ಕೆಲಸದಲ್ಲಿ ಮಗ್ನರಾಗಿದ್ದರು. ಆಟವಾಡುತ್ತಿದ್ದಂತೆ ಸಣ್ಣ ಹಾವೊಂದು ಮಗುವಿನ ಬಳಿ ಪ್ರತ್ಯಕ್ಷಗೊಂಡಿದೆ. ಹತ್ತಿರಕ್ಕೆ ಬರುತ್ತಿದ್ದ ಹಾವನ್ನು ಕೈಯಲ್ಲಿ ಎತ್ತಿಕೊಂಡ ಮಗು ಬಾಯಲ್ಲಿಟ್ಟು ಜಗಿದಿದೆ. ಒಂದೆರೆಡು ಜಗಿತದಲ್ಲಿ ಇದು ತಿನ್ನುವ ವಸ್ತುವಲ್ಲ ಎಂದು ಗೊತ್ತಾಗಿದೆ. ಭಯಗೊಂಡ ಮಗುವ ಚೀರಾಡಿದೆ.
ಹಾವು ಕಚ್ಚಿದ ಪುತ್ರನಿಗೆ ಕಿಡ್ನಿ ಕೊಟ್ಟು ಮರುಜನ್ಮ ನೀಡುತ್ತಿರುವ ತಾಯಿ: ಆರ್ಥಿಕ ಸಹಾಯಕ್ಕೆ ಮನವಿ
ಮನೆಯೊಳಗಿದ್ದ ಅಜ್ಜಿ ಓಡೋಡಿ ಬಂದಿದ್ದಾರೆ. ಮಗುವನ್ನು ನೋಡಿ ಮತ್ತಷ್ಟು ಗಾಬರಿಗೊಂಡಿದ್ದಾರೆ. ಮಗುವಿನ ಬಾಯಲ್ಲಿ ಹಾವು.ಜೊತೆಗೆ ರಕ್ತ. ಮೆಲ್ಲನೆ ಹಾವನ್ನು ತೆಗೆದ ಅಜ್ಜಿ ಮಗುವಿನ ಬಾಯಿ ಸ್ವಚ್ಚಗೊಳಿಸಿದ್ದಾರೆ. ಇತ್ತ ಹಾವು ಸತ್ತು ಬಿದ್ದಿದೆ. ಮಗುವನ್ನು ತಕ್ಷಣವೇ ಡಾ ರಾಮ್ ಮನೋಹರ್ ಲೋಹಿಯಾ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವನ್ನು ಕೂಲಂಕೂಷವಾಗಿ ವೈದ್ಯರು ಪರೀಕ್ಷಿಸಿದ್ದಾರೆ. ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಮಗುವಿಗೆ ಇಂಜೆಕ್ಷನ್ ನೀಡಿ 24 ಗಂಟೆ ಪರಿಶೀಲನೆಯಲ್ಲಿಟ್ಟಿದ್ದಾರೆ. ಜೊತೆಗೆ ಸೂಕ್ತ ಔಷಧಗಳನ್ನು ನೀಡಿದ್ದಾರೆ. ಮಗುವಿನ ಅಜ್ಜಿ ಮಗುವಿನ ಜೊತೆಗೆ ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಇತ್ತ ಹಾವನ್ನು ಪರಿಶೀಲಿಸಿದ ವೈದ್ಯರು ಇದು ವಿಷಕಾರಕ ಹಾವಲ್ಲ ಎಂದಿದ್ದಾರೆ.ಆದರೂ ಮಗುವನ್ನು 24 ಗಂಟೆ ಕಾಲ ಅಬ್ಸರ್ವೇಶನ್‌ನಲ್ಲಿ ಇಡಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. 24 ಗಂಟೆ ಬಲಿಕ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಗು ಆರೋಗ್ಯವಾಗಿದೆ.
ಕಾವನ್ನೇ ಕಚ್ಚಿ ಕೊಂದ ಮೂರು ವರ್ಷದ ಬಾಲಕನ ಸುದ್ದಿ ಗ್ರಾಮದ ಸುತ್ತ ಹರಡಿದೆ. ಇದೀಗ ಗ್ರಾಮದ ಹಲವರು ಮಗುವನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಆದರೆ ಏನೂ ಅರಿಯದ ಮಗು ತನ್ನ ಪಾಡಿಗೆ ಆಟದಲ್ಲಿ ಮಗ್ನರಾಗಿದೆ.
ಡ್ರಾಯರ್ ಎಳೆದ ಮ್ಯಾನೇಜರ್‌ಗೆ ಶಾಕ್ ನೀಡಿದ ಸ್ನೇಕ್: ವೈರಲ್ ವೀಡಿಯೋ
ಹಾವು ಕುರಿತ ಹಲವು ಅಚ್ಚರಿ ಸುದ್ದಿಗಳು ಈಗಾಗಲೇ ವೈರಲ್ ಆಗಿದೆ. ಇತ್ತೀಚೆಗೆ ಬೆಳಗಾವಿಯ ಘಟನೆ ವೈರಲ್ ಆಗಿತ್ತು. ಬಾಲಕಿಯೊಬ್ಬಳು ಹಾವು ಕಡಿತದಿಂದ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಅಲ್ಲದೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಈ ದೃಶ್ಯವನ್ನು ನೋಡಿದ ಪ್ರತಿಯೊಬ್ಬರು ಮೈ ಜುಮ್ ಎನಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಹಲಗಾ ನಿವಾಸಿ ಸುಹಾಸ್ ಸೈಬಣ್ಣವರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಬಾಗಿಲಿನ ಸಮೀಪವೇ ಇದ್ದ ಹಾವನ್ನ್ನು ಗಮನಿಸದೇ ಮನೆಯೊಳಗೆ ಪ್ರವೇಶಿಸಲು ಬಾಲಕಿ ಮುಂದಾಗಿದ್ದಾಳೆ. ಇನ್ನೇನು ಬಾಲಕಿ ಹೊಸ್ತಿಲ ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿದೆ. ಇದನ್ನು ಗಮನಿಸಿದ ಬಾಲಕಿ ಕೂಡಲೇ ಒಳಗೆ ಓಡಿದ್ದಾಳೆ. ಕ್ಷಣಾರ್ಧದಲ್ಲೇ ಹಾವು ಕಡಿತದಿಂದ ಪಾರಾಗಿದ್ದಾಳೆ. ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.