ತಿರುವನಂತಪುರ(ಜೂ.05): ತಿರುವನಂತಪುರಂ(ಜೂ.05): ಇಡೀ ದೇಶವೇ ಕಣ್ಣೀರು ಹಾಕುವಂತೆ ಮಾಡಿದ್ದ ಕೇರಳ ಆನೆ ಹತ್ಯೆ ಪ್ರಕರಣದಲ್ಲಿ ಇಬ್ಬರು ಖಾಸಗಿ ಎಸ್ಟೇಟ್ ಕೆಲಸಗಾರನ್ನು ವಶಕ್ಕೆ ಪಡೆಯುವಲ್ಲಿ ಪಡೆಯುವಲ್ಲಿ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ತಂಡ ಯಶಸ್ವಿಯಾಗಿದೆ. 

ಈ ಇಬ್ಬರನ್ನು ವಿಚಾರಣೆಗೊಳಪಡಿಸಿದ್ದು, ಬೆಳೆಯನ್ನು ಹಾಳುಮಾಡಲು ಬರುವ ಕಾಡು ಹಂದಿಗಳನ್ನು ಬೆದರಿಸಲು ಅನಾನಸ್ ಒಳಗೆ ಸ್ಫೋಟಕಗಳನ್ನು ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಿಡಿಮದ್ದು ತುಂಬಿದ್ದ ಅನಾನಸ್‌ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವಿಗೀಡಾದ ಪ್ರಕರಣ ಸಂಬಂಧ ಶಂಕಿತರನ್ನು ವಶಕ್ಕೆ ಪಡೆದು ಕೇರಳ ಅರಣ್ಯ ಇಲಾಖೆ ವಿಚಾರಣೆ ನಡೆಸುತ್ತಿದೆ. 

ಪಾಲಕ್ಕಾಡ್ ಜಿಲ್ಲೆಯಲ್ಲಿ ಗರ್ಭಿಣಿ ಆನೆ ಜೀವ ಕಳೆದುಕೊಂಡಿದ್ದು ದುರಾದೃಷ್ಟಕರ. ಸಾಕಷ್ಟು ಜನರು ಈ ಬಗ್ಗೆ ಗಮನ ಸೆಳೆದಿದ್ದೀರಿ. ನಿಮ್ಮ ಕಾಳಜಿ ವ್ಯರ್ಥವಾಗಲು ಬಿಡುವುದಿಲ್ಲ. ನಿಮ್ಮ ಹೋರಾಟಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

ಮುಂದುವರೆದು ಈಗಾಗಲೇ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಜಂಟಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಅರಣ್ಯ ವರಿಷ್ಠಾಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಒದಗಿಸಲು ನಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮಾಡಲಿದ್ದೇವೆ ಎಂದು ಕೇರಳ ಸಿಎಂ ಭರವಸೆ ನೀಡಿದ್ದಾರೆ 

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಈ ನಡುವೆ, ಆನೆಗಳಿಗೆ ಸಿಡಿಮದ್ದು ತಿನ್ನಿಸುವುದು ಭಾರತೀಯ ಸಂಸ್ಕೃತಿ ಅಲ್ಲ ಎಂದು ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. ಇನ್ನು ರತನ್ ಟಾಟಾ, ಮನೇಕಾ ಗಾಂಧಿ, ವಿರಾಟ್ ಕೊಹ್ಲಿ ಸೇರಿದಂತೆ ಸಂವೇದನಾಶೀಲ ಮನಸ್ಸುಗಳು ಈ ಘಟನೆಯನ್ನು ಕಟುವಾದ ಮಾತುಗಳಿಂದ ಖಂಡಿಸಿದ್ದಾರೆ.

ಉದ್ದೇಶ ಪೂರ್ವಕ ಕೊಲೆಗೆ ಸಮ; ಗರ್ಭಿಣಿ ಆನೆ ಕೊಂದ ಘಟನೆ ಖಂಡಿಸಿದ ರತನ್ ಟಾಟಾ!

ಏನಿದು ಘಟನೆ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಸಮೀಪದಲ್ಲಿ ಗರ್ಭಿಣಿ ಕಾಡಾನೆಯೊಂದು ಆಹಾರ ಅರಸಿ ನಾಡಿಗೆ ಬಂದಿದೆ. ಈ ವೇಳೆ ಕೆಲ ದುಷ್ಟರು ಅನಾನಸ್ ಹಣ್ಣಿನೊಳಗಿಟ್ಟ ಸ್ಫೋಟಕವನ್ನು ಬಾಯಿಗಿಟ್ಟು ಜಗಿದಿದೆ. ಪರಿಣಾಮ ದವಡೆಗಳು ಚೂರುಚೂರಾಗಿವೆ. ನೋವು ತಡೆಯಲಾರದೆ ಆನೆ ಒಂದು ವಾರಕ್ಕೂ ಹೆಚ್ಚು ಸಮಯ ನದಿಯ ನೀರಲ್ಲೇ ನಿಂತುಕೊಂಡಿದೆ. ಕೊನೆಗೂ ಯಾರೂ ಆನೆಗೆ ಚಿಕಿತ್ಸೆ ನೀಡದ ಕಾರಣ, ನರಕವೇದನೆಯಲ್ಲೇ ನದಿಯಲ್ಲಿ ಪ್ರಾಣಬಿಟ್ಟಿದೆ. ಈ ಆನೆಯ ಮರಣೋತ್ತರ ಪರೀಕ್ಷೆ ಮಾಡಿದಾಗ ಆನೆಯ ಹೊಟ್ಟೆಯಲ್ಲಿ ಮರಿ ಇರುವುದು ತಿಳಿದು ಬಂದಿದೆ. 

ದುರುಳರು ಕಾಡು ಪ್ರಾಣಿ ಬೇಟೆಗೆ ಇಟ್ಟಂತಹ ಸಿಡಿಮದ್ದನ್ನು ತಿಂದು ಪ್ರಾಣಬಿಟ್ಟಿರುವ ಶಂಕೆಯೂ ಕೇಳಿ ಬಂದಿದೆ. ಏನೇ ಆದರು ಕಾಡು ಪ್ರಾಣಿಯನ್ನು ಈ ರೀತಿ ಹಿಂಸಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಘಟನೆಯ ಬಳಿಕವಾದರೂ ಅರಣ್ಯ ಇಲಾಖೆ ಇಂತಹ ಘಟನೆ ಮರುಕಳಿಸದಂತೆ ತಡೆಯಬೇಕಿದೆ. ಇದರ ಜತೆಗೆ ಜನರು ಕೂಡಾ ಮೃಗೀಯ ಕೆಲಸವನ್ನು ಬಿಡಬೇಕಾಗಿದೆ. ಒಟ್ಟಿನಲ್ಲಿ ಈ ಒಂದು ಸಾವು ಸಾವಿರಾರು ಜನರ ಪಾಲಿಗೆ ನೀತಿಪಾಠವಾಗಲಿ ಎನ್ನುವುದು ಸುವರ್ಣ ನ್ಯೂಸ್.ಕಾಂ ಕಳಕಳಿ.