ಬಡವರಿಗೆ ದೀಪಾವಳಿ, ದಸರಾ ಕೊಡುಗೆ ನೀಡಿದ ಮೋದಿ ಸರ್ಕಾರ..!
ಕೇಂದ್ರದ ಉಚಿತ ಪಡಿತರ 3 ತಿಂಗಳು ವಿಸ್ತರಣೆ, ಡಿಸೆಂಬರ್‌ವರೆಗೆ ಸಿಗಲಿದೆ ಉಚಿತ ಪಡಿತರ
ನವದೆಹಲಿ(ಸೆ.29): ಕೇಂದ್ರ ಸಚಿವ ಸಂಪುಟವು ಬುಧವಾರ ಕೇಂದ್ರದ ಪಾಲಿನ ಉಚಿತ ಪಡಿತರವನ್ನು ಇನ್ನು 3 ತಿಂಗಳವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನು ಬಡವರಿಗೆ ದೀಪಾವಳಿ-ದಸರಾ ಕೊಡುಗೆ ಎಂದೇ ಪರಿಗಣಿಸಲಾಗಿದೆ. ‘ಉಚಿತ ಪಡಿತರ ವಿಸ್ತರಿಸುವ ಮೂಲಕ ಹಬ್ಬದ ಸಮಯದಲ್ಲಿ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ. 80 ಕೋಟಿ ಭಾರತೀಯರು ಉಚಿತ ಪಡಿತರ ಪಡೆಯುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಅವರಿಗೆ ಅನುಕೂಲವಾಗುವಂತೆ ಪಡಿತರ ವಿತರಣೆಗೆ ನಿರ್ಧರಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸರ್ಕಾರ ಪ್ರತಿ ತಿಂಗಳು 80 ಕೋಟಿ ಬಡವರಿಗೆ 5 ಕೇಜಿ ಗೋಧಿ ಹಾಗೂ ಅಕ್ಕಿಯನ್ನು ಉಚಿತವಾಗಿ ವಿತರಿಸುತ್ತದೆ. 2020ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಘೋಷಿಸಿದ ಲಾಕ್ಡೌನ್ ವೇಳೆ ಬಡವರಿಗೆ ನೆರವಾಗಲು ಕೇಂದ್ರ ಈ ಯೋಜನೆ ಘೋಷಿಸಿದ್ದು, ಯೋಜನೆ ಅವಧಿ ಸೆ.30ಕ್ಕೆ ಅಂತ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಬುಧವಾರ ಯೋಜನೆಯನ್ನು ಡಿಸೆಂಬರ್‌ವರೆಗೆ ಮುಂದುವರೆಸುವ ನಿರ್ಧಾರ ಕೈಗೊಂಡಿದೆ.
'ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೂ ಮನೆ'
ಈವರೆಗೆ ಸರ್ಕಾರ ಈ ಯೋಜನೆಗಾಗಿ 3.45 ಲಕ್ಷ ಕೋಟಿ ರು. ವ್ಯಯಿಸಿದ್ದು, ಯೋಜನೆ ವಿಸ್ತರಣೆಯು ದೇಶದ ಬೊಕ್ಕಸದ ಮೇಲೆ 44,762 ಕೋಟಿ ರು. ಹೆಚ್ಚುವರಿ ಹೊರೆಯಾಗಲಿದೆ. ಮುಂಬರುವ ಅ.1 ರಿಂದ 3 ತಿಂಗಳವರೆಗೆ ಒಟ್ಟು 122 ಲಕ್ಷ ಟನ್ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
‘ಕೋವಿಡ್ ಸೃಷ್ಟಿಸಿದ ಅಭದ್ರತೆ ವಿರುದ್ಧ ಜಗತ್ತು ಹೋರಾಡುತ್ತಿರುವಾಗ ಭಾರತವು ಬಡ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಲು ಯಶಸ್ವಿಯಾಗಿದೆ. ಜನರು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ಹಾಗೂ ಮುಂಬರುವ ಹಬ್ಬಗಳನ್ನು ಪರಿಗಣಿಸಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಇನ್ನು 3 ತಿಂಗಳು ಮುಂದುವರೆಸಲಾಗುವುದು’ ಎಂದು ಕೇಂದ್ರದ ಅಧಿಕೃತ ಘೋಷಣೆಯಲ್ಲಿ ತಿಳಿಸಲಾಗಿದೆ.