Asianet Suvarna News Asianet Suvarna News

ಪವಿತ್ರ ಅಮರನಾಥ ಯಾತ್ರೆಗೆ 3 ಲಕ್ಷ ಭಕ್ತರು ನೋಂದಣಿ, ಜೂನ್ 30 ರಿಂದ ಆರಂಭ!

  • ಜೂನ್ 30 ರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭ
  • ದಕ್ಷಿಣ ಕಾಶ್ಮೀರ ಹಿಮಾಲಯ ವಲಯದಲ್ಲಿ ಭಾರಿ ಭದ್ರತೆ
  • ಆನ್‌ಲೈನ್ ಮೂಲಕ 3 ಲಕ್ಷ ಭಕ್ತರು ನೋಂದಣಿ
3 lakhs pilgrims registered for Amarnath Yatra from Online scheduled to begin from June 30 ckm
Author
Bengaluru, First Published Jun 27, 2022, 6:59 PM IST | Last Updated Jun 27, 2022, 6:59 PM IST

ಕಾಶ್ಮೀರ(ಜೂ.27): ಪವಿತ್ರ ಅಮರನಾಥ ಯಾತ್ರೆ ಜೂನ್ 30 ರಿಂದ ಆರಂಭಗೊಳ್ಳುತ್ತಿದೆ. ಆನ್‌ಲೈನ್ ಮೂಲಕ ಈಗಾಗಲೇ 3 ಲಕ್ಷ ಭಕ್ತರು ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗದಲ್ಲಿ ಭಾರಿ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಿದೆ. ಯಾತ್ರೆ ಆರಂಭಗೊಂಡರು ನೋಂದಣಿ ಮುಂದುವರಿಯಲಿದೆ. ಈಗಲೂ ಭಕ್ತರಿಗೆ ಯಾತ್ರೆಗೆ ನೋಂದಣಿ ಮಾಡಲು ಅವಕಾಶವಿದೆ ಎಂದು ಅಮರನಾಥ ಯಾತ್ರಾ ಬೋರ್ಡ್ ಹೇಳಿದೆ.

ಅಮರನಾಥ ಯಾತ್ರೆಗೆ ಕೇಂದ್ರದಿಂದ ಹೆಲಿಕಾಪ್ಟರ್ ಸೇವೆ, ಬುಕಿಂಗ್ ಪೋರ್ಟಲ್ ಚಾಲನೆ!

ಎರಡು ದಾರಿಗಳ ಮೂಲಕ ಅಮರನಾಥ ಯಾತ್ರೆ ನಡೆಯಲಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ನುವಾನ್‌ನಿದ 48 ಕಿಲೋಮೀಟರ್ ದೂರದ ಯಾತ್ರೆ ಹಾಗೂ ಕೇಂದ್ರ ಕಾಶ್ಮೀರದ ಗುಂದೆರ್ಬಾಲ್‌ನಿಂದ 14 ಕಿಲೋಮೀಟರ್ ದೂರದ ಯಾತ್ರೆ ಮತ್ತೊಂದು ದಾರಿಯಾಗಿದೆ.

ಸಾಧುಗಳು ಸೇರಿದ ಮೊದಲ ತಂಡ ಕಾಶ್ಮೀರದ ಭಗವತಿ ನಗರ ಹಾಗೂ ಜಮ್ಮು ರಾಮಮಂದಿರದಿಂದ ತೆರಳಲಿದೆ. ಯಾತ್ರೆಗೆ 13 ವರ್ಷಕ್ಕಿಂತ ಕೆಳಗಿನವರು, 75 ವರ್ಷಕ್ಕಿಂತ ಮೇಲಿನವರು ಹಾಗೂ 6 ವಾರಕ್ಕಿಂತ ಹೆಚ್ಚಿನ ಗರ್ಭಿಣಿಯರಿಗೆ ನಿರ್ಬಂಧ ಹೇರಲಾಗಿದೆ. ಆರೋಗ್ಯದ ದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜೂ.30ರಿಂದ ಅಮರನಾಥ ಗುಹೆಗೆ ಭೇಟಿ ನೀಡುವ ಯಾತ್ರಿಕರ ಕೊನೆಯ ಹೆಲಿಕಾಪ್ಟರ್‌ ನಿಲ್ದಾಣವಾದ ಪಂಚಕರ್ಣಿಗೆ ಶ್ರೀನಗರದಿಂದ ಹೊಸ ಹೆಲಿಕಾಪ್ಟರ್‌ ಸೇವೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಮರನಾಥ ಯಾತ್ರೆಗೆ ಈಗಾಗಲೇ 2 ಮಾರ್ಗಗಳ ಮೂಲಕ ಹೆಲಿಕಾಪ್ಟರ್‌ ಸೇವೆ ಒದಗಿಸಲಾಗುತ್ತಿದೆ. 3ನೇ ಹೆಲಿಕಾಪ್ಟರ್‌ ಇದಾಗಲಿದೆ.

ಶೀಘ್ರದಲ್ಲೇ ಅಮರನಾಥ ಯಾತ್ರೆ ಪ್ರಾರಂಭ; ಮಂಜಲ್ಲಿ ಕಾಣಿಸಿಕೊಳ್ಳೋ ಭೋಲೇನಾಥ

3,888 ಮೀ. ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಯಾತ್ರಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹೆಲಿಕಾಪ್ಟರ್‌ ಸೇವೆ ಒದಗಿಸಲು ಸರ್ಕಾರ ಆಲೋಚಿಸಿದೆ. ಈ ಸೇವೆ ಶ್ರೀನಗರ ಸಮೀಪ ಬುದ್ಗಾಮ್‌ನಿಂದ ಪಂಚಕರ್ಣಿಗೆ ಕಾಪ್ಟರ್‌ ಸೌಲಭ್ಯ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬಲ್ಟಾಲ್‌ ಮತ್ತು ಪಹಲ್‌ಗಾಂನಿಂದ ಪಂಚಕರ್ಣಿಗೆ ಹೆಲಿಕಾಪ್ಟರ್‌ ಸೌಲಭ್ಯವಿದೆ. ಈ ಬಾರಿಯ ಅಮರನಾಥ ಯಾತ್ರೆ ಜೂ.30ರಂದು ಆರಂಭಗೊಳ್ಳಲಿದ್ದು, 43 ದಿನಗಳ ಕಾಲ ಇರಲಿದೆ.

ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಯುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಅಮರನಾಥ ಯಾತ್ರಿಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್‌ಐಡಿ) ಟ್ಯಾಗ್‌ ವಿತರಿಸಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಜೊತೆಗೆ ಯಾತ್ರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಅವರಿರುವ ಸ್ಥಳವನ್ನು ದಿನದ 24 ಗಂಟೆಯೂ ಟ್ರ್ಯಾಕ್‌ ಮಾಡಲಾಗುತ್ತದೆ.

ಈ ಕ್ರಮದಿಂದಾಗಿ ಯಾತ್ರಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಪ್ರತಿಕೂಲ ಹವಾಮಾನ, ಆರೋಗ್ಯ ಸಮಸ್ಯೆ ಮತ್ತು ಸಂಭವನೀಯ ಉಗ್ರದಾಳಿಯಿಂದ ರಕ್ಷಿಸಲು ಅನುಕೂಲವಾಗಲಿದೆ. ಜೂ.30ರಿಂದ ಆರಂಭವಾಗಲಿರುವ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಭಕ್ತರಿಗೆ ಸುಲಭ ಮತ್ತು ತೊಂದರೆಮುಕ್ತ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios