ಅಮರನಾಥ ಯಾತ್ರೆಗೆ ಕೇಂದ್ರದಿಂದ ಹೆಲಿಕಾಪ್ಟರ್ ಸೇವೆ, ಬುಕಿಂಗ್ ಪೋರ್ಟಲ್ ಚಾಲನೆ!

  • ಅಮರನಾಥ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೇವೆ
  • ಬುಕಿಂಗ್ ಪೋರ್ಟಲ್‌ಗೆ ಚಾಲನೆ ನೀಡಿದ ಲೆ.ಗವರ್ನರ್
  • ಜೂನ್ 30 ರಿಂದ ಹೆಲಿಕಾಪ್ಟರ್ ಸೇವೆ ಆರಂಭ
Jammu and Kashmir L Governor Manoj Sinha  launch  online helicopter booking portal for Amarnath yatra ckm

ಶ್ರೀನಗರ(ಜೂ.18): ಪವಿತ್ರ ಅಮರನಾಥ ಯಾತ್ರಯನ್ನು ಮತ್ತಷ್ಟು ಸುಲಭವಾಗಿಸಲು ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಇದೀಗ ಈ ಬಾರಿಯ ಯಾತ್ರೆಗೆ ಹೆಲಿಕಾಪ್ಟರ್ ಮೂಲಕ ಸಾಗುವ ಭಕ್ತರಿಗೆ ಬುಕಿಂಗ್ ಮಾಡಿಕೊಳ್ಳಲು ಹೊಸ ಪೋರ್ಟಲ್ ಆರಂಭಿಸಲಾಗಿದೆ. ಈ ಪೋರ್ಟಲ್ ಮೂಲಕ ಹೆಲಿಕಾಪ್ಟರ್ ಬುಕ್ ಮಾಡಿ ಅಮರನಾಥ ದರ್ಶನ ಪಡೆಯಬಹುದು.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಕೆ ಸಿನ್ಹಾ ನೂತನ ಹೆಲಿಕಾಪ್ಟರ್ ಬುಕಿಂಗ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ಭಕ್ತರು ಶ್ರೀನಗರದಿಂದ ನೇರವಾಗಿ ಪಂಚತಾರಣಿಗೆ ಪ್ರಯಾಣ ಮಾಡಬಹುದು. ಖಾಸಗಿ ಕಂಪನಿಗಳು ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಒದಗಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಕೂಡ ಹೆಲಿಕಾಪ್ಟರ್ ಸೇವೆ ನೀಡುತ್ತಿದೆ. 

ಶೀಘ್ರದಲ್ಲೇ ಅಮರನಾಥ ಯಾತ್ರೆ ಪ್ರಾರಂಭ; ಮಂಜಲ್ಲಿ ಕಾಣಿಸಿಕೊಳ್ಳೋ ಭೋಲೇನಾಥ

ಜೂ.30ರಿಂದ ಅಮರನಾಥ ಗುಹೆಗೆ ಭೇಟಿ ನೀಡುವ ಯಾತ್ರಿಕರ ಕೊನೆಯ ಹೆಲಿಕಾಪ್ಟರ್‌ ನಿಲ್ದಾಣವಾದ ಪಂಚಕರ್ಣಿಗೆ ಶ್ರೀನಗರದಿಂದ ಹೊಸ ಹೆಲಿಕಾಪ್ಟರ್‌ ಸೇವೆ ಒದಗಿಸಲಾಗಿದೆ. ಅಮರನಾಥ ಯಾತ್ರೆಗೆ ಈಗಾಗಲೇ 2 ಮಾರ್ಗಗಳ ಮೂಲಕ ಹೆಲಿಕಾಪ್ಟರ್‌ ಸೇವೆ ಒದಗಿಸಲಾಗುತ್ತಿದೆ. 3ನೇ ಹೆಲಿಕಾಪ್ಟರ್‌ ಇದಾಗಿದೆ.

3,888 ಮೀ. ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಯಾತ್ರಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹೆಲಿಕಾಪ್ಟರ್‌ ಸೇವೆ ಒದಗಿಸಲು ಸರ್ಕಾರ ಆಲೋಚಿಸಿದೆ. ಈ ಸೇವೆ ಶ್ರೀನಗರ ಸಮೀಪ ಬುದ್ಗಾಮ್‌ನಿಂದ ಪಂಚಕರ್ಣಿಗೆ ಕಾಪ್ಟರ್‌ ಸೌಲಭ್ಯ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಬಲ್ಟಾಲ್‌ ಮತ್ತು ಪಹಲ್‌ಗಾಂನಿಂದ ಪಂಚಕರ್ಣಿಗೆ ಹೆಲಿಕಾಪ್ಟರ್‌ ಸೌಲಭ್ಯವಿದೆ. ಈ ಬಾರಿಯ ಅಮರನಾಥ ಯಾತ್ರೆ ಜೂ.30ರಂದು ಆರಂಭಗೊಳ್ಳಲಿದ್ದು, 43 ದಿನಗಳ ಕಾಲ ಇರಲಿದೆ.

ಪಾಕ್‌ ಗಡಿಯಲ್ಲಿ ನಿಗೂಢ ಸುರಂಗ ಪತ್ತೆ, ಅಮರನಾಥ ಯಾತ್ರೆಗೆ ಅಡ್ಡಿಗೆ ಉಗ್ರರ ಯತ್ನ

ಅಮರನಾಥ ಯಾತ್ರಿಕರ ರಕ್ಷಣೆಗೆ ಇಸ್ರೇಲ್‌ ನಿರ್ಮಿತ ಉಪಕರಣ
ಜೂ.30ರಿಂದ ಆರಂಭವಾಗುವ ಪವಿತ್ರ ಅಮರನಾಥ ಯಾತ್ರೆಗೆ ಉಗ್ರರ ದಾಳಿ ಭೀತಿ ಇರುವ ಹಿನ್ನೆಲೆಯಲ್ಲಿ, ಹೆಚ್ಚಿನ ಭದ್ರತೆಗಾಗಿ ಈ ಬಾರಿ ಭದ್ರತಾ ಸಂಸ್ಥೆಗಳು ಇಸ್ರೇಲ್‌ ನಿರ್ಮಿತ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳ ಮೊರೆ ಹೋಗಿವೆ ಎಂದು ಮೂಲಗಳು ತಿಳಿಸಿವೆ.

ಅದರಲ್ಲೂ ಭಕ್ತರು ಸಂಚರಿಸುವ ವಾಹನಗಳನ್ನು ಸುಲಭವಾಗಿ ಗುರಿಯಾಗಿಸಿ ಬಳಸಬಹುದಾದ ಸ್ಟಿಕ್ಕಿಬಾಂಬ್‌ ಬಳಸಲು ಉಗ್ರರು ಸಜ್ಜಾಗಿರುವ ಮಾಹಿತಿ ಭದ್ರತಾ ಸಂಸ್ಥೆಗಳಿಗೆ ಸಿಕ್ಕಿದೆ. ಹೀಗಾಗಿ ಸ್ಟಿಕ್ಕಿಬಾಂಬ್‌ ಸೇರಿದಂತೆ ಸ್ಫೋಟಕಗಳನ್ನು ಪತ್ತೆ ಮಾಡಲು ಇಸ್ರೇಲ್‌ ನಿರ್ಮಿತ ಉಪಕರಣ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಭಕ್ತರ ರಕ್ಷಣೆಗಾಗಿ ಬಳಸಲಾಗುತ್ತಿದೆ. ಅಲ್ಲದೆ ಕಣ್ಗಾವಲಿಗೆ 50ಕ್ಕಿಂತ ಹೆಚ್ಚು ಡ್ರೋನ್‌ ಬಳಸಲಾಗುತ್ತಿದೆ. ಭದ್ರತೆಯಲ್ಲಿ ಸಮನ್ವಯಕ್ಕಾಗಿ ಸೇನೆ, ಸಿಆರ್‌ಪಿಎಫ್‌, ಕಾಶ್ಮೀರ ಪೊಲೀಸ್‌, ಜಮ್ಮು ಮತ್ತು ಕಾಶ್ಮೀರ ಆಡಳಿತ ಹಾಗೂ ಅಮರನಾಥ ದೇಗುಲ ಮಂಡಳಿಯಿಂದ ಮೊದಲ ಬಾರಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೂ.30-ಆ.11ರವರೆಗೆ 43 ದಿನಗಳ ಕಾಲ ನಡೆಯುವ ಯಾತ್ರೆಯ ವೇಳೆ ಪವಿತ್ರ ಹಿಮಲಿಂಗ ದರ್ಶನಕ್ಕಾಗಿ ಈ ಬಾರಿ 3 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 2 ವರ್ಷ ರದ್ದಾಗಿದ್ದ ಯಾತ್ರೆಗೆ ಈ ಬಾರಿ ಹೆಚ್ಚಿನ ಜನರ ಆಗಮನದ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉಗ್ರರು ಕೂಡಾ ಭಕ್ತರನ್ನು ಗುರಿಯಾಗಿಸಿ ದಾಳಿ ನಡೆಸುವ ಆತಂಕ ಎದುರಾಗಿದೆ.
 

Latest Videos
Follow Us:
Download App:
  • android
  • ios