ಪುಲ್ವಾಮಾ(ಜೂ.03): ಜುಮ್ಮು ಕಾಶ್ಮೀರದ ಪಲ್ವಾಮಾದಲ್ಲಿ ಬುಧವಾರ ನಸುಕಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಭದ್ರತಾ ಪಡೆ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ, ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿಯಾಗಿ  ಇಲ್ಲಿನ ಕಂಗನ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ನಡೆಸಿತ್ತು. ಹೀಗಿರುವಾಗ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಐಇಡಿ ತಜ್ಞ ಸೇರಿದಂತೆ ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.

ದಾಳಿ ಸಂಬಂಧ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ  ಕಡಿತಗೊಳಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಮಂಗಳವಾರ ಟ್ರಾಲ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜೈಷೆ ಮೊಹಮ್ಮದ್ ಉಗ್ರನನ್ನು ಹತ್ಯೆಗೈಯಲಾಗಿತ್ತು. ಈ ವೇಳೆಯಲ್ಲೂ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಲಾಗಿತ್ತು.