Asianet Suvarna News Asianet Suvarna News

14 ತಿಂಗಳ ಹಿಂದೆ ಕಿಡ್ನ್ಯಾಪ್ : ತನ್ನ ಅಪಹರಿಸಿದವನ ಬಿಟ್ಟು ಬರಲೊಪ್ಪದೆ ರಚ್ಚೆ ಹಿಡಿದು ಅತ್ತ 2 ವರ್ಷದ ಕಂದ

ಜೈಪುರದಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವನ್ನು ಪತ್ತೆ ಮಾಡಿದ ಪೊಲೀಸರು ಮಗುವನ್ನು ಕರೆದುಕೊಂಡು ಹೋಗಲು ಬಂದಾಗ ಮಗು ತನ್ನ ಕಿಡ್ನ್ಯಾಪ್ ಮಾಡಿದ ವ್ಯಕ್ತಿಯನ್ನು ಬಿಟ್ಟು ಬರಲು ಒಪ್ಪದೇ ಜೋರಾಗಿ ಅಳಲು ಶುರು ಮಾಡಿದ ಘಟನೆ ನಡೆದಿದೆ.

2year old won't let go of his abductor Kidnapper breaks down in tears filmy style incident in Jaipur akb
Author
First Published Aug 30, 2024, 4:28 PM IST | Last Updated Aug 30, 2024, 4:36 PM IST

ಜೈಪುರದಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವನ್ನು ಪತ್ತೆ ಮಾಡಿದ ಪೊಲೀಸರು ಮಗುವನ್ನು ಕರೆದುಕೊಂಡು ಹೋಗಲು ಬಂದಾಗ ಮಗು ತನ್ನ ಕಿಡ್ನ್ಯಾಪ್ ಮಾಡಿದ ವ್ಯಕ್ತಿಯನ್ನು ಬಿಟ್ಟು ಬರಲು ಒಪ್ಪದೇ ಜೋರಾಗಿ ಅಳಲು ಶುರು ಮಾಡಿದ ಘಟನೆ ನಡೆದಿದೆ. ಮಗು ಅಳುವುದನ್ನು ನೋಡಿ ಅತ್ತ ಅಪಹರಣ ಮಾಡಿದ ವ್ಯಕ್ತಿಯೂ ಭಾವುಕನಾಗಿದ್ದ. ಇಂತಹ ಮನಮಿಡಿಯುವ ಘಟನೆ ನಡೆದಿದ್ದು, ರಾಜಸ್ಥಾನದ ಜೈಪುರದ ಪೊಲೀಸ್ ಠಾಣೆಯಲ್ಲಿ. 

ಆತ ತನ್ನನ್ನು ಅಪಹರಿಸಿದವನು ಎಂದು ತಿಳಿಯದ ಮುಗ್ಧ ಮಗು ಕಿಡ್ನ್ಯಾಪ್ ಮಾಡಿದವನನ್ನು ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಅಳಲು ಶುರು ಮಾಡಿದ್ದಲ್ಲದೇ ಆತನನ್ನು ಬಿಟ್ಟು ಹೋಗಲು ನಿರಾಕರಿಸಿದ ಘಟನೆ ನಡೆದಿತ್ತು. ಇತ್ತ ಮಗು ಅಳುತ್ತಿದ್ದಂತೆ ಅತ್ತ ಆತನನ್ನು 14  ತಿಂಗಳ ಹಿಂದೆ ಕಿಡ್ನ್ಯಾಪ್ ಮಾಡಿದ್ದ ಆರೋಪಿಯ ಕಣ್ಣಾಲಿಗಳು ಕೂಡ ತುಂಬಿ ಬಂದವು. ಆದರೂ ಪೊಲೀಸರು ಇವರಿಬ್ಬರನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸಿದರು. ಅಲ್ಲದೇ ಮಗುವನ್ನು ತಾಯಿಯ ಸುಪರ್ದಿಗೆ ನೀಡಿದರು. ಈ ಮೂಲಕ 11 ತಿಂಗಳ ಮಗು ಪೃಥ್ವಿ ಕಿಡ್ನ್ಯಾಪ್ ಪ್ರಕರಣಕ್ಕೆ ಪೊಲೀಸರು ಸುಖಾಂತ್ಯಗೊಳಿಸಿದರು. 

ಸಂಬಂಧಿಯ ಮದುವೆಗೆಂದು ಬಂದಿದ್ದ ಯೋಧನನ್ನು ಕಿಡ್ಯಾಪ್ ಮಾಡಿ ಹತ್ಯೆಗೈದ ಭಯೋತ್ಪಾದಕರು

ಆದರೆ ಮಗು ಮಾತ್ರ ಆಕೆ ತನ್ನ ಹೆತ್ತಮ್ಮ ಎಂಬುದನ್ನು ತಿಳಿಯದೇ ಅಳು ಮುಂದುವರಿಸಿತ್ತು. ಅಮ್ಮನ ಮಡಿಲು ಸೇರಿದ ಮಗು ಆಕೆಯ ಕೈಯಲ್ಲಿ ನಿಲ್ಲಲು ಒಪ್ಪದೇ 14 ತಿಂಗಳ ಕಾಲ ತನ್ನ ಜೊತೆಗಿದ್ದ ಕಿಡ್ನ್ಯಾಪರ್‌ ಬಳಿ ಹೋಗಲು  ಹಾತೊರೆಯುತ್ತಿತ್ತು. 14 ತಿಂಗಳ ಹಿಂದೆ 11 ತಿಂಗಳ ಮಗು ಪೃಥ್ವಿ ಅಪಹರಣ ನಡೆದಿದ್ದು,  ಈಗ ಮಗುವಿಗೆ ಈಗ ಎರಡು ವರ್ಷ ತುಂಬಿದೆ. 

ಆರೋಪಿ ತಲೆಗೆ ಬಹುಮಾನ ಘೋಷಿಸಿದ್ದ ಪೊಲೀಸರು

ಜೈಪುರದ ಸಂಗನೇರ್‌ ಸದರ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಪಹರಣ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಬರೋಬ್ಬರಿ 14 ತಿಂಗಳುಗಳೇ ಬೇಕಾಯ್ತು. ಪೊಲೀಸರು ಈಗ ಆರೋಪಿಯನ್ನು ಬಂಧಿಸಿ, ಮಗುವನ್ನು ಆತನ ವಶದಿಂದ ಹಿಂಪಡೆದಿದ್ದಾರೆ. ಆರೋಪಿಯ ತಲೆಗೆ ಪೊಲೀಸರು 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು.

ಹೆಡ್‌ಕಾನ್ಸ್‌ಟೇಬಲ್ ಆಗಿದ್ದ ಆರೋಪಿ

ವರದಿಯ ಪ್ರಕಾರ, ಹೆಡ್‌ ಕಾನ್ಸ್‌ಟೇಬಲ್ ಆಗಿದ್ದ ಆರೋಪಿ ತನುಜ್ ಚಹರ್‌ ವೃಂದಾವನದ ಪರಿಕ್ರಮ ಪಥದ ಬಳಿ ಯಮುನಾ ನದಿಯ ಸಮೀಪ ಬರುವ ಖದರ್‌ ಎಂಬ ಪ್ರದೇಶದಲ್ಲಿ ಗುಡಿಸಲೊಂದನ್ನು ನಿರ್ಮಿಸಿಕೊಂಡು ಸನ್ಯಾಸಿಯಂತೆ ವಾಸ ಮಾಡುತ್ತಿದ್ದ.  ತನ್ನ ಗುರುತನ್ನು ಮುಚ್ಚಿಡಲು ಆತ ಗಡ್ಡ ಹಾಗೂ ಕೂದಲನ್ನು ಕತ್ತರಿಸದೇ ಉದ್ದವಾಗಿ ಬಿಟ್ಟಿದ್ದ.  ಅಲ್ಲದೇ ಬಿಳಿ ಗಡ್ಡಕ್ಕೆ ಕಲರಿಂಗ್ ಮಾಡಿಕೊಳ್ಳುತ್ತಿದ್ದ. ಉತ್ತರ ಪ್ರದೇಶದ ಅಗ್ರಾ ನಿವಾಸಿಯಾದ ಆರೋಪಿ ತನುಜ್ ಈ ಮೊದಲು ಅಲಿಗಢದ ಮೀಸಲು ಪೊಲೀಸ್ ಪಡೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಉತ್ತರ ಪ್ರದೇಶದ ವಿಶೇಷ ಪೊಲೀಸ್ ತಂಡ ಹಾಗೂ ಕಣ್ಗಾವಲು ತಂಡದಲ್ಲಿಯೂ ಆರೋಪಿ ತನುಜ್ ಕೆಲಸ ಮಾಡಿದ್ದ. 

ಪೊಲೀಸ್ ಕಾರ್ಯ ವಿಧಾನಗಳನ್ನು ಚೆನ್ನಾಗಿ ತಿಳಿದಿದ್ದ ಆತ ತಾನು ನಾಪತ್ತೆಯಾದ ವೇಳೆ ಮೊಬೈಲ್ ಫೋನ್ ಅನ್ನು ಬಳಸುತ್ತಿರಲಿಲ್ಲ. ಅಲ್ಲದೇ ಮಗುವಿನ ಅಪಹರಣದ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ಆತ ಮತ್ತೆ ಮತ್ತೆ ತನ್ನ ವಾಸಸ್ಥಾನವನ್ನು ಬದಲಿಸುತ್ತಿದ್ದ. ಬಹಳ ಬುದ್ಧಿವಂತಿಕೆ ಬಳಸುತ್ತಿದ್ದ ಈತ ಒಮ್ಮೆ ಭೇಟಿಯಾದವರನ್ನು ಮತ್ತೆ ಭೇಟಿಯಾಗುತ್ತಿರಲಿಲ್ಲ, ಹೊಸ ವ್ಯಕ್ತಿಗಳಿಗೆ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿರಲಿಲ್ಲ, ಅಲ್ಲದೇ ಪೃಥ್ವಿಯನ್ನು ತನ್ನ ಸ್ವಂತ ಮಗ ಎಂಬಂತೆ ನೋಡಿಕೊಳ್ಳುತ್ತಿದ್ದ. ಅಂಗ್ಲಮಾಧ್ಯಮವೊಂದರ ವರದಿ ಪ್ರಕಾರ ಆರೋಪಿಯೂ ಮಗುವಿನ ತಾಯಿಗೆ ಸಂಬಂಧಿಯೂ ಆಗಿದ್ದ. 

ಆರೋಪಿಯ ಬಂಧನಕ್ಕೆ ಸನ್ಯಾಸಿ ವೇಷ ಹಾಕಿದ್ದ ಪೊಲೀಸರು

ಆದರೆ ಆಗಸ್ಟ್ 22 ರಂದು ವಿಶೇಷ ಪೊಲೀಸ್ ತಂಡ ಆಗ್ರಾದ ಮಥುರಾ ತಲುಪಿದ್ದು, ಅಲ್ಲಿಂದ ಅಲಿಗಢಕ್ಕೆ ತೆರಳಿ ಆರೋಪಿ ತನುಜ್ ಚಹರ್‌ನನ್ನು ಬಂಧಿಸಿದ್ದಾರೆ. ಇದಕ್ಕೂ ಮೊದಲಿ ಪೊಲೀಸರು ಕೂಡ ಈತನ ಪತ್ತೆಗೆ ಸನ್ಯಾಸಿಯಂತೆ ವೇಷ ಧರಿಸಿದ್ದು ಆರೋಪಿ ತನುಜ್ ವಾಸವಾಗಿದ್ದ ಯಮುನಾ ತೀರದಲ್ಲೇ ವಾಸ ಮಾಡಿದ್ದಾರೆ. ಅಲ್ಲದೇ ಧಾರ್ಮಿಕ ಹಾಡುಗಳನ್ನು ಹಾಡುತ್ತಾ ತನುಜ್‌ನ ಪತ್ತೆಗೆ ಮಾರುವೇಷ ಹಾಕಿದ್ದಾರೆ.  ಆದರೆ ಆಗಸ್ಟ್ 27ರಂದು ತನುಜ್ ವೃಂದಾವನದಿಂದ ಅಲಿಗಢಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅಲ್ಲಿಗೆ ಪೊಲೀಸರು ತೆರಳಿದ್ದಾರೆ. ಪೊಲೀಸರು ಅಲ್ಲಿಗೆ ಹೋದಾಗ ತನುಜ್ ಮಗುವಿನೊಂದಿಗೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಆತನನ್ನು ಹಿಡಿಯುವುದಕ್ಕಾಗಿ ಪೊಲೀಸರು 8 ಕಿಲೋ ಮೀಟರ್ ಹಿಂಬಾಲಿಸಿ ಹೋಗಿ ಆತನನ್ನು ಬಂಧಿಸಿದ್ದಾರೆ. 

ಕಾಣೆಯಾಗಿದ್ದ ಮಹಿಳೆ ಮೂರು ದಿನದ ನಂತರ ಬಾವಿಯಲ್ಲಿ ಜೀವಂತ ಪತ್ತೆ! ಘಟನೆ ಬಳಿಕ ಬೆಚ್ಚಿಬಿದ್ದ ಗ್ರಾಮಸ್ಥರು! ನಡೆದಿದ್ದೇನು?

ತನಿಖಾಧಿಗಳು ಹಾಗೂ ಹೆಚ್ಚುವರಿ ಡಿಸಿಪಿ ಪೂನಂ ಚಂದ್ ವೈಷ್ಣೋಯಿ ಹಾಗೂ ಹೆಚ್ಚುವರಿ ಡಿಸಿಪಿ ಪರಾಸ್ ಜೈನ್ ಅವರು ಹೇಳುವ ಪ್ರಕಾರ, ಆರೋಪಿ ತನುಜ್ ಜೈನ್ ಮಗುವಿನ ತಾಯಿ ಹಾಗೂ ದೂರುದಾರೆ ಫೂನಂ ಚೌಧರಿ ಹಾಗೂ ಮಗು ಪೃಥ್ವಿ ತನ್ನ ಜೊತೆಗೆ ಇರಬೇಕೆಂದು ಬಯಸಿದ್ದ.  ಆದರೆ ಪೂನಂ ಚೌಧರಿಗೆ ಆತನ ಜೊತೆ ಹೋಗುವುದಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ತನುಜ್ ತನ್ನ ಸಹಚರರ ಜೊತೆ ಸೇರಿಕೊಂಡು ಮನೆಯ ಹೊರಗಿದ್ದ 11 ವರ್ಷದ ಕಂದನನ್ನು ಕಿಡ್ನಾಪ್ ಮಾಡಿದ್ದ ಎಂದು ಹೇಳಿದ್ದಾರೆ. 

ಒಟ್ಟಿನಲ್ಲಿ ಪ್ರಕರಣವೇನೋ ಸುಖಾಂತ್ಯವಾಗಿದೆ. ಆದರೆ ತಾಯಿ ಯಾರು ಆರೋಪಿ ಯಾರು ಎಂಬುದನ್ನು ತಿಳಿಯದ ಮುಗ್ಧ ಮಗುವಿಗೆ ಇದೊಂದು ಭಾವನಾತ್ಮಕ ಆಘಾತವೇ ಸರಿ. 14 ತಿಂಗಳ ಸುದೀರ್ಘ ಬೇರ್ಪಡುವಿಕೆಯ ನಂತರ ತನ್ನ ಹೆತ್ತವಳೇ ಆದರೂ ಅಪರಿಚಿತಳಂತೆ ಕಾಣುವ ಅಮ್ಮನ ಜೊತೆ ಮಗು ಬಾಳಬೇಕಿದೆ. ಮಗುವಿನ ನೋವಿಗೆ ಕಾಲವೇ ಉತ್ತರ ಹೇಳಬೇಕಿದೆ. 

 

 

Latest Videos
Follow Us:
Download App:
  • android
  • ios