ಪಂಜಾಬ್ ಗೋಲ್ಡನ್ ಟೆಂಪಲ್ ಬಳಿ 2 ದಿನದಲ್ಲಿ 2 ಸ್ಫೋಟ: ಖಲಿಸ್ತಾನಿ ಉಗ್ರರ ಕೃತ್ಯ?
ಪಂಜಾಬ್ ಸ್ವರ್ಣಮಂದಿರ ಸಮೀಪ 2 ದಿನದಲ್ಲಿ 2 ಸ್ಫೋಟ ಸಂಭವಿಸಿದೆ. ನಿನ್ನೆ ಕಚ್ಚಾ ಬಾಂಬ್ ಸ್ಫೋಟದಲ್ಲಿ ಒಬ್ಬನಿಗೆ ಗಾಯವಾಗಿದ್ದು, ಖಲಿಸ್ತಾನಿಗಳ ಉಪಟಳದ ನಡುವೆಯೇ ಆತಂಕದ ಘಟನೆ ವರದಿಯಾಗಿದೆ.
ಅಮೃತಸರ (ಮೇ 9, 2023): ಸಿಖ್ಖರ ಪವಿತ್ರ ಸ್ವರ್ಣಮಂದಿರದ ಸಮೀಪ 2ನೇ ದಿನವಾದ ಸೋಮವಾರ ಮತ್ತೆ ಕಚ್ಚಾಬಾಂಬ್ ಸ್ಫೋಟ ಸಂಭವಿಸಿದೆ ಹಾಗೂ ಒಬ್ಬನಿಗೆ ಗಾಯವಾಗಿದೆ. ಮೊನ್ನೆ ಕೂಡ ಇದೇ ರೀತಿಯ ಕಚ್ಚಾ ಬಾಂಬ್ ಸ್ಫೋಟಗೊಂಡು ಜನರನ್ನು ಆತಂಕಕ್ಕೀಡು ಮಾಡಿದ ಬೆನ್ನಲ್ಲೇ ಅದೇ ರೀತಿಯ ಘಟನೆ ನಡೆದಿದೆ. ಖಲಿಸ್ತಾನಿ ಉಗ್ರರ ಉಪಟಳ ಹೆಚ್ಚಿರುವ ನಡುವೆಯೇ ಸಂಭವಿಸಿದ ಈ ಸ್ಫೋಟಗಳು ಅಮೃತಸರ ಜನರನ್ನು ಆತಂಕಕ್ಕೀಡು ಮಾಡಿವೆ.
ಸ್ವರ್ಣ ಮಂದಿರಕ್ಕೆ ಹೋಗುವ, ಅಂಗಡಿ ಮುಂಗಟ್ಟುಗಳಿಂದ ತುಂಬಿರುವ ಮುಖ್ಯ ದಾರಿಯಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಸ್ಥಳದಿಂದ ಸ್ಫೋಟಗೊಂಡ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಕಚ್ಚಾ ಬಾಂಬ್ ಆಗಿದ್ದು, ಯಾವುದೇ ಡಿಟೋನೇಟರ್, ಸ್ಕ್ರೂಗಳನ್ನು ಬಳಸಿರಲಿಲ್ಲ ಎಂದು ದೃಢಪಟ್ಟಿದೆ.
ಇದನ್ನು ಓದಿ: ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಭಾರಿ ಸ್ಫೋಟ: ಹಲವು ಯುವತಿಯರಿಗೆ ಗಂಭೀರ ಗಾಯ!
ಈ ನಡುವೆ, ವ್ಯಕ್ತಿಯೊಬ್ಬ ಸ್ಫೋಟಕ ಇಟ್ಟು ಹೋಗಿದ್ದನ್ನು ಕೆಲವರು ಗಮನಿಸಿದ್ದಾರೆ. ಆತನಿಗಾಗಿ ಬಲೆ ಬೀಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸ್ಥಳದಲ್ಲಿ ಭದ್ರತಾ ಪಡೆಗಳು ಧ್ವಜ ಪಥ ಸಂಚಲನ ನಡೆಸಿದವು. ‘ ಈ ಸ್ಫೋಟದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶನಿವಾರ ತಡರಾತ್ರಿಯೂ ಸ್ಫೋಟ ಹಲವು ಯುವತಿಯರಿಗೆ ಗಾಯ
ಪಂಜಾಬ್‌ನ ಅಮೃತಸರದಲ್ಲಿರುವ ಸಿಖ್ಖರ ಧಾರ್ಮಿಕ ಕೆಂದ್ರವಾದ ಹಾಗೂ ಖ್ಯಾತ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಶನಿವಾರ ತಡರಾತ್ರಿ ಸಹ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ, ಸ್ಫೋಟಕ್ಕೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಫೋಟ ಸಂಭವಿಸಿದ ಕೂಡಲೇ ಸುತ್ತಮುತ್ತಲಿದ್ದ ಜನರು ಗಾಬರಿಯಾಗಿದ್ದಾರೆ. ಅಲ್ಲದೆ, ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಭಾವಿಸಿ ಭಕ್ತರು ಮತ್ತು ಸ್ಥಳೀಯರು ಭಯಭೀತರಾಗಿದ್ದರು. ಆದರೆ, ಈ ಸ್ಫೋಟವು ಅಪಘಾತವಾಗಿರಬಹುದು ಮತ್ತು ಯಾವುದೇ ಭಯೋತ್ಪಾದನೆಯ ಘಟನೆ ಅಲ್ಲ ಎಂದು ಪೊಲೀಸರು ನಂತರ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೂ, ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಫೋರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿದೆ. ಅಲ್ಲದೆ, ಕಿಟಕಿಯ ಬಳಿ ಪೊಲೀಸರು ಕೆಲವು ಪುಡಿಯನ್ನು ವಶಪಡಿಸಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಉಗ್ರರ ಬೇಟೆ ವೇಳೆ 5 ಸೈನಿಕರು ಹುತಾತ್ಮ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ಸಂದರ್ಭ ಉಗ್ರರಿಂದ ಸ್ಫೋಟ
ಇನ್ನು, ಈ ಬಗ್ಗೆ ಏನನ್ನೂ ಹೇಳಲು ಆಗಲ್ಲ ಎಂದು ಅಮೃತಸರ ಪೊಲೀಸ್ ಕಮಿಷನರ್ ನೌನಿಹಾಲ್ ಸಿಂಗ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಆಟೋರಿಕ್ಷಾದಲ್ಲಿದ್ದ ಸುಮಾರು ಆರು ಮಂದಿ ಬಾಲಕಿಯರಿಗೆ ಗಾಜಿನ ಚೂರುಗಳು ತಗುಲಿ ಗಾಯಗಳಾಗಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಅಮೃತಸರದ ಗೋಲ್ಡನ್ ಟೆಂಪಲ್ ಬಳಿಯ ರೆಸ್ಟೋರೆಂಟ್‌ನ ಚಿಮಣಿಯಲ್ಲಿ ಸ್ಫೋಟಗೊಂಡಿರಬಹುದು ಎಂದೂ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ