ಉತ್ತಮ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮ್ಯಾನ್ಮಾರ್‌ನ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದ 125 ಭಾರತೀಯರನ್ನು ರಕ್ಷಿಸಿ, ಥಾಯ್ಲೆಂಡ್‌ನಿಂದ ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 25 ಮಂದಿ ಕನ್ನಡಿಗರೂ ಇದ್ದರು.

ನವದೆಹಲಿ: ಉತ್ತಮ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮ್ಯಾನ್ಮಾರ್‌ನ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದ 125 ಭಾರತೀಯರನ್ನು ರಕ್ಷಿಸಿ, ಥಾಯ್ಲೆಂಡ್‌ನಿಂದ ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 25 ಮಂದಿ ಕನ್ನಡಿಗರೂ ಇದ್ದರು.

ಆಗ್ನೇಯ ಏಷ್ಯಾ ಭಾಗದಲ್ಲಿ ಇಂತಹ ವಂಚನೆಗೆ ಒಳಗಾದ ಭಾರತೀಯರನ್ನು ರಕ್ಷಿಸುವ ಕಾರ್ಯವನ್ನು ಥಾಯ್ಲೆಂಡ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸಿಬ್ಬಂದಿ ನಡೆಸುತ್ತಿದ್ದು, ಇದಕ್ಕೆ ಥಾಯ್ಲೆಂಡ್‌ ಸರ್ಕಾರ ಸಹಾಯ ಮಾಡುತ್ತಿದೆ. ಇವರು ಮ್ಯಾನ್ಮಾರ್‌ ವಂಚಕರ ಬಳಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿದ್ದಾರೆ.

ವಲಸೆ ಅಧಿಕಾರಿಗಳಿಂದ ವಿಚಾರಣೆ ಬಳಿಕ ಎಲ್ಲರನ್ನೂ ಗುರುವಾರ ಬೆಳಗ್ಗೆ ಆಯಾ ರಾಜ್ಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ.

ವಂಚನೆ ಹೇಗೆ?:

ಭಾರತಕ್ಕೆ ಮರಳಿದ ಯುವಕರು ತಾವು ಅನುಭವಿಸಿದ ಚಿತ್ರಹಿಂಸೆಯನ್ನು ಸಿಬಿಐ ಅಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ‘ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮನ್ನು ಸಂಪರ್ಕಿಸಿ, ಬ್ಯಾಂಕಾಕ್‌ನಲ್ಲಿ ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಅಲ್ಲಿಗೆ ಹೋಗುತ್ತಿದ್ದಂತೆ ರಸ್ತೆ ಮಾರ್ಗದಲ್ಲಿ ಮ್ಯಾನ್ಮಾರ್‌ಗೆ ಕರೆದೊಯ್ದು, ಆನ್‌ಲೈನ್‌ ಮೂಲಕ ಜನರನ್ನು ವಂಚಿಸುವ ಕೆಲಸ ಕೊಟ್ಟರು. ಅದನ್ನು ಮಾಡಲು ಒಪ್ಪದೇ ಹೋದಾಗ ಗನ್‌ ಹಿಡಿದು ಬೆದರಿಸಿದರು. ವಾರಗಳಷ್ಟು ಹಳೆಯ ಬಾತುಕೋಳಿ ಮೊಟ್ಟೆಗಳನ್ನು ತಿನ್ನಿಸಿದರು. ನಿರಾಕರಿಸಿದವರಿಗೆ ಕರೆಂಟ್‌ ಶಾಕ್‌ ಕೊಡುತ್ತಿದ್ದರು’ ಎಂದು ಹೇಳಿದ್ದಾರೆ.

ಸರ್ಕಾರ ಎಚ್ಚರಿಕೆ:

ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿದೇಶಗಳಿಂದ ಉದ್ಯೋಗಾವಕಾಶ ಬಂದರೆ, ಮೊದಲು ಉದ್ಯೋಗದಾತರ ಬಗ್ಗೆ ಸರಿಯಾಗಿ ಪರಿಶೀಲಿಸಿ. ಥಾಯ್ಲೆಂಡ್‌ನಲ್ಲಿ ಪ್ರವಾಸ ಹಾಗೂ ಕಾರ್ಯನಿಮಿತ್ತ ಭೇಟಿಗಳಿಗಷ್ಟೇ ವೀಸಾರಹಿತ ಪ್ರವೇಶವಿದೆ. ಹೀಗಾಗಿ ಕೆಲಸಕ್ಕಾಗಿ ಆ ಮಾರ್ಗದ ಮೂಲಕ ಹೋಗಬೇಡಿ ಎಂದು ಸೂಚನೆ ನೀಡಿದೆ.

ಹೇಗೆ ನಡೆಯುತ್ತೆ ದಂಧೆ?

- ಟೆಲಿಗ್ರಾಂ ಚಾನೆಲ್‌ ಮೂಲಕ ನಕಲಿ ಉದ್ಯೋಗ ಜಾಹೀರಾತನ್ನು ನೀಡಲಾಗುತ್ತದೆ

- 65ರಿಂದ 70 ಸಾವಿರ ರು.ವರೆಗೂ ಸಂಬಳ ನೀಡುವುದಾಗಿ ಆಫರ್‌ ಕೊಡಲಾಗುತ್ತದೆ

- ಒಪ್ಪಿದರೆ ಮೂರು ಹಂತಗಳಲ್ಲಿ ಸಂದರ್ಶನ. ಆಯ್ಕೆಯಾದರೆ ವಿಮಾನ ಟಿಕೆಟ್‌ ಬರುತ್ತದೆ

- ನಂತರ ಥಾಯ್ಲೆಂಡ್‌ಗೆ ಕರೆಸಿಕೊಳ್ಳಲಾಗುತ್ತದೆ. ಗುಡ್ಡಗಾಡುಗಳಲ್ಲಿ ನಡೆಸಿ ಕರೆದೊಯ್ಯುತ್ತಾರೆ

- 6ರಿಂದ 7 ತಾಸು ನಡೆಸಿಕೊಂಡು ಮ್ಯಾನ್ಮಾರ್‌ನ ಕೆಕೆ ಪಾರ್ಕ್‌ ಕರೆದೊಯ್ಯಲಾಗುತ್ತದೆ

- ಸೈಬರ್‌ ವಂಚನೆ ಮಾಡುವ ಕೆಲಸಕ್ಕೆ ನಿಯೋಜಿಸಿ 17 ತಾಸು ದುಡಿಸಿಕೊಳ್ಳಲಾಗುತ್ತದೆ

- ಒಪ್ಪದಿದ್ದರೆ ಗನ್‌ ತೋರಿಸಲಾಗುತ್ತದೆ, ಎಲೆಕ್ಟ್ರಿಕ್‌ ಶಾಕ್‌ ನೀಡಿ ಹಿಂಸೆ ನೀಡಲಾಗುತ್ತದೆ

- ವಾಪಸ್‌ ಹೋಗಲು ಬಯಸಿದರೆ, 6 ಲಕ್ಷ ರು.ವರೆಗೂ ಹಣ ನೀಡುವಂತೆ ಕೇಳುತ್ತಾರೆ

- ಅಷ್ಟು ಕೊಟ್ಟರೂ ವಾಪಸ್‌ ಹೋಗುವ ಗ್ಯಾರಂಟಿ ಇಲ್ಲ: ವಾಪಸ್‌ ಬಂದ ಕನ್ನಡಿಗನ ಅಳಲು

-1500 ಮಂದಿ:ಮ್ಯಾನ್ಮಾರ್‌ನ ಸ್ಕ್ಯಾಮ್‌ ಕೇಂದ್ರಗಳಿಂದ ಕಳೆದ ಮಾರ್ಚ್‌ನಿಂದ ಈವರೆಗೆ ರಕ್ಷಿಸಿ ಕರೆತರಲಾದ ಭಾರತೀಯರ ಸಂಖ್ಯೆ