ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ತೆಲಂಗಾಣದ ಗಡಿಯಲ್ಲಿರುವ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 22ಕ್ಕೂ ಹೆಚ್ಚು ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. 

ಬಿಜಾಪುರ (ಮೇ.08): ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ತೆಲಂಗಾಣದ ಗಡಿಯಲ್ಲಿರುವ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 22ಕ್ಕೂ ಹೆಚ್ಚು ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಅಂತರರಾಜ್ಯ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟದ ಅರಣ್ಯದಲ್ಲಿ ಬುಧವಾರ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 22ಕ್ಕೂ ಹೆಚ್ಚು ನಕ್ಸಲರು ಭದ್ರತಾ ಸಿಬ್ಬಂದಿ ಗುಂಡಿಗೆ ಬಲಿಯಾಗಿದ್ದು , ಈ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. 

ಬಸ್ತಾರ್‌ ಪ್ರದೇಶದಲ್ಲಿ ಪ್ರಾರಂಭಿಸಲಾದ ಅಪರೇಷನ್ ಸಂಕಲ್ಪ ಹೆಸರಿನ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು, ನಕ್ಸಲ್‌ ನಿಗ್ರಹದ ವಿವಿಧ ಘಟಕಗಳಿಗೆ ಸೇರಿದ ಸುಮಾರು 24 ಸಾವಿರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇನ್ನು ಈ ಭಾಗದಲ್ಲಿ ಏ.21ರಿಂದಲೇ ಸಿಬ್ಬಂದಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ ನಕ್ಸಲರ ಸಂಖ್ಯೆ 168ಕ್ಕೇರಿಕೆಯಾಗಿದೆ.

ಉಪಾಧ್ಯಕ್ಷ ಸಾವು: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟದಲ್ಲಿ ಸೋಮವಾರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳಾ ನಕ್ಸಲಳನ್ನು ಕೊಂದು ಹಾಕಲಾಗಿದೆ. ಇದೇ ವೇಳೆ, ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಬೆನ್ಪಲ್ಲಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಮುಚಕಿ ರಾಮ ಎಂಬುವವರನ್ನು ನಕ್ಸಲರು ಹತ್ಯೆಗೈದಿದ್ದಾರೆ. ಈ ಮೂಲಕ ಈ ವರ್ಷ ಬಸ್ತರ್‌ನ ವಿವಿಧ ಕಡೆಗಳಲ್ಲಿ ಒಟ್ಟು 9 ಜನರನ್ನು ನಕ್ಸಲರು ಕೊಂದಂತಾಗಿದೆ. ಮತ್ತೊಂದೆಡೆ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಮಂಗಳವಾರ 14 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ.

20000 ಯೋಧರ ದಾಳಿಗೆ 1000 ನಕ್ಸಲರು ತತ್ತರ: ಮಾತುಕತೆಗೆ ಪ್ರಸ್ತಾಪ

26 ನಕ್ಸಲರ ಶರಣಾಗತಿ: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಕನಿಷ್ಠ 26 ನಕ್ಸಲರು ಭದ್ರತಾ ಪಡೆಗಳ ಮುಂದೆ ಸೋಮವಾರ ಶರಣಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 2020ರ ನಂತರ ಈವರೆಗೆ 953 ನಕ್ಸಲರು ಶರಣಾದಂತಾಗಿದೆ. ಪೊಳ್ಳು ಹಾಗೂ ಅಮಾನವೀಯ ನಕ್ಸಲ್ ಸಿದ್ಧಾಂತದಿಂದ ಬೇಸತ್ತು, ಶರಣಾಗತಿ ನಿರ್ಧಾರ ಕೈಗೊಂಡಿದ್ದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ. ‘ಶರಣಾಗತರ ಪೈಕಿ ರಾಜೇಶ್ ಕಶ್ಯಪ್‌ನನ್ನು ಹುಡುಕಿಕೊಟ್ಟವರಿಗೆ 3 ಲಕ್ಷ ರು., ಕೋಸಾ ಮಾದ್ವಿ ಮತ್ತು ಛೋಟು ಕುಂಜಂನನ್ನು ಹುಡುಕಿಕೊಟ್ಟವರಿಗೆ ಕ್ರಮವಾಗಿ 1 ಲಕ್ಷ ರು, ಮತ್ತು 50,000 ರು. ಬಹುಮಾನ ಘೋಷಿಸಲಾಗಿತ್ತು’ ಎಂದು ಹೇಳಿದ್ದಾರೆ.