ಛತ್ತೀಸ್‌ಗಢ ಮತ್ತು ತೆಲಂಗಾಣದ ಗಡಿಭಾಗದ ಬೆಟ್ಟವೊಂದರಲ್ಲಿ ಸೇರಿಕೊಂಡಿದ್ದಾರೆ ಎನ್ನಲಾದ ಸುಮಾರು 1000 ನಕ್ಸಲರ ವಶಕ್ಕೆ 20000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾರೀ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಬೆಚ್ಚಿಬಿದ್ದಿದ್ದಾರೆ.
ರಾಯ್ಪುರ (ಏ.26): ಛತ್ತೀಸ್‌ಗಢ ಮತ್ತು ತೆಲಂಗಾಣದ ಗಡಿಭಾಗದ ಬೆಟ್ಟವೊಂದರಲ್ಲಿ ಸೇರಿಕೊಂಡಿದ್ದಾರೆ ಎನ್ನಲಾದ ಸುಮಾರು 1000 ನಕ್ಸಲರ ವಶಕ್ಕೆ 20000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾರೀ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಬೆಚ್ಚಿಬಿದ್ದಿದ್ದಾರೆ. ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ನಕ್ಸಲರು ಶಾಂತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಸಿಪಿಎಂನ ವಾಯುವ್ಯ ಉಪವಲಯದ ಉಸ್ತುವಾರಿ ರುಪೇಶ್ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನಾವು ಶಾಂತಿ ಮಾತುಕತೆಗೆ ಸಿದ್ಧವಿದ್ದೇವೆ.
ಆದರೆ ಸರ್ಕಾರದ ಉದ್ದೇಶ ಬೇರೆಯೇ ಇದ್ದಂತಿದೆ. ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮತ್ತು ಶಾಂತಿ ಸ್ಥಾಪನೆ ಸಾಧ್ಯವಿದ್ದರೂ ಸರ್ಕಾರ ಮಾತ್ರ ಹಿಂಸಾತ್ಮಕ ರೀತಿಯನ್ನು ಅನುಸರಿಸುತ್ತಿದೆ. ಇದನ್ನು ಒಂದು ತಿಂಗಳ ಕಾಲವಾದರೂ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಸ್ತಾರ್‌ನ ಐಜಿಪಿ ಸುಂದರ್‌ರಾಜ್, ‘ಭದ್ರತಾಪಡೆಗಳು ಎಲ್ಲರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾರಿಗೂ ಹಾನಿ ಮಾಡಲು ಅಲ್ಲ. ಹಿಂಸೆಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಈಗಲೂ ಅವಕಾಶವಿದೆ’ ಎಂದಿದ್ದಾರೆ.
8 ನಕ್ಸಲರ ಹತ್ಯೆ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 8 ನಕ್ಸಲರು ಹತರಾಗಿದ್ದಾರೆ. ಈ ಮೂಲಕ ಈ ವರ್ಷ ಛತ್ತೀಸಗಢದಲ್ಲಿ 140 ನಕ್ಸಲರ ಹತ್ಯೆಯಾದಂತಾಗಿದೆ. ಜಿಲ್ಲೆಯ ಲಾಲ್ಪಾನಿಯಾ ಪ್ರದೇಶದ ಲುಗು ಬೆಟ್ಟ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 5.30ರ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಗಿದ್ದು, ಬಳಿಕ 8 ನಕ್ಸಲರನ್ನು ಸಾಯಿಸಲಾಗಿದೆ. ಹತ 8 ನಕ್ಸಲರ ಪೈಕಿ ಒಬ್ಬನ ಪತ್ತೆಗೆ 1 ಕೋಟಿ ರು. ಬಹುಮಾನ ಘೋಷಿಸಲಾಗಿತ್ತು. ನಕ್ಸಲರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1000 ಸಶಸ್ತ್ರ ನಕ್ಸಲರನ್ನು ಸುತ್ತುವರೆದ 3 ರಾಜ್ಯಗಳ 20000 ಭದ್ರತಾ ಸಿಬ್ಬಂದಿ!
ನಕ್ಸಲಿಸಂ ನಿರ್ಮೂಲನೆ ಗುರಿ- ಶಾ: ಘಟನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ನಕ್ಸಲಿಸಂ ನಿರ್ಮೂಲನೆ ಮಾಡುವ ನಮ್ಮ ಕಾರ್ಯ ನಿರಂತರವಾಗಿ ಮುಂದುವರೆದಿದೆ. ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯುವಲ್ಲಿ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಯಶಸ್ಸನ್ನು ಸಾಧಿಸಿವೆ’ ಎಂದಿದ್ದಾರೆ. ಮತ್ತೊಂದು ಘಟನೆಯಲ್ಲಿಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್)ಯ ಒಬ್ಬ ಯೋಧ ಸಾವನ್ನಪ್ಪಿದ್ದಾರೆ.
