ಇಂಜಿನಿಯರಿಂಗ್ ಪದವಿ ಇಲ್ಲ, ವಿಮಾನ ತಂತ್ರಜ್ಞಾನದ ಬಗ್ಗೆ ಶಿಕ್ಷಣವೂ ಇಲ್ಲ. ಆದರೂ ಬರೋಬ್ಬರಿ 13 ವರ್ಷಗಳ ಕಾಲ ಆನ್‌ಲೈನ್‌ಅಲ್ಲಿ ಕಲಿತು, ಪ್ರಯೋಗ ಮತ್ತು ಪರಿಶ್ರಮದ ಮೂಲಕ 21 ವರ್ಷದ ಯುವಕನೊಬ್ಬ ಹಾರುವ ಕಾರಿನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾನೆ.

ಇಂಜಿನಿಯರಿಂಗ್ ಪದವಿ ಇಲ್ಲ, ವಿಮಾನ ತಂತ್ರಜ್ಞಾನದ ಬಗ್ಗೆ ಶಿಕ್ಷಣವೂ ಇಲ್ಲ. ಆದರೂ ಬರೋಬ್ಬರಿ 13 ವರ್ಷಗಳ ಕಾಲ ಆನ್‌ಲೈನ್‌ಅಲ್ಲಿ ಕಲಿತು, ಪ್ರಯೋಗ ಮತ್ತು ಪರಿಶ್ರಮದ ಮೂಲಕ 21 ವರ್ಷದ ಯುವಕನೊಬ್ಬ ಹಾರುವ ಕಾರಿನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾನೆ.

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ತಮ್ತಾ ಎಂಬ ಯುವಕ ನಿರ್ಮಿಸಿರುವ ಈ ವಿದ್ಯುತ್ ಚಾಲಿತ ಹಾರುವ ವಾಹನ ಈಗ ಗಮನ ಸೆಳೆದಿದೆ. ಬಿಎ ಪದವಿ ಪಡೆದಿರುವ ರವಿ, HAPIDA SKYNeX ಹೆಸರಿನ ಏಕವ್ಯಕ್ತಿ ಹಾರುವ ವಾಹನದ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. 2026ರ ಆಗಸ್ಟ್‌ನಲ್ಲಿ ಈ ವಾಹನ ಪರೀಕ್ಷಾರ್ಥ ಹಾರಾಟವನ್ನೂ ನಡೆಸಿದೆ ಎಂದು ವರದಿಯಾಗಿದೆ.

ಆನ್‌ಲೈನ್ ಪಾಠಗಳಿಂದ ಹಾರುವ ಕಾರಿನವರೆಗೆ!

ರವಿ ತಮ್ತಾ ಅವರ ಈ ಪ್ರಯತ್ನದ ಹಿಂದೆ ಹಲವು ವರ್ಷಗಳ ಆಸಕ್ತಿ ಮತ್ತು ನಿರಂತರ ಪರಿಶ್ರಮ ಇದೆ. 2015ರಲ್ಲಿ ಹಾರುವ ವಾಹನ ನಿರ್ಮಿಸುವ ಆಲೋಚನೆ ಅವರಲ್ಲಿ ಮೂಡಿತ್ತು. ಉತ್ತರಾಖಂಡದ ಜಾಗೇಶ್ವರ ಧಾಮದ ಸಮೀಪವಿರುವ ಕಾಫ್ಲಿಖಾನ್ ಪ್ರದೇಶದಲ್ಲಿ ಬೆಳೆದ ರವಿ, ಬೆಟ್ಟಗುಡ್ಡಗಳ ನಡುವೆ ಪ್ರಯಾಣಿಸುವ ಜನರು ಎದುರಿಸುವ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದರು. ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳು ತಿರುವುಗಳಿಂದ ಕೂಡಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ಹೆಚ್ಚು ಸಮಯ ಬೇಕಾಗುತ್ತದೆ. ವಿಶೇಷವಾಗಿ ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳನ್ನು ಪಡೆಯಲು ಕೆಲವೊಮ್ಮೆ ದೂರದ ಪ್ರಯಾಣ ಅನಿವಾರ್ಯವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಂಡುಕೊಳ್ಳುವ ಆಲೋಚನೆ ರವಿಗೆ ಹಾರುವ ವಾಹನದ ಪ್ರಯೋಗದತ್ತ ಪ್ರೇರಣೆ ನೀಡಿತು.

ಇಂಜಿನಿಯರಿಂಗ್ ಅಥವಾ ವಿಮಾನಯಾನ ಕ್ಷೇತ್ರದಲ್ಲಿ ಶಿಕ್ಷಣ ಪಡೆಯದಿದ್ದರೂ, ಅವರು ಆನ್‌ಲೈನ್ ಟ್ಯುಟೋರಿಯಲ್‌ಗಳು, ಸ್ವಯಂ ಅಧ್ಯಯನ ಮತ್ತು ಪ್ರಾಯೋಗಿಕ ಪ್ರಯೋಗಗಳ ಮೂಲಕ ಅಗತ್ಯ ಜ್ಞಾನವನ್ನು ಬೆಳೆಸಿಕೊಂಡರು. ಅವರ ತಂದೆ ಹರೀಶ್ ರಾಮ್ ಮೆಕ್ಯಾನಿಕ್ ಆಗಿದ್ದು, ಈ ಪ್ರಯಾಣದಲ್ಲಿ ಕುಟುಂಬದ ಬೆಂಬಲವೂ ನೆರವಾಗಿದೆ.

ಹೇಗಿದೆ ರವಿ ನಿರ್ಮಿಸಿರುವ ಹಾರುವ ವಾಹನ?

ರವಿ ಅಭಿವೃದ್ಧಿಪಡಿಸಿರುವ HAPIDA SKYNeX ವಿದ್ಯುತ್ ಚಾಲಿತ ಏಕವ್ಯಕ್ತಿ ವಾಹನವಾಗಿದೆ. ಇದು ಹಲವು ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು ಪ್ರೊಪೆಲ್ಲರ್‌ಗಳನ್ನು ಬಳಸುವ ವಿನ್ಯಾಸ ಹೊಂದಿದ್ದು, ಮಲ್ಟಿರೋಟರ್ ಡ್ರೋನ್‌ಗಳಲ್ಲಿ ಬಳಸುವ ತಂತ್ರಜ್ಞಾನವನ್ನು ಹೋಲುತ್ತದೆ. ಈ ವಾಹನದ ಪ್ರಮುಖ ವೈಶಿಷ್ಟ್ಯವೆಂದರೆ ವರ್ಟಿಕಲ್ ಟೇಕ್‌ಆಫ್ ಆ್ಯಂಡ್ ಲ್ಯಾಂಡಿಂಗ್ (VTOL) ವ್ಯವಸ್ಥೆ. ಅಂದರೆ, ಸಾಂಪ್ರದಾಯಿಕ ವಿಮಾನಗಳಂತೆ ಉದ್ದವಾದ ರನ್‌ವೇ ಅಗತ್ಯವಿಲ್ಲದೆ ಲಂಬವಾಗಿ ಮೇಲಕ್ಕೆ ಹಾರುವ ಮತ್ತು ಕೆಳಕ್ಕೆ ಇಳಿಯುವ ಉದ್ದೇಶವನ್ನು ಈ ವಿನ್ಯಾಸ ಹೊಂದಿದೆ.

ಇದು ಬ್ಯಾಟರಿಯಿಂದ ಚಾಲಿತವಾಗುವುದರಿಂದ ವಿಮಾನಗಳಲ್ಲಿ ಬಳಸುವ ಸಾಂಪ್ರದಾಯಿಕ ಇಂಧನವನ್ನು ಅವಲಂಬಿಸುವುದಿಲ್ಲ. ಆದಾಗ್ಯೂ, ವಾಹನದ ಹಾರಾಟದ ಸ್ಥಿರತೆ, ಬ್ಯಾಟರಿ ಸಾಮರ್ಥ್ಯ, ರಚನೆಯ ಬಲ ಮತ್ತು ಸುರಕ್ಷತಾ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಪರೀಕ್ಷಿಸಬೇಕಿದೆ. ಆಗಸ್ಟ್‌ನಲ್ಲಿ ನಡೆದ ಪರೀಕ್ಷಾರ್ಥ ಹಾರಾಟವು ಯೋಜನೆಯ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದರೆ, ಪ್ರಯಾಣಿಕರನ್ನು ಹೊತ್ತೊಯ್ಯಲು ಅಥವಾ ವಾಣಿಜ್ಯ ಸೇವೆಗೆ ಬಳಸಲು ಇದು ಇನ್ನೂ ಸಿದ್ಧವಾಗಿದೆ ಎಂಬುದಕ್ಕೆ ಆ ಹಾರಾಟವೊಂದೇ ಸಾಕ್ಷಿಯಲ್ಲ.

ಹಾರುವ ಕಾರು ಮಾತ್ರವಲ್ಲ, ಇನ್ನೂ ಹಲವು ಆವಿಷ್ಕಾರಗಳು!

ರವಿ ತಮ್ತಾ ಅವರ ಆಸಕ್ತಿ ಹಾರುವ ವಾಹನಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ತಮ್ಮ ಪ್ರಯೋಗಗಳ ಭಾಗವಾಗಿ ಹಲವು ಉಪಯುಕ್ತ ಸಾಧನಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದಾರೆ.

ಮೊಬೈಲ್ ಚಾರ್ಜ್ ಮಾಡುವ ಶೂಗಳು: ನಡೆಯುವಾಗ ಮೊಬೈಲ್ ಫೋನ್ ಚಾರ್ಜ್ ಮಾಡಲು ನೆರವಾಗುವ ವಿನ್ಯಾಸದ ಪ್ರಯೋಗ.

ಸ್ಮಾರ್ಟ್ ವಾಕಿಂಗ್ ಸ್ಟಿಕ್: ದೃಷ್ಟಿ ಸಮಸ್ಯೆಯಿರುವವರಿಗೆ ನೆರವಾಗುವ ಉದ್ದೇಶದ ಸಾಧನ.

ಬಿದಿರು ಸೀಳುವ ಯಂತ್ರ: ಬಿದಿರು ಸಂಸ್ಕರಣೆಯ ಕೆಲಸವನ್ನು ಸುಲಭಗೊಳಿಸುವ ಯಂತ್ರ.

ಅಗ್ನಿಶಾಮಕ ಉಪಕರಣಗಳು: ಬೆಂಕಿ ನಂದಿಸುವ ಉದ್ದೇಶದ ಸಾಧನಗಳು.

ಮೊಬೈಲ್ ಚಾರ್ಜಿಂಗ್ ಸ್ಟಿಕ್: ಮೊಬೈಲ್ ಚಾರ್ಜ್ ಮಾಡಲು ವಿನ್ಯಾಸಗೊಳಿಸಿದ ಮತ್ತೊಂದು ಪ್ರಯೋಗ.

ಅರಣ್ಯ ಇಲಾಖೆಯ ಬಳಕೆಗಾಗಿ ಅಗ್ನಿಶಾಮಕ ಸಾಧನವನ್ನೂ ಅಭಿವೃದ್ಧಿಪಡಿಸಿರುವುದಾಗಿ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಪ್ರಯತ್ನಗಳು ವಿಭಿನ್ನ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಅವರ ಆಸಕ್ತಿಯನ್ನು ತೋರಿಸುತ್ತವೆ.