ಅಯೋಧ್ಯೆ(ಆ.06): ರಾಮ ಮಂದಿರ ಶಿಲಾನ್ಯಾಸದ ಬಳಿಕ ಹಂಚಲು ಅಯೋಧ್ಯೆಯ ಹನುಮ ದೇಗುಲ ಟ್ರಸ್ಟ್‌ ತಯಾರಿಸಿದ್ದ ಲಡ್ಡುಗಳಿಗೆ ಸ್ವಾದ ನೀಡಿದ್ದು ಕರುನಾಡಿನಲ್ಲಿ ತಯಾರಾದ ತುಪ್ಪ ಎನ್ನುವುದು ವಿಶೇಷ. ಭಕ್ತರಿಗೆ ಹಂಚಲು ತಯಾರಿಸಿದ್ದ 1.5 ಲಕ್ಷ ಲಡ್ಡುಗಳನ್ನು 20 ಸಾವಿರ ಕೇಜಿ ನಂದಿನಿ ತುಪ್ಪ ಬಳಕೆ ಮಾಡಿ ತಯಾರಿಸಲಾಗಿದೆ. ಪ್ರತೀ 15 ಕೇಜಿಯ ಟಿನ್‌ಗಳಲ್ಲಿ ತುಂಬಿಸಿ ಟ್ರಕ್‌ ಮೂಲಕ 1800 ಕಿ.ಮಿ ದೂದರ ಅಯೋಧ್ಯೆಗೆ ಕಳುಹಿಸಿಕೊಡಲಾಗಿತ್ತು.

ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ!

ನಾನು ಕೆತ್ತಿದ ಮೂರ್ತಿ ಮೋದಿ ಕೈಲಿ ನೋಡಿ ಕಣ್ಣೀರು ಬಂತು!

ಅಯೋಧ್ಯೆ: ಭಕ್ತರಿಗೆ ಹಂಚಲಾದ ಲಡ್ಡು ತಯಾರಿಕೆಯ ಉಸ್ತುವಾರಿ ವಹಿಸಿದ್ದು ಕೂಡ ಕನ್ನಡಿಗ ಎನ್ನುವುದು ಮತ್ತೊಂದು ಹಿರಿಮೆ. ಅಯೋಧ್ಯಾ ಹನುಮ ದೇಗುಲದ ಪ್ರಬಂಧಕರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶೇಷಾದ್ರಿ ಆರ್‌. ಎಂಬವರ ಉಸ್ತುವಾರಿಯಲ್ಲಿ ಲಡ್ಡು ತಯಾರಿ ನಡೆದಿದೆ. 1.5 ಲಕ್ಷ ಲಡ್ಡುಗಳನ್ನು 60 ಮಂದಿಯ ತಂಡ ತಯಾರಿಸಿದೆ.

ಮುಹೂರ್ತ ನೀಡಿದ್ದೂ ಕನ್ನಡಿಗ!

ಬೆಂಗಳೂರು: ಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಮುಹೂರ್ತ ನಿಗದಿ ಪಡಿಸಿದ್ದು ಕೂಡ ಓರ್ವ ಕನ್ನಡಿಗ ವಿದ್ವಾಂಸ. ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ಎನ್‌.ಆರ್‌ ವಿಜಯೇಂದ್ರ ಶರ್ಮಾ ಅವರೇ ಮಂದಿರ ಭೂಮಿ ಪೂಜೆಗೆ ಮುಹೂರ್ತ ಅಂತಿಮಗೊಳಿಸಿದ ವಿದ್ವಾಂಸ. ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರಲ್ಲಿ ಓರ್ವರಾದ ಸ್ವಾಮಿ ಗೋವಿಂದ ದೇವಗಿರಿ ಅವರು ಸಂಪರ್ಕಿಸಿ ಒಳ್ಳೆಯ ಮುಹೂರ್ತ ನೀಡುವಂತೆ ಕೋರಿದ್ದರು. ಅಂತೆಯೇ ಜುಲೈ 29 ಬೆಳಿಗ್ಗೆ 9ರ ಬಳಿಕ, ಜುಲೈ 31ರ ಬೆಳಿಗ್ಗೆ 7-9 ಗಂಟೆ, ಆಗಸ್ಟ್‌ 3 ಬೆಳಿಗ್ಗೆ 10 ಗಂಟೆ ಬಳಿಕ ಹಾಗೂ ಆಗಸ್ಟ್‌ 5ರ ಇಡೀ ದಿನ ಹೀಗೆ ನಾಲ್ಕು ಮುಹೂರ್ತಗಳನ್ನು ಸೂಚಿಸಿದ್ದರು.