ಬೆಂಗಳೂರು(ಆ.06): ‘ದೇಶದ ಪ್ರಧಾನಿಯೊಬ್ಬರಿಗೆ ನನ್ನ ಕೈಯಲ್ಲಿ ಮೂಡಿರುವ ಕೋದಂಡರಾಮನ ಮೂರ್ತಿ ನೀಡಿರುವುದು ನನ್ನ ಸೌಭಾಗ್ಯ. ಮೂರ್ತಿಯನ್ನು ಪ್ರಧಾನಿ ಕೈಯಲ್ಲಿ ಕೊಟ್ಟಾಗ ನನಗೆ ಆನಂದ ಬಾಷ್ಪವೇ ಬಂತು. ನನ್ನ ಹಲವು ವರ್ಷಗಳ ಕಾಯಕಕ್ಕೆ ಸಾರ್ಥಕ ಭಾವ ಮೂಡಿದೆ. ಇಂದಿನ ದಿನ ದೊಡ್ಡ ಪ್ರಶಸ್ತಿ ಬಂದಂತಾಗಿದೆ.’

ಹೀಗೆಂದು ಭಾವುಕರಾದವರು ಬೆಂಗಳೂರಿನ ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ಶಿಲ್ಪಿ ರಾಮಮೂರ್ತಿ.

ರಾಮಮಂದಿರ ಶಿಲಾನ್ಯಾಸದ ನಂತರ ಅಮಿತ್ ಶಾ ಹೇಳಿದ 'ಸುವರ್ಣ' ಮಾತು!

ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರಿಗೆ ಕರ್ನಾಟಕದ ಶಿಲ್ಪಿಯ ಕೈಯಲ್ಲಿ ಅರಳಿದ ಕೋದಂಡರಾಮನ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಧಾನಿಗೆ ಕೊಡುಗೆಯಾಗಿ ನೀಡಿದ ಮೂರ್ತಿಯನ್ನು ತಯಾರಿಸಿದವರು ರಾಮಮೂರ್ತಿ. ಉತ್ತರ ಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕೋದಂಡರಾಮನ ಮೂರ್ತಿ ನಿರ್ಮಿಸಲಾಗಿತ್ತು.

ಸಾರ್ಥಕ ಭಾವ ಮೂಡಿದೆ: ಈ ಕುರಿತಂತೆ ಮಾತನಾಡಿರುವ ಶಿಲ್ಪಿ ರಾಮಮೂರ್ತಿ, 12 ವರ್ಷಗಳ ಹಿಂದೆ ಬೃಹತ್‌ ಕೋದಂಡರಾಮನÜ ಮೂರ್ತಿ ನಿರ್ಮಿಸಲು ಯೋಚಿಸಿ ಶೇ.50-60ರಷ್ಟುಕೆಲಸ ಮಾಡಿ ತೆಗೆದಿಟ್ಟಿದ್ದೆ. ನಂತರ ರಾಷ್ಟ್ರಪ್ರಶಸ್ತಿಗಾಗಿ 7.5 ಅಡಿ ವಿಗ್ರಹ ತಯಾರಿಸಿದೆ. ಅದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೆಚ್ಚಿ ಖರೀದಿಸಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದರು.

ಮೋದಿಗೆ ಕೊಟ್ಟ ಕೋದಂಡರಾಮನ ಪ್ರತಿಮೆ ಕರ್ನಾಟಕದಲ್ಲಿ ಕೆತ್ತನೆಯಾಗಿದ್ದು..!

ಅದೇ ಮಾದರಿಯ ಮೂರು ಅಡಿಯ ಮೂರ್ತಿ ಬೇಕೆಂದಿದ್ದರು. ಮೋದಿಗೆ ನೀಡುವ ಬಗ್ಗೆ ತಿಳಿಸಿರಲಿಲ್ಲ. ಆದರೆ, 10 ದಿನಗಳ ಹಿಂದೆ ಮೋದಿಗೆ ಉಡುಗೊರೆಯಾಗಿ ನಿಮ್ಮ ಮೂರ್ತಿ ನೀಡಲಾಗುತ್ತಿದೆ. ಬಹುಬೇಗ ನೀಡಬೇಕು ಎಂದಿದ್ದರು. ಆಗ ನನಗೆ ಸಂತೋಷವಾಯಿತು. ದೇಶದ ಪ್ರಧಾನಿಯೊಬ್ಬರಿಗೆ ನನ್ನ ಕೈಯಿಂದ ತಯಾರಿಸಿದ ಮೂರ್ತಿಯನ್ನು ಕೊಡುಗೆಯಾಗಿ ನೀಡಿರುವುದು ಸಂತಸ ತಂದಿದೆ ಎಂದು ಭಾವುಕರಾದರು.

ಕಳೆದ 6 ತಿಂಗಳಿನಿಂದ ತೇಗದ ಮರದಲ್ಲಿ ಮೂರ್ತಿ ತಯಾರಿಸಲಾಗಿದೆ. ಜತೆಗೆ ಒಂದೂವರೆ ಅಡಿಯ ಲವ-ಕುಶ ಹಾಗೂ ರಾಮನ ಮೂರ್ತಿ ಸಹ ಕಳುಹಿಸಲಾಗಿದೆ. ದೇಶದ ಪ್ರಧಾನಿಯೊಬ್ಬರಿಗೆ ಮೂರ್ತಿ ನೀಡಿರುವುದು ನನ್ನ ಸೌಭಾಗ್ಯ. ನನ್ನ ಹಲವು ವರ್ಷಗಳ ಕಾಯಕಕ್ಕೆ ಸಾರ್ಥಕ ಭಾವ ಮೂಡಿದೆ. ಇಂದು ದೊಡ್ಡ ಪ್ರಶಸ್ತಿ ಬಂದಂತಾಗಿದೆ ಎಂದರು.