20 ವಿಪಕ್ಷ ಸಂಸದರ ನಿಯೋಗ ಇಂದು, ನಾಳೆ ಮಣಿಪುರ ಭೇಟಿ: ನಿಮಗೆ ಚೀನಾ, ಪಾಕಲ್ಲಿ ಬೇಡಿಕೆಯಿದೆ ಹೋಗಿ; ಬಿಜೆಪಿ ವ್ಯಂಗ್ಯ

ಮಣಿಪುರಕ್ಕೆ ವಿಪಕ್ಷಗಳ ಭೇಟಿಗೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಅವರು ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಯತ್ನ ಮಾಡಬಾರದು ಎಂದು ಬಿಜೆಪಿ ಎಚ್ಚರಿಸಿದೆ.

20 opposition mps to visit violence hit manipur today to assess situation ash

ನವದೆಹಲಿ (ಜುಲೈ 29, 2023): ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಹೊಸ ಮೈತ್ರಿಕೂಟವಾದ ‘I.N.D.I.A’ ದ ನಾಯಕರು ಶನಿವಾರದಿಂದ 2 ದಿನಗಳ ಕಾಲ ಭೇಟಿ ನೀಡಲಿದ್ದಾರೆ. ಈ ನಿಯೋಗದಲ್ಲಿ 16 ಪಕ್ಷಗಳ 20 ಸಂಸದರು ಇರಲಿದ್ದಾರೆ. ಎರಡು ದಿನಗಳ ಭೇಟಿ ವೇಳೆ ಕಂಡುಬಂದ ವಸ್ತುಸ್ಥಿತಿ ಕುರಿತು ಕೇಂದ್ರ ಸರ್ಕಾರ ಮತ್ತು ಸಂಸತ್ತಿಗೆ ವರದಿ ನೀಡುವುದಾಗಿ ವಿಪಕ್ಷಗಳ ನಾಯಕರು ಹೇಳಿದ್ದಾರೆ.

ಈ ನಡುವೆ ವಿಪಕ್ಷಗಳ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ‘ಮಣಿಪುರಕ್ಕೆ ವಿಪಕ್ಷಗಳ ಭೇಟಿಗೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಅವರು ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಯತ್ನ ಮಾಡಬಾರದು’ ಎಂದು ಎಚ್ಚರಿಸಿದೆ.

ಇದನ್ನು ಓದಿ: Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

‘I.N.D.I.A’ ಭೇಟಿ:
ವಿಪಕ್ಷಗಳ ಭೇಟಿ ಕುರಿತು ಶುಕ್ರವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಲೋಕಸಭೆಯಲ್ಲಿನ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೋಯ್‌, ‘ಮಣಿಪುರದಲ್ಲಿ ಎಲ್ಲವೂ ಸರಿಯಿದೆ ಎಂಬ ಚಿತ್ರಣವನ್ನು ನೀಡಲು ಬಿಜೆಪಿ ಬಯಸುತ್ತಿದೆ. ಹಾಗಾಗಿ ನಾವು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ರಾಜ್ಯ ಸರ್ಕಾರ ಹಿಂಸಾಚಾರ ತಡೆಯಲು ಏಕೆ ವಿಫಲವಾಗಿದೆ? ಜನ ಈ ಪ್ರಮಾಣದಲ್ಲಿ ಆಯುಧಗಳನ್ನು ಹೇಗೆ ಪಡೆದುಕೊಂಡರು? ಈ ವೇಳೆ ಅಧಿಕಾರಿ ವರ್ಗ ಏನು ಮಾಡುತ್ತಿತ್ತು? ಎಂಬುದು ಬಯಲಾಗಬೇಕಿದೆ. 

ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರೇ ಹೇಳುವ ಪ್ರಕಾರ ರಾಜ್ಯದಲ್ಲಿ 100ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. ಆದರೂ ಸರ್ಕಾರ 2 ತಿಂಗಳು ಏಕೆ ಕಣ್ಮುಚ್ಚಿ ಕುಳಿತಿತ್ತು ಎಂಬ ವಿಷಯಗಳು ಬಯಲಾಗಬೇಕು. ಇದೇ ಕಾರಣಕ್ಕೇ ವಿಪಕ್ಷಗಳ ಸಂಸದರು ಮಣಿಪುರಕ್ಕೆ ತೆರಳಿ ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಲಿದ್ದಾರೆ. 2 ದಿನಗಳ ಕಾಲ ಭೇಟಿಯ ವೇಳೆ ಕಂಡುಬಂದ ವಸ್ತುಸ್ಥಿತಿಯ ಬಗ್ಗೆ ಸರ್ಕಾರ ಹಾಗೂ ಸಂಸತ್ತಿಗೆ ಮಾಹಿತಿ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

ಇನ್ನು ರಾಜ್ಯಸಭೆಯಲ್ಲಿನ ಕಾಂಗ್ರೆಸ್‌ ವಿಪ್‌ ನಾಸಿರ್‌ ಹುಸೇನ್‌ ಮಾತನಾಡಿ, ‘16 ಪಕ್ಷಗಳ 20 ಸಂಸದರು ಶನಿವಾರದಿಂದ 2 ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಂಘರ್ಷ ಪೀಡಿತ ಗುಡ್ಡಗಾಡು ಮತ್ತು ಕಣಿವೆ ಎರಡೂ ಪ್ರದೇಶಕ್ಕೆ ಭೇಟಿ ನೀಡಿ ಜನರ ನೋವು ಆಲಿಸಲಾಗುವುದು. ಇದಲ್ಲದೆ ಎರಡು ಪರಿಹಾರ ಕೇಂದ್ರಗಳಿಗೂ ಭೇಟಿ ನೀಡಲಾಗುವುದು. ಜೊತೆಗೆ ರಾಜ್ಯಪಾಲರ ಭೇಟಿಗೂ ಅವಕಾಶ ಸಿಕ್ಕಿದೆ. ಈ ಎರಡು ದಿನಗಳ ಭೇಟಿ ವೇಳೆ ವಸ್ತುಸ್ಥಿತಿ ಅಧ್ಯಯನ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಹಾಳು ಮಾಡಬೇಡಿ:
ವಿಪಕ್ಷಗಳ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ‘ವಿಪಕ್ಷಗಳ ಮಣಿಪುರ ಭೇಟಿಗೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅವರು ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವುವ ಕೆಲಸ ಮಾಡಬಾರದು ಎಂದಿದ್ದಾರೆ. ಬಿಜೆಪಿಯ ಸಂಸದ ರವಿಕಿಶನ್‌ ಮಾತನಾಡಿ, ವಿಪಕ್ಷ ನಾಯಕರಿಗೆ ಚೀನಾ, ಪಾಕಿಸ್ತಾನದಲ್ಲೇ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಅವರು ಮಣಿಪುರದ ಬದಲು ಚೀನಾ, ಪಾಕಿಸ್ತಾನಕ್ಕೆ ಹೋಗುವುದು ಒಳಿತು’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮಣಿಪುರ ವಿಡಿಯೋ ಕಿತ್ಹಾಕಿ ಎಂದು ಜಾಲತಾಣಕ್ಕೆ ಕೇಂದ್ರ ಸರ್ಕಾರ ಸೂಚನೆ: ಸಿಎಂ ವಜಾ, ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ಆಗ್ರಹ

ಯಾರ್ಯಾರ ಭೇಟಿ?
ಈ ನಿಯೋಗದಲ್ಲಿ ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಮತ್ತು ಗೌರವ್‌ ಗೊಗೋಯ್‌, ಟಿಎಂಸಿಯ ಸುಶ್ಮಿತಾ ದೇವ್‌, ಜೆಎಂಎಂನ ಮಹುವಾ ಮಜಿ, ಡಿಎಂಕೆಯ ಕನಿಮೊಳಿ, ಎನ್‌ಸಿಪಿಯ ವಂದನಾ ಚವಾಣ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಆರ್‌ಜೆಡಿಯ ಮನೋಜ್‌ ಕುಮಾರ್‌, ಆರ್‌ಎಸ್‌ಪಿಯ ಎನ್‌.ಕೆ.ಪ್ರೇಮಚಂದ್‌ ಮತ್ತು ವಿಸಿಕೆಯ ತಿರುಮಾವಳನ್‌ ಮೊದಲಾದವರು ಇರಲಿದ್ದಾರೆ.

ಇನ್ನಷ್ಟು ಹಿಂಸಾಚಾರ: ಯೋಧರಿಗೂ ಗಾಯ
ಇಂಫಾಲ್‌: ಗಲಭೆಪೀಡಿತ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಷ್ಣುಪುರ ಜಿಲ್ಲೆಯಲ್ಲಿ ಗಲಭೆಕೋರ ಉಗ್ರರನ್ನು ಮಟ್ಟಹಾಕಲು ಸೇನಾಪಡೆಯ ಯೋಧರು ನಿರಂತರ 15 ತಾಸು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದು ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಕೊನೆಗೆ ಉಗ್ರರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್‌ ಮಾಡಿ ರೇಪ್‌; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..

Latest Videos
Follow Us:
Download App:
  • android
  • ios