ಮಣಿಪುರ ವಿಡಿಯೋ ಕಿತ್ಹಾಕಿ ಎಂದು ಜಾಲತಾಣಕ್ಕೆ ಕೇಂದ್ರ ಸರ್ಕಾರ ಸೂಚನೆ: ಸಿಎಂ ವಜಾ, ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ಆಗ್ರಹ
ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ವಿಡಿಯೋ ಪ್ರಸಾರ ಮಾಡಿದ ಜಾಲತಾಣಗಳ ವಿರುದ್ಧ ಕೇಂದ್ರ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಉತ್ತರ ನೀಡಬೇಕು ಎಂದು 26 ವಿಪಕ್ಷಗಳ ಮೈತ್ರಿಕೂಟವಾದ ‘I.N.D.I.A’’ ಒತ್ತಾಯಿಸಿವೆ.
ನವದೆಹಲಿ (ಜುಲೈ 21, 2023): ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ವಿಡಿಯೋಗಳನ್ನು ತೆಗೆದು ಹಾಕುವಂತೆ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕೆಲವೊಂದು ನಿಯಂತ್ರಗಳಿಗೆ ಒಳಪಟ್ಟಿರಬೇಕು. ಇಲ್ಲದೇ ಹೋದಲ್ಲಿ ಅವು ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ.
ಹೀಗಾಗಿ ಕೂಡಲೇ ಇಂಥ ವಿಡಿಯೋಗಳನ್ನು ತೆಗೆದುಹಾಕುವಂತೆ ಸರ್ಕಾರ ಸೂಚಿಸಿದೆ. ಜೊತೆಗೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ವಿಡಿಯೋ ಪ್ರಸಾರ ಮಾಡಿದ ಜಾಲತಾಣಗಳ ವಿರುದ್ಧ ಕೇಂದ್ರ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ: Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್ ಮಾಡಿ ರೇಪ್; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..
ಮಣಿಪುರ ಸಿಎಂ ವಜಾ, ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ಆಗ್ರಹ: ಸದನದಲ್ಲಿ ಮೋದಿ ಉತ್ತರಕ್ಕೆ ಪಟ್ಟು
ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಉತ್ತರ ನೀಡಬೇಕು ಎಂದು 26 ವಿಪಕ್ಷಗಳ ಮೈತ್ರಿಕೂಟವಾದ ‘I.N.D.I.A’’ ಒತ್ತಾಯಿಸಿವೆ. ಮುಂಗಾರು ಅಧಿವೇಶನದ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಸಭೆ ಸೇರಿದ್ದ ವಿಪಕ್ಷ ನಾಯಕರು, ‘ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ 2 ಸದನಗಳಲ್ಲಿ ಉತ್ತರಿಸಬೇಕು ಎಂದು ಆಗ್ರಹಿಸಿದವು. ಇದೇ ವೇಳೆ ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರನ್ನು ವಜಾ ಮಾಡಬೇಕು. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯವನ್ನೂ ಮಾಡಲಾಯಿತು.
ಮಣಿಪುರ ಗದ್ದಲಕ್ಕೆ ಸಂಸತ್ ಕಲಾಪ ಬಲಿ: ಮೊದಲ ದಿನವೇ ವಿಪಕ್ಷಗಳಿಂದ ಭಾರೀ ಪ್ರತಿಭಟನೆ
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಮಣಿಪುರ ಗದ್ದಲಕ್ಕೆ ಬಲಿಯಾಗಿದೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಮತ್ತು ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಉಭಯ ಸದನಗಳಲ್ಲಿ ವಿಪಕ್ಷಗಳ ನಾಯಕರು ಗದ್ದಲ ಮಾಡಿದ ಕಾರಣ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಇದನ್ನೂ ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಮಣಿಪುರ ಹಿಂಸಾಚಾರ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ನಾಯಕರು ಘೋಷಣೆಗಳನ್ನು ಕೂಗಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ‘ಮಣಿಪುರ- ಮಣಿಪುರ’, ‘ಮಣಿಪುರ ಹೊತ್ತಿ ಉರಿಯುತ್ತಿದೆ’ ಎಂಬ ಘೋಷಣೆಗಳನ್ನು ಕೂಗುತ್ತಾ ವಿಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ವಿಪಕ್ಷಗಳ ಗದ್ದಲ ಆರಂಭವಾಯಿತು. ಚರ್ಚೆ ಸರ್ಕಾರ ಸಿದ್ಧವಾಗಿದೆ ಎಂದು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಮತ್ತು ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ ಭರವಸೆ ನೀಡಿದರೂ ವಿಪಕ್ಷಗಳು ಘೋಷಣೆ ಮುಂದುವರೆಸಿದ ಕಾರಣ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ರಾಜ್ಯಸಭೆ ಆರಂಭವಾಗುತ್ತಿದ್ದಂತೆ ಕಲಾಪವನ್ನು ಮುಂದೂಡಲಾಯಿತು.
2004ರಲ್ಲೂ ನಡೆದಿತ್ತು ಸ್ತ್ರೀಯರ ನಗ್ನ ಪರೇಡ್
ಇಂಫಾಲ್: ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕ್ರೂರವಾಗಿ ಕೊಂದು ಹಾಕಿದೆ ಎಂದು ಆರೋಪಿಸಿ 2004ರಲ್ಲಿ ಮಣಿಪುರದಲ್ಲಿ 12 ಮಹಿಳೆಯರು ನಗ್ನವಾಗಿ ಮೆರವಣಿಗೆ ಸಾಗಿ ಭಾರೀ ಪ್ರತಿಭಟನೆ ನಡೆಸಿದ್ದರು. ‘ಭಾರತೀಯ ಸೇನೆ, ನಮ್ಮನ್ನು ಅತ್ಯಾಚಾರ ಮಾಡಿ, ನಮ್ಮ ಮಾಂಸ ತೆಗೆದುಕೊಳ್ಳಿ’ ಎಂದು 12 ಮಹಿಳೆಯರು ಅಸ್ಸಾಂ ರೈಫಲ್ಸ್ ಕಚೇರಿ ಮುಂದೆ ನಡೆಸಿದ್ದ ಪ್ರತಿಭಟನೆ ಅಂದು ದೇಶದಲ್ಲೇ ಭಾರೀ ಸುದ್ದಿಯಾಗಿತ್ತು. ಕಳೆದ ಜುಲೈ 15ಕ್ಕೆ ಈ ಘಟನೆ ನಡೆದು 17 ವರ್ಷಗಳು ಕಳೆದಿದ್ದು ಇದೀಗ ಇದೇ ರಾಜ್ಯದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರನ್ನು ನಗ್ನವಾಗಿ ಮೆರವಣಿಗೆ ನಡೆಸಿದ ಘಟನೆ ನಡೆದಿದೆ.
ಇದನ್ನೂ ಓದಿ: ಮಣಿಪುರ ಘಟನೆ ಅಪರಾಧಿಗಳನ್ನು ಸುಮ್ಮನೆ ಬಿಡಲ್ಲ: ಮೋದಿ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಕೈಗೊಳ್ತೇವೆ; ಸುಪ್ರೀಂಕೋರ್ಟ್