Manipur: ಬಿಎಸ್‌ಎಫ್ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ
ಕಳೆದ ವಾರ ಜನಾಂಗೀಯ ಕಲಹ ಪೀಡಿತ ಮಣಿಪುರದ ದಿನಸಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್‌ನನ್ನು ಗಡಿ ಕಾವಲು ಪಡೆ ಅಮಾನತುಗೊಳಿಸಿದೆ.
ಹೊಸದಿಲ್ಲಿ (ಜುಲೈ 25, 2023): ಮಣಿಪುರದಲ್ಲಿ ಹಿಂಸಾಚಾರ ಮಾತ್ರವಲ್ಲ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣವೂ ನಿಲ್ಲೋ ಹಾಗೆ ಕಾಣ್ತಿಲ್ಲ. ಇತ್ತೀಚೆಗಷ್ಟೇ, ಇಬ್ಬರು ಮಹಿಳೆಯರನ್ನು ಬೆತ್ತಲೆ ಪರೇಡ್ ಆಡಿಸಿರೋ ವೈರಲ್ ಹೊರಬಂದಿತ್ತು. ಈ ಬಳಿಕ ಅನೇಕ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗ್ತಿದೆ. ಈ ಬೆನ್ನಲ್ಲೇ, ಬಿಎಸ್‌ಎಫ್ ಯೋಧರೊಬ್ಬರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಹಿರಂಗವಾಗಿದ್ದು, ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಕಳೆದ ವಾರ ಜನಾಂಗೀಯ ಕಲಹ ಪೀಡಿತ ಮಣಿಪುರದ ದಿನಸಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್‌ನನ್ನು ಗಡಿ ಕಾವಲು ಪಡೆ ಅಮಾನತುಗೊಳಿಸಿದೆ. ಹಾಗೂ, ಆರೋಪಿ ಯೋಧನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್ ಕೇಸ್!
ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಸಮವಸ್ತ್ರದಲ್ಲಿರುವ ಮತ್ತು INSAS ರೈಫಲ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ತೋರಿಸಿದೆ. ನಂತರ ಇವರನ್ನು ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಮಹಿಳೆಯನ್ನು ಅಸಹ್ಯವಾಗಿ ಮುಟ್ಟಿದ್ದು, ಲೈಂಗಿಕ ದೌರ್ಜನ್ಯ ನೀಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು "ಇಂಫಾಲ್‌ನಲ್ಲಿ ಜುಲೈ 20 ರಂದು ಪೆಟ್ರೋಲ್ ಪಂಪ್ ಬಳಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ವಿಡಿಯೋ ಕಿತ್ಹಾಕಿ ಎಂದು ಜಾಲತಾಣಕ್ಕೆ ಕೇಂದ್ರ ಸರ್ಕಾರ ಸೂಚನೆ: ಸಿಎಂ ವಜಾ, ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ಆಗ್ರಹ
ಬಿಎಸ್ಎಫ್ ಈ ಸಂಬಂಧ ದೂರು ಸ್ವೀಕರಿಸಿದ ನಂತರ ಆರೋಪಿ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. "ಅವರನ್ನು ನಿಕಟ ಬಂಧನದಲ್ಲಿ ಇರಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ" ಎಂದೂ ಅಧಿಕಾರಿ ಹೇಳಿದರು.
ಕಳೆದ ವಾರ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವ ಮೊದಲು ಇಬ್ಬರು ಮಹಿಳೆಯರನ್ನು ಮಣಿಪುರ ರಾಜ್ಯದ ಥೌಬಲ್ ಜಿಲ್ಲೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಒಬ್ಬರು ಬಾಲಾಪರಾಧಿಯಾಗಿದ್ದಾರೆ ಎಂದು ವರದಿಯಾಗಿದೆ.
"ಗುರುತಿಸಲ್ಪಟ್ಟವರ ಶಂಕಿತ ಅಡಗುತಾಣಗಳ ಮೇಲೆ ದಾಳಿ ಮಾಡುವ ಮೂಲಕ ಉಳಿದ ಆರೋಪಿಗಳನ್ನು ಗುರುತಿಸಲು ರಾಜ್ಯ ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ" ಎಂದೂ ತನಿಖೆಯ ಉಸ್ತುವಾರಿ ವಹಿಸಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್ ಮಾಡಿ ರೇಪ್; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..
ಈ ಮಧ್ಯೆ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಕುರಿತು ಹಲವಾರು ಶೂನ್ಯ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಸಂತ್ರಸ್ತರು ಇನ್ನೂ ಪೊಲೀಸರ ಎದುರು ವಿವರ ನೀಡದ ಕಾರಣ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ. ಹಾಗೂ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮ್ಯಾನ್ಮಾರ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಮಹಿಳೆಯೊಬ್ಬಳ ದುರಂತ ಹತ್ಯೆಯ ವಿಡಿಯೋವನ್ನು ಮಣಿಪುರದ್ದು ಎಂದು ಹೇಳಲಾಗಿತ್ತು. ಮತ್ತು ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ಅಶಾಂತಿಯನ್ನು ಪ್ರಚೋದಿಸಲು ಇದನ್ನು ವೈರಲ್ ಮಾಡಿದ ಹಿನ್ನೆಲೆ ಮಣಿಪುರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಸಿಪಿಎಸ್) ಎಫ್‌ಐಆರ್ ದಾಖಲಿಸಿದೆ ಮತ್ತು ವಿಡಿಯೋವನ್ನು ವೈರಲ್ ಮಾಡಿದವರ ಐಪಿ ವಿಳಾಸಗಳನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದೆ.
ಇದನ್ನೂ ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ