2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿಯಾಗಿ ಶಪಥಗ್ರಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನಿಂದ ತಿರುಗಿ ನೋಡಿದ್ದೇ ಇಲ್ಲ ಬರುವ ಅ.7ರಂದು ಅವರು ಅಧಿಕಾರದ ಗದ್ದುಗೆಯಲ್ಲಿ ಭರ್ತಿ 20 ವರ್ಷಗಳನ್ನು ಪೂರೈಸಲಿದ್ದಾರೆ

2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿಯಾಗಿ ಶಪಥಗ್ರಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನಿಂದ ತಿರುಗಿ ನೋಡಿದ್ದೇ ಇಲ್ಲ. ಬರುವ ಅ.7ರಂದು ಅವರು ಅಧಿಕಾರದ ಗದ್ದುಗೆಯಲ್ಲಿ ಭರ್ತಿ 20 ವರ್ಷಗಳನ್ನು ಪೂರೈಸಲಿದ್ದಾರೆ. ಇದೇ ವೇಳೆ ಸೆ.17ರಂದು ದೇಶದ ಕಂಡ ದಿಟ್ಟಪ್ರಧಾನ ಮಂತ್ರಿಯ 72ನೇ ಹುಟ್ಟುಹಬ್ಬ. ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಿರುವ ಇಂದಿನ ದಿನಮಾನದವರೆಗೆ ಮೋದಿ ಅವರು ಗುಜರಾತ್‌ ಹಾಗೂ ದೇಶದ ಜನತೆಗೆ ಸಾಕಷ್ಟುಕೊಡುಗೆಗಳನ್ನು ನೀಡಿದ್ದಾರೆ. ಸಾಧನೆಗಳನ್ನು ಮಾಡಿದ್ದಾರೆ. ಆ ಪೈಕಿ ಪ್ರಮುಖ 20 ಎನ್ನಬಹುದಾದ ಸಾಧನೆಗಳನ್ನು ಇಲ್ಲಿ ಮೈಲುಗಲ್ಲುಗಳ ರೂಪದಲ್ಲಿ ಪಟ್ಟಿಮಾಡಲಾಗಿದೆ.

1. ‘ಗುಜರಾತ್‌ ಮಾದರಿ’ ಅಭಿವೃದ್ಧಿ

ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗುವ ಮುನ್ನ ಗುಜರಾತ್‌ ನೈಸರ್ಗಿಕ ವಿಕೋಪ, ರಾಜಕೀಯ ವಿಪ್ಲವಗಳ ಕಾರಣಕ್ಕೆ ಸುದ್ದಿಯಾಗುತ್ತಿತ್ತು. ಮೋದಿ ಅವರು ಅಧಿಕಾರಕ್ಕೇರಿದ ಬಳಿಕ ರಾಜ್ಯದ ಚಿತ್ರಣವೇ ಬದಲಾಗಿ ಅಭಿವೃದ್ಧಿ ಪರವಾದ ರಾಜ್ಯವಾಗಿ ಹೊರಹೊಮ್ಮಿತು. ಅಲ್ಲದೆ ಉದ್ಯಮ ವಲಯದಲ್ಲಿ ಶೇ.13ರಷ್ಟುಹಾಗೂ ಕೃಷಿ ವಿಭಾಗದಲ್ಲಿ ಶೇ.10.7ರಷ್ಟುಅಭಿವೃದ್ಧಿ ಕಂಡಿತು. ಜೊತೆಗೆ ದೇಶದ ಒಟ್ಟಾರೆ ರಫ್ತು ಪೈಕಿ ಗುಜರಾತ್‌ ಪಾಲು ಶೇ.22ಕ್ಕೇರಿತು. ಹಲವು ವಿನೂತನ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಂಡವು. ಅಭಿವೃದ್ಧಿಗೆ ‘ಗುಜರಾತ್‌ ಮಾದರಿ’ ಎಂಬ ಪದ ಸೇರ್ಪಡೆಯಾಯಿತು. ದೇಶ- ವಿದೇಶಗಳಲ್ಲೂ ಗುಜರಾತ್‌ ಮಾದರಿ ಚರ್ಚೆಯಾಗಿ ಆ ರಾಜ್ಯ ದೇಶದ ಗಮನ ಸೆಳೆಯಿತು. ವಿಶ್ವದ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಒಂದಾಗಿರುವ ಟೈಮ್‌ನಲ್ಲಿ 2012ರ ಮಾ.26ರಂದು ಮೋದಿ ಅವರ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ಇದರಲ್ಲಿ ಮೋದಿ ಎಂದರೆ ಬಿಸಿನೆಸ್‌ ಎಂಬ ಕುರಿತಾಗಿ ಲೇಖನ ಪ್ರಕಟಿಸಲಾಗಿತ್ತು.

2. ಪ್ರತಿ ಹಳ್ಳಿಗೂ ವಿದ್ಯುತ್‌ ಸಂಪರ್ಕ

ಗುಜರಾತಿನ ಪ್ರತಿ ಹಳ್ಳಿಗೂ ವಿದ್ಯುತ್‌ ಪೂರೈಸುವ ಯೋಜನೆಯನ್ನು ಮೋದಿ ಯಶಸ್ವಿಯಾಗಿ ಜಾರಿಗೊಳಿಸಿದರು. ವಿದ್ಯುತ್‌ ವಿತರಣೆಯಲ್ಲಿ ಗಮನಾರ್ಹ ಸುಧಾರಣೆ ತಂದರು. ಜ್ಯೋತಿ ಗ್ರಾಮ ಯೋಜನೆ ಮೂಲಕ ಕೃಷಿ ಹಾಗೂ ಗ್ರಾಮೀಣ ವಿದ್ಯುತ್‌ ಪೂರೈಕೆಯನ್ನು ಪ್ರತ್ಯೇಕಿಸಿದರು. ಹಲವು ನೀರಾವರಿ ಯೋಜನೆ ಮೂಲಕ ರೈತರಿಗೆ ನೆರವಾದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು.

3. ಸದ್ಭಾವನೆಗಾಗಿ 3 ದಿನಗಳ ಉಪವಾಸ

ಗುಜರಾತ್‌ ಗಲಭೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಮೋದಿ ಅವರಿಗೆ ಅಲ್ಪಸಂಖ್ಯಾತರ ವಿರೋಧಿ ಎಂಬ ಕಳಂಕ ಹತ್ತಿಕೊಂಡಿತ್ತು. ಇದನ್ನು ತೊಡೆದು ಹಾಕಿ ತಾವೊಬ್ಬ ಪ್ರಜಾ ಸೇವಕ ಎಂಬುದನ್ನು ನಿರೂಪಿಸಲು ಹಾಗೂ ಸಾಮಾಜಿಕ ಸಾಮರಸ್ಯ ಸ್ಥಾಪನೆಗಾಗಿ ಮೋದಿ ಅವರು 3 ದಿನ ಸದ್ಭಾವನೆ ಹೆಸರಿನಲ್ಲಿ ಉಪವಾಸ ಮಾಡಿ ದೇಶದ ಗಮನ ಸೆಳೆದರು. ಅಲ್ಪಸಂಖ್ಯಾತರಲ್ಲಿನ ಆತಂಕ ನಿವಾರಿಸಲು ಯತ್ನಿಸಿದರು.

4. ವಿಶ್ವದ ಎತ್ತರದ ಪ್ರತಿಮೆ ನಿರ್ಮಾಣ

ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಕೊಡುಗೆಯನ್ನು ಸ್ಮರಿಸಲು ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ನರೇಂದ್ರ ಮೋದಿ ಅವರು 2013ರ ಅಕ್ಟೋಬರ್‌ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ 57 ತಿಂಗಳಲ್ಲಿ ಪಟೇಲ್‌ ಅವರ ಏಕತಾ ಪ್ರತಿಮೆಯ ಕಾಮಗಾರಿ ಪೂರ್ಣಗೊಳಿಸಲಾಯಿತು. ಇದಕ್ಕೆ ಏಕತಾ ಪ್ರತಿಮೆ ಎಂದು ಹೆಸರಿಸಲಾಯಿತು. ಪ್ರತಿಮೆಗೆ ದೇಶಾದ್ಯಂತ ರೈತರಿಂದ ಕಬ್ಬಿಣ ಸಂಗ್ರಹಿಸಲಾಯಿತು.

5. ಸ್ವಂತ ಬಲದಲ್ಲಿ ಬಿಜೆಪಿ ಸರ್ಕಾರ

ಸತತ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿಯನ್ನು ಅಧಿಕಾರಕ್ಕೇರಿಸಿದವರು ನರೇಂದ್ರ ಮೋದಿ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಸಿಎಂ ಆಗಿದ್ದಾಗಲೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾದ ದೇಶದ ಮೊದಲ ರಾಜಕಾರಣಿ ಅವರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶ ಸುತ್ತಿ 2014ರಲ್ಲಿ ಬಿಜೆಪಿಯನ್ನು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೇರಿಸಿದರು. 2019ರಲ್ಲಿ ಪುನರಾಯ್ಕೆಯಾದರು. ಬಿಜೆಪಿ ಎಂದೂ ಗೆಲ್ಲದ ರಾಜ್ಯಗಳಲ್ಲಿ ಆ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸಿದರು.

6. ಐತಿಹಾಸಿಕ ಜಿಎಸ್‌ಟಿ ಅನುಷ್ಠಾನ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪದ್ಧತಿಯು ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಈ ವ್ಯವಸ್ಥೆ ಅನುಷ್ಠಾನವು ಒಂದು ಸವಾಲಿನ ಕೆಲಸವೇ ಆಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರವು 2017ರ ಜು.1ರಿಂದ ತೆರಿಗೆ ಸುಧಾರಣೆಯ ಜಿಎಸ್‌ಟಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಇದರೊಂದಿಗೆ 17 ಬಗೆಯ ಪರೋಕ್ಷ ತೆರಿಗೆಗಳು ಜಿಎಸ್‌ಟಿ ಅಡಿ ಒಂದೇ ತೆರಿಗೆಯಾಗಿ ಮಾರ್ಪಟ್ಟವು.

7. ‘ಸ್ವಚ್ಛ ಭಾರತ’ ಮಹಾ ಅಭಿಯಾನ

ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಯೋಜನೆ. ಬಯಲು ಬಹಿರ್ದೆಸೆಗೆ ಕೊನೆಯಾಡುವುದು, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುವುದು, ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಲು ರಾತ್ರಿಯಾಗುವುದಕ್ಕೆ ಕಾಯುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಯುದ್ಧೋಪಾದಿಯಲ್ಲಿ ಶೌಚಾಲಯಗಳು ನಿರ್ಮಾಣವಾದವು. ಮೋದಿ ಅವರು ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

8. ಜನಧನ್‌, ಉಚಿತ ಗ್ಯಾಸ್‌ ಸಂಪರ್ಕ

ಸರ್ಕಾರ ನೀಡುವ ನೆರವು ಅನರ್ಹರ ಪಾಲಾಗುವುದನ್ನು ತಪ್ಪಿಸಲು ಆಧಾರ್‌ ಜೋಡಣೆಯನ್ನು ಯಶಸ್ವಿಯಾಗಿ ಮೋದಿ ಜಾರಿಗೊಳಿಸಿದರು. ಸರ್ಕಾರದ ನೆರವು ಫಲಾನುಭವಿಗಳಿಗೆ ನೇರವಾಗಿ ತಲುಪುವಂತಾಗಲು ಜನಧನ ಯೋಜನೆ ಆರಂಭಿಸಿ ಎಲ್ಲರಿಗೂ ಉಚಿತ ಬ್ಯಾಂಕ್‌ ಖಾತೆ ತೆರೆಯಲು ಅನುವು ಮಾಡಿಕೊಟ್ಟರು. ಕೇವಲ 2 ರು.ಗೆ ಜನತೆಗೆ ಅಪಘಾತ ವಿಮೆ ದೊರಕುವಂತೆ ಮಾಡಿದರು. ಕಪ್ಪು ಹಣ ತಡೆಗೆ ನೋಟು ರದ್ದತಿ ಮಾಡಿದರು. ಆರ್ಥಿಕವಾಗಿ ಅನುಕೂಲವುಳ್ಳವರು ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟರು. ಅದೇ ಹಣದಲ್ಲಿ ಬಡ ಮಹಿಳೆಯರಿಗೆ ಉಜ್ವಲಾ ಹೆಸರಿನಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದರು.

9. ರೈತರಿಗೆ ವಾರ್ಷಿಕ 6000 ರು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸಲು ಮೋದಿ ಗುರಿ ನಿಗದಿಪಡಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ವರ್ಷಕ್ಕೆ 3 ಕಂತುಗಳಲ್ಲಿ ತಲಾ 2 ಸಾವಿರ ರು.ನಂತೆ 6 ಸಾವಿರ ರು. ನೀಡುತ್ತಿದ್ದಾರೆ. ಕೃಷಿ ಸಾಲ ವಿತರಣೆ ಪ್ರಮಾಣ ಹೆಚ್ಚಿಸಿದ್ದಾರೆ. ಕೃಷಿ ಸಿಂಚಾಯಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬೆಂಬಲ ಬೆಲೆಯನ್ನು ಅವಧಿಗಿಂತ ಮೊದಲೇ ಹೆಚ್ಚಳ ಮಾಡುತ್ತಿದ್ದಾರೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ 3 ಕಾಯ್ದೆಗಳನ್ನೂ ಜಾರಿಗೊಳಿಸಿದ್ದಾರೆ. ರೈತರು ಎಪಿಎಂಸಿಗಳ ಹಂಗಿಲ್ಲದೆ ಎಲ್ಲಿ ಬೇಕಾದರೂ ಉತ್ಪನ್ನ ಮಾರಲು ಅವಕಾಶ ಕಲ್ಪಿಸಿದ್ದಾರೆ.

10. ತ್ರಿವಳಿ ತಲಾಖ್‌ಗೇ ತಲಾಖ್‌

ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ ಕೂಪದಿಂದ ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2019ರ ಜು.26ರಂದು ಮುಸ್ಲಿಂ ಮಹಿಳೆಯರ ವಿವಾಹ ಕುರಿತ ಹಕ್ಕುಗಳ ರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಿತು. ತನ್ಮೂಲಕ 2019ರ ಆ.1ರಿಂದ ಯಾವುದೇ ರೀತಿಯಲ್ಲಿ ತ್ರಿವಳಿ ತಲಾಖ್‌ ಮುಖಾಂತರ ನೀಡಲಾಗುವ ವಿಚ್ಛೇದನವು ಅಕ್ರಮವೆಂದು ಪರಿಗಣಿಸಲಾಯಿತು. ಅಲ್ಲದೆ ಈ ನೂತನ ಕಾಯ್ದೆಯು ಸಂತ್ರಸ್ತ ಮಹಿಳೆಯರು ತಮ್ಮ ಪತಿ ಅಥವಾ ಪತಿಯ ಕುಟುಂಬದಿಂದ ನೆರವು ಪಡೆಯಲು ಅನುಕೂಲ ಕಲ್ಪಿಸಿತು.

11. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು

ಭಾರತ ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 1954ರಿಂದಲೂ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ 2019ರ ಆಗಸ್ಟ್‌ 5ರಂದು ಜಮ್ಮು-ಕಾಶ್ಮೀರದಲ್ಲಿ ಭಾರೀ ಬಿಗಿ ಬಂದೋಬಸ್‌್ತ ಅನ್ನು ಏರ್ಪಡಿಸಿದ ಮೋದಿ ಸರ್ಕಾರವು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಅಲ್ಲದೆ ಜಮ್ಮು-ಕಾಶ್ಮೀರವನ್ನು ಲಡಾಖ್‌ ಮತ್ತು ಜಮ್ಮು-ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜನೆ ಮಾಡಲಾಯಿತು.

12. ರಾಮಮಂದಿರಕ್ಕೆ ಐತಿಹಾಸಿಕ ಶಂಕು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2019ರಲ್ಲಿ ಸುಪ್ರೀಂ ಕೋರ್ಟ್‌ ಅಸ್ತು ನೀಡಿತು. ಆ ಬಳಿಕ 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ದೇಗುಲ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು. 3 ದಿನಗಳ ಕಾಲ ವೇದ-ಪಾರಾಯಣದ ಮುಖಾಂತರ ನಡೆದ ಭೂಮಿ ಪೂಜೆ ಕಾರ್ಯಕ್ರಮದ ವೇಳೆ ನರೇಂದ್ರ ಮೋದಿ ಅವರು 40 ಕೇಜಿ ತೂಕದ ಇಟ್ಟಿಗೆಯನ್ನು ಬುನಾದಿ ಕಲ್ಲನ್ನಾಗಿ ಇಟ್ಟರು.

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

13. ಯೋಜನಾ ಆಯೋಗಕ್ಕೆ ಹೊಸ ರೂಪ

ನೆಹರು ಕಾಲದ ಯೋಜನಾ ಆಯೋಗವನ್ನು ಅಧಿಕಾರಕ್ಕೇರಿದ ಹೊಸತರಲ್ಲಿ ಮೋದಿ ಅವರು ರದ್ದುಗೊಳಿಸಿದರು. ಅದರ ಬದಲಾಗಿ ಯೋಜನೆಗಳ ಜಾರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಮಾನ ಅವಕಾಶ ಕಲ್ಪಿಸುವ ‘ನೀತಿ ಆಯೋಗ’ ರಚನೆ ಮಾಡಿದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಜಾರಿಗೆ ತಂದಿದ್ದ ಪಂಚವಾರ್ಷಿಕ ಯೋಜನೆಯನ್ನೂ ಮೋದಿ ಸರ್ಕಾರ 2017ರಲ್ಲಿ ರದ್ದುಗೊಳಿಸಿತು. ಇದರ ಜಾಗದಲ್ಲಿ ಯೋಜನೆಗಳ ತ್ವರಿತ ಪೂರ್ಣತೆಗಾಗಿ 3 ವರ್ಷಗಳ ಯೋಜನೆ ಮತ್ತು 15 ವರ್ಷಗಳ ಯೋಜನೆಯನ್ನು ಜಾರಿಗೆ ತರಲಾಯಿತು.

14. ಆರೋಗ್ಯಕ್ಕೆ ಆಯುಷ್ಮಾನ್‌ ಭಾರತ

ದೇಶದ 10 ಕೋಟಿ ಕುಟುಂಬಗಳು ಹಾಗೂ 50 ಕೋಟಿ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಆಯುಷ್ಮಾನ್‌ ಭಾರತ ಯೋಜನೆಯನ್ನು 2018ರ ಸೆ.23ರಂದು ಮೋದಿ ಸರ್ಕಾರ ಜಾರಿಗೆ ತಂದಿತು. ಈ ಯೋಜನೆಯಡಿ ಓರ್ವ ಫಲಾನುಭವಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಆರೋಗ್ಯ ವಿಮೆ ನೀಡಲಾಗುತ್ತದೆ.

ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’

15. ಮೇಕ್‌ ಇನ್‌ ಇಂಡಿಯಾ ಅಭಿಯಾನ

ಬಹು ರಾಷ್ಟ್ರೀಯ ಕಂಪನಿಗಳು ದೇಶದಲ್ಲೇ ಉದ್ಯಮ ಸ್ಥಾಪಿಸುವ ಮತ್ತು ಆ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಘೋಷಣೆ ಮಾಡಲಾಯಿತು. ಭಾರತಕ್ಕೆ ಅತಿಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದುಬರಲು ಮತ್ತು ದೇಶದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಇದು ನೆರವಾಗಿದೆ.

16. ಹಗರಣಗಳ ಸದ್ದಿಲ್ಲದೆ ಆಡಳಿತ

ಭಾರತದಲ್ಲಿ ಭ್ರಷ್ಟಾಚಾರವಿಲ್ಲದೆ ರಾಜಕೀಯವೇ ಇಲ್ಲ ಎಂಬ ಮಾತಿದೆ. ಸಿಡಬ್ಲ್ಯುಸಿ, ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಂಚಿಕೆÜ ಸೇರಿದಂತೆ ಹಲವು ಹಗರಣಗಳ ಆರೋಪವನ್ನು ಹಿಂದಿನ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಎದುರಿಸಿತ್ತು. ಆದರೆ ಮೋದಿ ನೇತೃತ್ವದ ಸರ್ಕಾರದಲ್ಲಿ ಅಂತಹ ಹಗರಣಗಳು ಸದ್ದು ಮಾಡಲಿಲ್ಲ.

17. ಪಾಕ್‌ಗೆ ಶಾಕ್‌, ಚೀನಾಕ್ಕೆ ಪಾಠ

ಹಿಂದೆಲ್ಲಾ ಪದೇ ಪದೇ ಭಯೋತ್ಪಾದಕ ದಾಳಿಗಳು ನಡೆದು ಜನರು ಆತಂಕದಲ್ಲಿ ದಿನ ದೂಡುವಂತಾಗಿತ್ತು. ಆದರೆ ಮೋದಿ ಅವರು ಅಧಿಕಾರಕ್ಕೇರಿದ ಬಳಿಕ ಉಗ್ರರ ದಾಳಿಗಳು ಕಡಿಮೆಯಾದವು. ಉಗ್ರರು ದಾಳಿ ನಡೆಸಿದರೆ ಅವರಿಗೆ ತಿರುಗೇಟು ನೀಡುವ ಪರಿಪಾಠ ಆರಂಭವಾಯಿತು. ಪಾಕಿಸ್ತಾನ ಮೇಲೆ ಸರ್ಜಿಕಲ್‌ ಸ್ಟೆ್ರೖಕ್‌ ಹಾಗೂ ವಾಯು ದಾಳಿ ನಡೆಸಿ ಮೋದಿ ಇನ್ನು ಎಲ್ಲವನ್ನೂ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದರು. ಗಡಿಯಲ್ಲಿ ತಂಟೆ ತೆಗೆದ ಚೀನಾವನ್ನೂ ಮೋದಿ ರಾಜತಾಂತ್ರಿಕವಾಗಿ ಮಣಿಸಿದರು.

18. ವಿದೇಶಗಳ ಜೊತೆ ಬಾಂಧವ್ಯವೃದ್ಧಿ

ಮೋದಿ ಅವಧಿಯಲ್ಲಿ ಭಾರತ ಜಾಗತಿಕ ಶಕ್ತಿಗಳ ಮಧ್ಯೆ ಪ್ರಭಾವಿಯಾಗಿ ಬೆಳೆಯಿತು. ಮೋದಿ ಅವರು ವಿದೇಶಿ ಗಣ್ಯಾತಿ ಗಣ್ಯರನ್ನು ಆತ್ಮೀಯತೆಯಿಂದ ಮಾತನಾಡಿಸಿ ಹಲವು ರೀತಿಯ ನೆರವನ್ನು ಪಡೆದರು. ಭಾರತದ ಬಗ್ಗೆ ವಿದೇಶಗಳಲ್ಲಿ ಮೊದಲಿದ್ದ ಭಾವನೆ ಬದಲಾಯಿತು.

19. ಬುಲೆಟ್‌ ರೈಲು, ಬಡವರಿಗೂ ವಿಮಾನ

ದೇಶದ ಮೊದಲ ಬುಲೆಟ್‌ ರೈಲು ಯೋಜನೆಯನ್ನು ಮೋದಿ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಹೆದ್ದಾರಿ ನಿರ್ಮಾಣ ವೇಗ ಚುರುಕಾಗಿದೆ. ಹವಾಯ್‌ ಚಪ್ಪಲಿ ಹಾಕಿದವರೂ ವಿಮಾನ ಹತ್ತುವಂತಾಗಬೇಕು ಎಂಬ ಗುರಿಯೊಂದಿಗೆ ಉಡಾನ್‌ ಯೋಜನೆ ಜಾರಿಗೊಳಿಸಲಾಗಿದೆ. ಹಲವು ಕಡೆ ಏರ್‌ ಸ್ಟ್ರಿಪ್‌ಗಳನ್ನು ಬಳಸಿಕೊಳ್ಳಲಾಗಿದೆ. ಹೆದ್ದಾರಿಗಳಲ್ಲಿ ವಿಮಾನ ಇಳಿಸುವ ವ್ಯವಸ್ಥೆ ಮಾಡಲಾಗಿದೆ. ಜಲ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯನ್ನು ಮೋದಿ ಅವರು ಜಾರಿಗೆ ತಂದಿದ್ದಾರೆ.

20. ಆತ್ಮನಿರ್ಭರ ಭಾರತ, ಸ್ವದೇಶೀ ಒತ್ತು

ಎಲ್ಲದಕ್ಕೂ ವಿದೇಶಗಳ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸಲು ದೇಶದಲ್ಲೇ ಉತ್ಪಾದನೆಗೆ ಪ್ರೋತ್ಸಾಹಿಸಲು ಮೋದಿ ಅವರು ಆತ್ಮನಿರ್ಭರ ಕನಸು ನನಸುಗೊಳಿಸಲು ಯತ್ನಿಸುತ್ತಿದ್ದಾರೆ. ದೇಶದಲ್ಲೇ ವಿವಿಧ ಉತ್ಪನ್ನಗಳನ್ನು ತಯಾರಿಸಿದರೆ ಸಬ್ಸಿಡಿ ನೀಡುವ ಯೋಜನೆ ಆರಂಭಿಸಿದ್ದಾರೆ. ಮಿಲಿಟರಿ ಕ್ಷೇತ್ರದ ಅನೇಕ ಸಾಧನಗಳು ಭಾರತದಲ್ಲೇ ತಯಾರಾಗಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಹಲವು ಬ್ರಾಂಡ್‌ಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಲು ತುದಿಗಾಲಿನಲ್ಲಿ ನಿಂತಿವೆ.