ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’
- ನೆರೆದೇಶಗಳ ಸ್ನೇಹ, ಸಮರ್ಥ ರಾಜತಾಂತ್ರಿಕತೆ, ದೇಶದ ಇಮೇಜ್ ಬದಲಿಸಿದ ವಿದೇಶಯಾನಗಳು
- ಗುರಿ ಸಾಧನೆಯ ಆಡಳಿತ, ಸಮರ್ಥ ನಾಯಕತ್ವ, ಸಾಂಸ್ಕೃತಿಕ ವೈಭವಕ್ಕೆ ಮರುಹುಟ್ಟು ನೀಡಿದ ನಮೋ
ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಅಂದು 2014 ಮೇ 16. ದೇಶದ ಆಡಳಿತ ಚುಕ್ಕಾಣಿ ನರೇಂದ್ರ ಮೋದಿಯವರ ಕೈಯಲ್ಲಿರುವುದನ್ನು ಕಾಣಬೇಕು ಎಂಬ ಅಸಂಖ್ಯಾತ ಭಾರತೀಯರ ಆಸೆ ಈಡೇರಿತು. ಆ ದಿನ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಂದ ಫಲಿತಾಂಶ ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪುತ್ತಿರುವ ಸಂಕೇತವನ್ನು ರವಾನಿಸಿತ್ತು. ಬಿಜೆಪಿ ಮುನ್ನಡೆ ಸಾಧಿಸುತ್ತಾ ಮುನ್ನುಗ್ಗುತ್ತಿತ್ತು. ಆದರೆ ವಿರೋಧಿಗಳು ಮತ್ತು ನಿರಾಶಾವಾದಿಗಳು ಮೋದಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಲು ಬಹಳ ಹೊತ್ತೇನೂ ಬೇಕಾಗಲಿಲ್ಲ. ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಮ್ಯಾಜಿಕ್ ನಂಬರ್ 272 ಮೀರಿ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿಯೊಂದೇ 282 ಸ್ಥಾನಗಳಲ್ಲಿ ಗೆಲವು ಕಂಡಿತು. ಅಂತಿಮ ಲೆಕ್ಕಾಚಾರ ಪ್ರಕಾರ ಎನ್‌ಡಿಎ ಗೆದ್ದ ಸ್ಥಾನಗಳ ಸಂಖ್ಯೆ 336. ಅಂದು ಎಲ್ಲರೂ ನಿಬ್ಬೆರಗಾಗುವಂತೆ ಭಾರತದ ಇತಿಹಾಸ ಪುಟಗಳಲ್ಲಿ ರಾಜಕೀಯದ ಹೊಸ ಮೈಲುಗಲ್ಲು ದಾಖಲಾಯಿತು. 30 ವರ್ಷಗಳ ಅವಧಿಯಲ್ಲಿ ರಾಜಕೀಯ ಪಕ್ಷವೊಂದು ಅದೇ ಮೊದಲ ಬಾರಿಗೆ ಬಹುಮತದೊಂದಿಗೆ ಗೆಲುವು ದಾಖಲಿಸಿತು.
ಅತ್ಯಂತ ಪುರಾತನ ಪಕ್ಷ ಆ ಚುನಾವಣೆಯಲ್ಲಿ ತನ್ನ ಜೀವಿತಾವಧಿಯ ಕನಿಷ್ಠ ಮಟ್ಟದ ಪ್ರದರ್ಶನ ತೋರಿತ್ತು. 44 ಸೀಟು ಹೊಂದುವ ಮೂಲಕ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯುವ ಅರ್ಹತೆಯನ್ನೂ ಕಳೆದುಕೊಂಡಿತು. ಇದಕ್ಕೆಲ್ಲಾ ಕಾರಣ ಪ್ರಧಾನಿ ಮೋದಿ. ‘ಹರ್ ಹರ್ ಮೋದಿ, ಘರ್ ಘರ್ ಮೋದಿ’ ಘೋಷಣೆಯೊಂದಿಗೆ ಇಂದು ಪ್ರತಿ ಮನೆ ಮನಗಳಲ್ಲಿ ಸ್ವಾರ್ಥವಿಲ್ಲದೆ ಈ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಟೊಂಕಕಟ್ಟಿನಿಂತ ಜನರಿದ್ದಾರೆ. ಮೋದಿಯವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಮಟ್ಟಿಗೆ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿಬಿಟ್ಟಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಂಸತ್ ಭವನ ಪ್ರವೇಶಿಸುವ ಮುನ್ನ ಅದರ ಮೆಟ್ಟಿಲುಗಳಿಗೆ ನಮಿಸಿ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಮೋದಿ ಬೆಲೆ ಕೊಟ್ಟರು. ನಂತರ ತಮ್ಮ ಆಡಳಿತದಲ್ಲಿ ಭಾರತ ಹೇಗಿರಬೇಕು ಎಂಬ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ನರೇಂದ್ರ ಮೋದಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆ ವಡ್‌ನಗರದಲ್ಲಿ ಸೆಪ್ಟೆಂಬರ್ 17, 1950ರಂದು ದಾಮೋದರ್ ದಾಸ್ ಮುಲ್ಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ದಂಪತಿಯ ಪುತ್ರನಾಗಿ ಜನಿಸಿದರು. ಅವರಿಗೆ ಸೆ.17ರ ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ. ತಮ್ಮ ಆಡಳಿತಾವಧಿಯಲ್ಲಿ ಭಾರತ ಹೇಗೆಲ್ಲಾ ಅಭಿವೃದ್ಧಿಯಾಗಬೇಕು ಎಂಬ ಬೃಹತ್ ಕನಸು ಕಂಡು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಮಾನವೀಯತೆಯ ಹಾದಿ
ನೆರೆ-ಕೆರೆಯವರೊಂದಿಗೆ ಉತ್ತಮ ಬಾಂಧವ್ಯ ಎಂಬ ಭಾರತದ ನೀತಿಯನ್ನು ಆರಂಭಿಕ ನಡೆಯಲ್ಲಿಯೇ ಮೋದಿ ತೋರಿಸಿಕೊಟ್ಟರು. ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. ಈ ರಾಜತಾಂತ್ರಿಕ ನೈಪುಣ್ಯದ ಮೂಲಕ ಇಡೀ ಜಗತ್ತನ್ನೇ ಅಚ್ಚರಿಗೆ ಕೆಡವಿದರು. ಕಟ್ಟರ್ ಹಿಂದೂ ಎಂಬ ಭಾವನೆಯಿಂದ ಅದುವರೆಗೂ ಮೋದಿಯನ್ನು ನೋಡುತ್ತಿದ್ದವರ ದೃಷ್ಟಿಕೋನ ಬದಲಾಯಿತು. ಭಾರತದ ವಿದೇಶಿ ನೀತಿಯು ಮೋದಿ ಸರ್ಕಾರದಡಿಯಲ್ಲಿ ಅತ್ಯಂತ ಸಹಜ, ಸದೃಢ, ಸಂವೇದನಾಶೀಲವಾಗಿದ್ದು, ಯಾವುದೇ ರೀತಿಯ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಚಿಂತಕರ ಅಭಿಪ್ರಾಯ ವಾಸ್ತವ.
ಭಾರತವು ಅದಕ್ಕಿಂತ ಮೊದಲು ಸ್ಪಷ್ಟಗುರಿ ಇಲ್ಲದ ರಷ್ಯಾ ಕೇಂದ್ರಿತ ಅಥವಾ ಅಮೆರಿಕ ಕೇಂದ್ರಿತ ಅಥವಾ ಅಲಿಪ್ತತೆ ಹೆಸರಿನ ಎಡಬಿಡಂಗಿ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿತ್ತು. ಮೋದಿ ಪ್ರಧಾನಮಂತ್ರಿಯಾದ ನಂತರ ಭಾರತ ಕೇಂದ್ರಿತ, ಭಾರತದ ಹಿತಕ್ಕೆ ಆದ್ಯತೆ ಕೊಡುವ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ. ಮೊದಲು ಭಾರತದ ಜೊತೆಗೆ ಕೇವಲ ರಷ್ಯಾ ಇದ್ದರೆ, ಪಾಕಿಸ್ತಾನದ ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರಗಳು ನಿಲ್ಲುತ್ತಿದ್ದವು. ಈಗ ಭಾರತದ ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರಗಳು, ಪಾಕಿಸ್ತಾನದ ಜೊತೆಗೆ ಕೆಲವೇ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ.
‘ಮೋದಿ ಸಿದ್ಧಾಂತ’ದ ವಿದೇಶ ನೀತಿ
ಕಳೆದ ಏಳು ವರ್ಷಗಳಿಂದ ಭಾರತದ ರಾಜತಾಂತ್ರಿಕತೆಯು ಸದೃಢ ಮತ್ತು ಸಮರ್ಥನೀಯವಾಗಿದ್ದು, ವಿಶಿಷ್ಟವಾದ ‘ಮೋದಿ ಸಿದ್ಧಾಂತ’ವನ್ನು ರೂಪಿಸಿದೆ. ಹೊಸ ಜಾಗತಿಕ ಸನ್ನಿವೇಶದಲ್ಲಿ ಭಾರತವು ಒಂದು ಮಹಾನ್ ಶಕ್ತಿಶಾಲಿ ದೇಶವಾಗಿ ಮೂಡಿ ಬರುವಲ್ಲಿ ಮೋದಿ ಅವರ ವಿಶಿಷ್ಟಮತ್ತು ಅನನ್ಯವಾದ ತಂತ್ರಗಾರಿಕೆ ಬಹುದೊಡ್ಡ ಪಾತ್ರ ವಹಿಸಿದೆ ಎಂದವರು ಚೀನಾದ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ಉಪಾಧ್ಯಕ್ಷ ರಾಂಗ್ ಯಿಂಗ್.
ಪ್ರಧಾನಿ ಮೋದಿ ರೀತಿ ನಾವೂ ದುಡಿಯೋಣ : ಸಿಎಂ ಬಸವರಾಜ ಬೊಮ್ಮಾಯಿ
ಹೌದು. 2014ರ ಲೋಕಸಭೆ ಚುನಾವಣೆಯ ಅಭೂತಪೂರ್ವ ಗೆಲುವಿನ ನಂತರ ದೇಶಕ್ಕಾಗಿ ಏನಾದರೂ ಮಾಡುವ ಉತ್ಕಟವಾದ ಅಭಿಲಾಷೆಯೊಂದಿಗೆ ಎನ್‌ಡಿಎ ಸರ್ಕಾರ ಕೈಗೊಂಡ ದೇಶದ ಅರ್ಥವ್ಯವಸ್ಥೆಯ ಪ್ರಾಚೀನ ಕೊಳೆಯನ್ನು ತೊಳೆಯುವ ಉಪಕ್ರಮಗಳು ಕೋಟ್ಯಂತರ ಜನರ ಜೀವನ, ಜೀವನ ಶೈಲಿ, ಸಾಂಸ್ಕೃತಿಕ, ಆರ್ಥಿಕ, ತಾಂತ್ರಿಕ, ವಿದೇಶಾಂಗ ನೀತಿಗಳಲ್ಲಿ ಬದಲಾವಣೆಗೆ ನಾಂದಿ ಹಾಡಿತು.
ಆಸಿಯಾನ್ ಮೂಲಕ ‘ಪೂರ್ವದೆಡೆಗೆ ಗಮನ’ ಎಂಬ ಭಾರತದ 2012ರ ನೀತಿಯನ್ನು ಮೋದಿ ಸರ್ಕಾರ ಇನ್ನಷ್ಟುಮುಂದಕ್ಕೆ ಕೊಂಡೊಯ್ದಿತು. ‘ಪೂರ್ವದೊಡನೆ ಸಕ್ರಿಯ ಸಹಭಾಗಿತ್ವ’ ಎಂದು ಆಸಿಯಾನ್ ಜೊತೆಗಿನ ತಮ್ಮ ಸಂವಾದದ 25ನೇ ವರ್ಷಾಚರಣೆಗೆ ಎಲ್ಲ ಹತ್ತು ಮಂದಿ ನಾಯಕರನ್ನು 69ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೋದಿ ಆಹ್ವಾನಿಸಿದರು. ಪರಸ್ಪರ ಸಂಬಂಧವನ್ನು ಇನ್ನಷ್ಟುಮುಂದಕ್ಕೆ ಕೊಂಡೊಯ್ಯುವ ಕುರಿತು ಭಾರತ ಮತ್ತು ಆಸಿಯಾನ್ ಬದ್ಧತೆಯನ್ನು ಸಾರಿದ ಸಂದರ್ಭವದು. ಆಗ್ನೇಯ ಏಷ್ಯಾ ಭೂಭಾಗದ ಹತ್ತು ದೇಶಗಳ ಭೌಗೋಳಿಕ- ರಾಜಕೀಯ-ಆರ್ಥಿಕ ಸಂಘಟನೆಯೇ ಆಸಿಯಾನ್. ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್ ಈ ಸಂಘಟನೆಯನ್ನು 1987ರಲ್ಲಿ ಸ್ಥಾಪಿಸಿದವು. ಆ ನಂತರ ಸದಸ್ಯತ್ವವನ್ನು ಬ್ರೂನೈ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ದೇಶಗಳಿಗೆ ವಿಸ್ತರಿಸಲಾಯಿತು.
ಸದಸ್ಯ ದೇಶಗಳ ಭೂಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಸ್ಥಿರತೆಯ ರಕ್ಷಣೆ, ವ್ಯಾಪಾರ- ಸಾಮಾಜಿಕ- ಸಾಂಸ್ಕೃತಿಕ ಅಭಿವೃದ್ಧಿ ಸಾಧನೆ ಈ ಸಂಘಟನೆಯ ಗುರಿಯಾಗಿದೆ. ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳ ಉದ್ದೇಶವಾಗಿದೆ.
ಭಾರತಕ್ಕೆ ‘ಭಯೋತ್ಪಾದನೆ ರವಾನೆ’ ಮಾಡುವ ಪಾಕಿಸ್ತಾನದ ಹುನ್ನಾರದ ವಿರುದ್ಧ ಆಸಿಯಾನ್ ಬೆಂಬಲ ಗಳಿಕೆಯ ಪ್ರಧಾನಿಯವರ ಗುರಿ ಈಡೇರಿತು. ‘ಗಡಿಯಾಚೆಯಿಂದ ಭಯೋತ್ಪಾದನೆ’ ವಿರುದ್ಧ ಆಸಿಯಾನ್ ದನಿ ಎತ್ತಿತು. ಭಯೋತ್ಪಾದಕರನ್ನು, ಭಯೋತ್ಪಾದನಾ ಜಾಲವನ್ನು, ಭಯೋತ್ಪಾದಕ ಗುಂಪುಗಳನ್ನು ಅಡಗಿಸುವಲ್ಲಿ ಆಸಿಯಾನ್ ದೇಶಗಳು ಮತ್ತು ಭಾರತದ ನಡುವೆ ಸಂಪೂರ್ಣ ಸಹಕಾರದ ಒಪ್ಪಂದ ಏರ್ಪಟ್ಟಿತು. ಭಯೋತ್ಪಾದನಾ ಕೃತ್ಯಗಳಿಗೆ ಯಾವ ಕಾರ್ಯಕಾರಣಗಳೂ ಸಮರ್ಥನೆ ಆಗಲಾರವು ಎಂದು ದೆಹಲಿ ಘೋಷಣೆ ಸಾರಿತು. 2019ನೇ ಸಾಲನ್ನು ಪ್ರವಾಸೋದ್ಯಮ ವರ್ಷವೆಂದು ಭಾರತ-ಆಸಿಯಾನ್ ದೇಶಗಳು ಆಚರಿಸಬೇಕು ಎಂದು ಪ್ರಧಾನಿ ಘೋಷಿಸಿದರು. ಭಾರತದ ಡಿಜಿಟಲ್ ಬಾಹುಬಲವನ್ನು ಆಸಿಯಾನ್ ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ವಿಸ್ತರಿಸುವುದಾಗಿ ಹೇಳಿದ್ದಾರೆ.
ಆಸಿಯಾನ್ ವಲಯದಲ್ಲಿ ತನ್ನ ಪ್ರಾಬಲ್ಯ ಪ್ರಶ್ನಾತೀತ ಎನ್ನುವ ಮಟ್ಟಿಗೆ ಚೀನಾ ಹಸ್ತಕ್ಷೇಪ ಮಾಡಿತ್ತು. ತಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನು ತನ್ನ ಪದತಲದಲ್ಲಿ ಶರಣಾಗಿಸಬೇಕು ಎನ್ನುವ ಮಟ್ಟಿಗೆ ಚೀನಾ ಬ್ಲ್ಯಾಕ್‌ಮೇಲ್ ಮಾಡತೊಡಗಿತ್ತು. ಜೊತೆಗೆ ಅಮೆರಿಕ ಸಹ ತನ್ನ ಬಾಹುಗಳನ್ನು ಚಾಚಿದೆ. ಈ ಎರಡು ದೊಡ್ಡಣ್ಣಗಳ ಅಬ್ಬರದ ವಿರುದ್ಧ ಸಮತೂಕವನ್ನು ಕಾಯುವ ಶಕ್ತಿಯಾಗಿ ಭಾರತ ಇರಬೇಕೆಂದು ಆಸಿಯಾನ್ ದೇಶಗಳು ಬಯಸಿದ್ದವು. ಐವತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದ ಆಸಿಯಾನ್ ವಲಯದಲ್ಲಿ ತಮ್ಮ ಆರ್ಥಿಕ ಮತ್ತು ರಾಜಕೀಯ ಛಾಪು ಮೂಡಿಸಲು ಅಮೆರಿಕ ಮತ್ತು ಚೀನಾ ಲಾಗಾಯಿತಿನಿಂದ ಪೈಪೋಟಿಯ ಮಧ್ಯೆ ಭಾರತ ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಕಂಡಿದ್ದು ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.
ಸೆ.26ರ ಮನ್ ಕಿ ಬಾತ್‌ಗೆ ನಿಮ್ಮ ಸಲಹೆ, ಸೂಚನೆ ಆಹ್ವಾನಿಸಿದ ಪಿಎಂ ಮೋದಿ!
ಮೋದಿ ವಿದೇಶಿ ಪ್ರವಾಸದಲ್ಲಿ ಭಾರತಕ್ಕೆ ಲಾಭ
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದ ವೇಳೆ ಅತ್ಯುನ್ನತ ಮಟ್ಟದ ಒಪ್ಪಂದಗಳು, ದ್ವಿಪಕ್ಷೀಯ ಮಾತುಕತೆಗಳು, ರಕ್ಷಣಾ ಒಪ್ಪಂದಗಳು ಹಾಗೂ ವಾಣಿಜ್ಯ ಒಪ್ಪಂದಗಳು ನೆರವೇರುತ್ತವೆ. ಮೋದಿಯವರು ತಮ್ಮ ಈ ಭೇಟಿಗಳಲ್ಲಿ 480ಕ್ಕೂ ಅಧಿಕ ಒಪ್ಪಂದಗಳಿಗೆ ಹಾಗೂ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಿದ್ದಾರೆ.
2015-16ರಲ್ಲಿ ಮೋದಿಯವರು ಅತಿ ಹೆಚ್ಚು (24) ದೇಶಗಳಿಗೆ ಭೇಟಿ ನೀಡಿದರು. ಈ ಅವಧಿಯಲ್ಲಿ ಅವರು ಅಮೆರಿಕ, ಜರ್ಮನಿ, ಕೆನಡಾ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ ದೇಶಗಳಿಗೆ ಹೋದರು. ಫ್ರಾನ್ಸ್‌ಗೆ ಎರಡು ಬಾರಿ ಭೇಟಿ ನೀಡಿದರಲ್ಲದೆ, 2015ರ ಏಪ್ರಿಲ್‌ನಲ್ಲಿ ನಡೆದ ಫ್ರಾನ್ಸ್ ಭೇಟಿಯ ವೇಳೆ, ಅಲ್ಲಿನ ಡಸಾಲ್ಟ್ ಕಂಪನಿಯಿಂದ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡರು. ತಮ್ಮ ಮೊದಲ ಅವಧಿಯಲ್ಲಿಯೂ ಅಕ್ಕಪಕ್ಕದ ದೇಶಗಳಿಗೇ ಮೊದಲ ಆದ್ಯತೆ ನೀಡಿದ್ದರು. ತಮ್ಮ ಮೊದಲ ಅವಧಿಯಲ್ಲಿ ಅವರು 92 ವಿದೇಶಗಳಿಗೆ ಭೇಟಿ ನೀಡಿ ಅಲ್ಲಿಗೆ ಭಾರತದ ಬಂದರುಗಳಿಂದ ಮುಕ್ತ ಸಾರಿಗೆ ಸಂಪರ್ಕ ಹಾಗೂ ರಫ್ತು ವಿಸ್ತರಿಸುವ ಕುರಿತು ಮಾತುಕತೆಗಳನ್ನು ಫಲಪ್ರದಗೊಳಿಸಿದ್ದಾರೆ.
ಮೋದಿಯವರ ಭೇಟಿಗಳು ಅವರ ವಿದೇಶಾಂಗ ನೀತಿಯ ಬಗ್ಗೆ ಒಳನೋಟಗಳನ್ನೂ ನೀಡುತ್ತವೆ. ಅವರು ಚೀನಾ ಹಾಗೂ ಅಮೆರಿಕಗಳಿಗೆ ಐದು ಬಾರಿ ಭೇಟಿ ನೀಡಿದ್ದಾರೆ. ಜರ್ಮನಿ, ನೇಪಾಳ, ರಷ್ಯಾ ಹಾಗೂ ಸಿಂಗಾಪುರಕ್ಕೆ ನಾಲ್ಕು ಬಾರಿ ಹೋಗಿ ಬಂದಿದ್ದಾರೆ. ಫ್ರಾನ್ಸ್ ಮತ್ತು ಜಪಾನ್‌ಗೆ ಮೂರು ಬಾರಿ ವಿಸಿಟ್ ಕೊಟ್ಟಿದ್ದಾರೆ. ಯುಎಇ, ದಕ್ಷಿಣ ಆಫ್ರಿಕಾ ಮುಂತಾದ ಹತ್ತು ದೇಶಗಳಿಗೆ ಎರಡು ಬಾರಿ ಭೇಟಿ ಕೊಟ್ಟಿದ್ದಾರೆ. ಪಾಕಿಸ್ತಾನವೂ ಸೇರಿದಂತೆ, ಅಕ್ಕಪಕ್ಕದ ದೇಶಗಳಿಗೆ 12 ಬಾರಿ ಭೇಟಿ ನೀಡಿ ಭಾರತ ವಿದೇಶಾಂಗ ನೀತಿ ಎಂತಹದ್ದು ಎಂದು ತಿಳಿಸುವ ಮೂಲಕ ಪ್ರಧಾನಿ ಮೋದಿ ವಿಶ್ವಗುರುವಾಗಿದ್ದಾರೆ. ಭಾರತದ ನಿಕಟ ಸಂಬಂಧಗಳು, ಪರಸ್ಪರ ಲಾಭಗಳನ್ನು ನೀಡುವ ಸಂದರ್ಭದಲ್ಲಿ ಭಾರತೀಯ ವಿದೇಶಾಂಗ ನೀತಿಯು ಹೆಚ್ಚು ಸಮರ್ಥನೀಯವಾಗಿವೆ. ವಿದೇಶದ ಕೆಲವೆಡೆ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಾಗ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಮಾಡುವ ವ್ಯವಸ್ಥೆ ಶ್ಲಾಘನೀಯ ಅನ್ನಿಸದೇ.
ನಮೋ ಆಡಳಿತದಲ್ಲಿ ಭಾರತದಲ್ಲಿ ಬದಲಾವಣೆ
ಲೋಕಸಭೆ ಚುನಾವಣೆಯ ನಂತರ ದೇಶದ ಶೇ.80ರಿಂದ 90ರಷ್ಟುಜನರಲ್ಲಿ ಸರ್ಕಾರಗಳು ಮಂಡಿಸುವ ಬಜೆಟ್‌ಗಳು, ತೆರಿಗೆ ನೀತಿ, ಬ್ಯಾಂಕಿಂಗ್ ವಹಿವಾಟು ಮಾಹಿತಿ, ಜಿಡಿಪಿ ಏರಿಳಿತ, ದೇಶವನ್ನು ಕಿತ್ತುತಿನ್ನುವ ಕಾಳಧನಿಕರ ಉಪಟಳ ಸೇರಿಸಂತೆ ಅನೇಕ ಸಾಲು ಸಾಲು ಸಮಸ್ಯೆಗಳು ಮೋದಿ ಎದುರು ಬೆಟ್ಟದಂತೆ ಕಂಡವು. ‘ವಿಷವನ್ನೇ ಕುಡಿದು, ಅಮೃತ ಸುಧೆ ಹರಿಸದೇ ವಿರಮಿಸುವುದಿಲ್ಲ’ ಎಂಬ ಸಂಕಲ್ಪ ಮಾತ್ರದಿಂದಲೇ ಬದಲಾವಣೆ ಸಾಧ್ಯವಾಯಿತು. ವಿಷಕಂಠನಾಗಿ ದೇಶದ ಅಭಿವೃದ್ಧಿಗೆ ತನ್ನನ್ನು ತಾನು ಸಮರ್ಪಿಸಿಕೊಂಡವರೇ ನರೇಂದ್ರ ಮೋದಿ.
ಸಿಎಎ, ತ್ರಿಬಲ್ ತಲಾಕ್, ಆರ್ಟಿಕಲ್ 370 ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮೊದಲಾದ ನೂರಾರು ಸುಧಾರಣೆಗಳನ್ನು ತರಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಪರಿಣಾಮಕಾರಿಯಾಗಿದೆ. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಕೇಂದ್ರದಿಂದ 100 ರು. ಯೋಜನೆಯನ್ನು ಕಳಿಸಿದರೆ ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತಿದ್ದುದು ಕೇವಲ 15 ರು. ಮಾತ್ರ ಎಂದು ಅವರೇ ಸಾರ್ವಜನಿಕವಾಗಿ ಹೇಳಿದ್ದರು. ಅಂದು ದೇಶದ ಉದ್ದಗಲಕ್ಕೆ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದಿದ್ದು ಕಾಂಗ್ರೆಸ್ ಮಾತ್ರ. ಹಾಗಾದರೆ ಭ್ರಷ್ಟಾಚಾರದ ಪಾಲುದಾರರು ಯಾರು? ತಿನ್ನುತ್ತಿದ್ದ ಕಳ್ಳರು ಯಾರು? ರಾಜೀವ್ ಗಾಂಧಿಯವರು ಬಹಿರಂಗಪಡಿಸಿರಲಿಲ್ಲ ಯಾಕೆ? ಇವೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡು ಈಗಿನ ಯುವಜನತೆ ಯೋಚಿಸಬೇಕು.
ಯಾರು ದಿ ಬೆಸ್ಟ್ ಪ್ರಧಾನಿ ಎಂದು ಚಿಂತಿಸಬೇಕು. ಪ್ರಧಾನಿ ನರೇಂದ್ರ ಮೋದಿ ‘ನಾ ಖಾವುಂಗಾ, ನಾ ಖಾನೇ ದೂಂಗಾ’ ಎನ್ನುವ ತತ್ವದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಈಗ ಕೇಂದ್ರದಿಂದ ಕಳುಹಿಸುವ ಪ್ರತಿ ರುಪಾಯಿ ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಯುಪಿಎ ಆಡಳಿತದಲ್ಲಿ ದಿನಕ್ಕೊಂದು ಹಗರಣಗಳು ಆಕಾಶ ಭೂಮಿ ಪಾತಾಳ ಎಲ್ಲೆಡೆಯೂ ಹಗರಣ ಬೆಂಕಿಯ ಉಂಡೆ ಜನರನ್ನು ಸುಡುತ್ತಿತ್ತು. ಆ ಗಾಯಕ್ಕೆ ಮುಲಾಮು ಹಚ್ಚಿದವರೇ ಮೋದಿ.
ಭರವಸೆ ಮೂಡಿಸಿದ ನಾಯಕತ್ವ
‘ಅಂತ್ಯೋದಯ’ ತತ್ವದ ಮೇಲೆ ನಂಬಿಕೆ ಇಟ್ಟು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ನೆರವಾಗಲು ಹಲವಾರು ಯೋಜನೆಗಳು ಭಾರತದ ಪ್ರತಿಯೊಬ್ಬರ ಮನೆ ಬಾಗಲಿಗೆ ತಲುಪಿವೆ. ಜಿಎಸ್‌ಟಿ, ಮೊಬೈಲ್, ಡಿಬಿಟಿ, ಆಧಾರ್-ಎಲ್‌ಪಿಜಿ, ಬಡವರಿಗಾಗಿ ಜನಧನ್ ಯೋಜನೆ, ಮುದ್ರಾ ಯೋಜನೆ, ಸ್ವಚ್ಛ ಭಾರತ್, ಸೌಭಾಗ್ಯ ಯೋಜನ, ಉಜ್ವಲ, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಅವಾಸ್ ಯೋಜನೆ. ರಾಷ್ಟ್ರೀಯ ಆರೋಗ್ಯ ಯೋಜನೆ ಜೊತೆಗೆ ಕೋವಿಡ್ ಸಂಕ್ರಮಣ ಕಾಲದಲ್ಲೂ ದೇಶದ ಎಲ್ಲಾ ನಾಗರಿಕರಿಗೂ ಉಚಿತ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸುವ ಮೂಲಕ ಕಳಪೆ ಆಡಳಿತ ಮತ್ತು ಬಡತನ ನಿರ್ಮೂಲನೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ದೃಢ ಸಂಕಲ್ಪ ನಮ್ಮ ಪ್ರಧಾನಿ ಮೋದಿಯವರದ್ದಾಗಿದೆ.
‘ಸ್ನೇಹಕ್ಕೆ ಬದ್ಧ ಸಮರಕ್ಕೂ ಸಿದ್ಧ’ ನಂಬಿಕೆಯಂತೆ ಸ್ನೇಹ ಹಸ್ತ ಚಾಚಿದರೆ ದುರುಪಯೋಗಪಡಿಸಿಕೊಂಡು ಭಯೋತ್ಪಾದನೆ ನಡೆಸಿದ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟೆ್ರೖಕ್, ಭಾರತದ ಜಾಗವನ್ನು ಅತಿಕ್ರಮಿಸಲು ಬಂದ ಚೀನಿ ಸೈನಿಕರನ್ನು ಹೆಡೆಮುರಿಕಟ್ಟುವಲ್ಲಿ ನಮ್ಮ ಸೈನಿಕರು ಮತ್ತು ಭಾರತದ ರಕ್ಷಣಾ ಸಾಮರ್ಥ್ಯವನ್ನು ವಿಶ್ವದ ಬೇರೆ ರಾಷ್ಟ್ರಗಳ ನಾಯಕರು ಬೆರಗುಗಣ್ಣಿನಲ್ಲಿ ನೋಡುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ.
ಆರ್ಥಿಕ ಪ್ರಗತಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಜಗತ್ತಿನಲ್ಲಿ ನಾಲ್ಕನೇ ಸ್ಥಾನ, ಜಿಡಿಪಿ ಬೆಳವಣಿಗೆಯಲ್ಲಿ ಬ್ರಿಟನ್, ಅಮೆರಿಕ ಮೊದಲಾದ ದೇಶಗಳನ್ನು ಹಿಂದಿಕ್ಕಿ ಆರ್ಥಿಕ ಶಕ್ತಿಯಾಗುವತ್ತ ಭಾರತ ಹೊರಹೊಮ್ಮುತ್ತಿದೆ. ವಿಶ್ವದ ಪ್ರಭಾವಶಾಲಿ ನಂಬರ್1 ನಾಯಕ ನರೇಂದ್ರ ಮೋದಿ, ವಿಶ್ವದ ದೇಶಗಳ ಮೇಲೆ ಪ್ರಭಾವ ಬೀರುವ ರಾಷ್ಟ್ರವಾಗಿ ಭಾರತವನ್ನು ತಯಾರು ಮಾಡಿದ್ದಾರೆ.
2024ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಸಂಸತ್ತಿಗೆ ಹೊಸ ರೂಪ ನೀಡುವಲ್ಲಿ ಮೋದಿ ಅಚಲವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಂಕೀರ್ಣ ಸ್ವರೂಪದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಸೇನಾಪಡೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಹೈಟೆಕ್ ಸೇನೆಯನ್ನಾಗಿ ಮಾಡಲು 9 ಲಕ್ಷ ಕೋಟಿ ರು. ಖರ್ಚುಮಾಡಲು ಮುಂದಾಗಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ)ಯಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದು ಲಿಂಗ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2025ರ ವೇಳೆಗೆ ದೇಶದಲ್ಲಿ ಉತ್ಪಾದಿಸಿದ ಶೇ.35 ಸಾವಿರ ಕೋಟಿಯಷ್ಟುಮೌಲ್ಯದ ರಕ್ಷಣಾ ಸಾಮಗ್ರಿಗಳ ರಫ್ತು ಮಾಡುವ ಕನಸನ್ನು ಹೊಂದಿದ್ದು ಲಖನೌನಲ್ಲಿ 2018ರಲ್ಲಿ ನಡೆದ ‘ಡಿಫೆನ್ಸ್ ಎಕ್ಸ್‌ಪೋ?’ದಲ್ಲಿ ಪ್ರಧಾನಿ ಭಾರತದ ಈ ಕನಸನ್ನು ನನಸುಮಾಡುವಲ್ಲಿ ಒಂದು ಬೃಹತ್ ಹೆಜ್ಜೆಯನ್ನಿಟ್ಟಿದ್ದಾರೆ.
ಸಾಂಸ್ಕೃತಿಕ ಭಾರತಕ್ಕೆ ಹೊಸ ರೂಪ ಕೊಟ್ಟನಮೋ
ಬೆಟ್ಟದಷ್ಟುಎತ್ತರದ ನಿರೀಕ್ಷೆಗಳನ್ನು ಸೃಷ್ಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕ್ಷೇತ್ರಗಳಲ್ಲಿ ಅಸಾಧಾರಣ ಹೆಜ್ಜೆಗಳನ್ನಿಡುತ್ತಾ ಬಂದಿದ್ದಾರೆ. ಅದರ ಜೊತೆಗೆ ‘ಸಾಂಸ್ಕೃತಿಕ ಭಾರತ’ದ ವಿಶಿಷ್ಟತೆಗಳನ್ನು ವಿಶ್ವಕ್ಕೆ ಸಾರಿದ್ದಾರೆ. ಭಾರತದ ಯೋಗದ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ. ಗಂಗಾ ಶುದ್ಧೀಕರಣ, ಸಬರಮತಿ ಆಶ್ರಮದ ಅಭಿವೃದ್ಧಿ, ಏಕತಾ ಪ್ರತಿಮೆ ನಿರ್ಮಾಣದ ಮಹತ್ವ, ತನ್ನ ಸಂಕೀರ್ಣವಾದ ಕೆತ್ತಿದ ದೇವಾಲಯಗಳು ಮತ್ತು ಕಲ್ಲು ಕತ್ತರಿಸಿದ ಗುಹೆಗಳಿಗೆ ಹೆಸರುವಾಸಿಯಾಗಿರುವ ಮಾಮಲ್ಲಾಪುರಂ ಅಥವಾ ಮಹಾಬಲಿಪುರಂ ಪ್ರಸಿದ್ಧತೆಯನ್ನು ಜಗತ್ತಿನ ನಾನಾ ದೇಶಗಳಿಗೆ ತಿಳಿಸಿಕೊಟ್ಟಿದ್ದಾರೆ.
ಭಾರತ ಎಂದರೆ ಕೇವಲ ತಾಜ್‌ಮಹಲ್ ಅಲ್ಲ. ಸಾಂಸ್ಕೃತಿಕತೆಯ ತೊಟ್ಟಿಲು. ಭಾರತದ ಉದ್ದಗಲದಲ್ಲಿ ಸಾಂಸ್ಕೃತಿಕತೆಯ ವೈಭವವನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ ಮೋದಿ. ವಿದೇಶಿಗರು ನಾಯಕರು ಭಾರತಕ್ಕೆ ಬಂದರೆ ಅಥವಾ ಪ್ರಧಾನಿಯೇ ವಿದೇಶಿ ಪ್ರವಾಸಕ್ಕೆ ಹೋದರೆ ಭಗವದ್ಗೀತೆಯ ಪ್ರತಿ, ದೇಶದ ಅಪೂರ್ವ ಕೆತ್ತನೆ ಕೆಲಸದ ಮೂರ್ತಿಗಳು ಮುಂತಾದವನ್ನು ತಾವು ಭೇಟಿ ಮಾಡಿದ ದೇಶದ ಮುಖಂಡರಿಗೆ ನೀಡುತ್ತಾರೆ. ಆಧ್ಯಾತ್ಮಿಕ ಸಂತರಾಗಿ, ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ‘ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ತತ್ವದ ಅಡಿ ಜಾತಿ, ಧರ್ಮ, ಕುಲ-ಗೋತ್ರಗಳನ್ನು ನೋಡದೇ ಸರ್ವರು ಭಾರತೀಯರೇ ಎಂಬ ನಂಬಿಕೆಯಡಿ ಆಳ್ವಿಕೆ ನಡೆಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ನಿರಾಶಾವಾದಿಗಳು, ನಕಾರಾತ್ಮಕವಾದಿಗಳು ಸರ್ಕಾರದ ಅಭಿವೃದ್ಧಿಬಗ್ಗೆ ಕುಟುಕಬಹುದು. ಟೀಕಿಸುವ ಎಲ್ಲರಿಗೂ ಕಾಲವೇ ಉತ್ತರಕೊಡಲಿದೆ.
ಹೊಸ ಸುಧಾರಣೆಗೆ ನಾಂದಿ
ಪ್ರಧಾನಿಯಾಗಿ ಹೊಸತರಲ್ಲಿ ‘ಚಾಯ್‌ವಾಲಾ’ ಮೋದಿ ಏನು ಮಾಡಬಹುದು ಎಂಬ ಕುರಿತು ಅನೇಕ ಪ್ರಶ್ನೆ, ವಾದಗಳು ಎದ್ದಿದ್ದವು. ಯುಪಿಎ ಅವಧಿಯಲ್ಲಿ ಪಾಲಿಸಿ ಪ್ಯಾರಾಲಿಸಿಸ್‌ನಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂದಿನ ಪ್ರಧಾನಿಗೆ ಸಾಧ್ಯವಾಗುತ್ತಿರಲಿಲ್ಲ. ಈಗ ಹಿಂದಿನ ಮತ್ತು ಹೊಸ ಯೋಜನೆಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಸುಧಾರಣೆಗೆ ನಾಂದಿ ಹಾಡಿದ್ದಾರೆ ಮೋದಿ.
ಮೋದಿ ಪ್ರಧಾನಮಂತ್ರಿಯಾದ ನಂತರ ಭಾರತ ಕೇಂದ್ರಿತ, ಭಾರತದ ಹಿತಕ್ಕೆ ಆದ್ಯತೆ ಕೊಡುವ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ. ಮೊದಲು ಭಾರತದ ಜೊತೆಗೆ ಕೇವಲ ರಷ್ಯಾ ಇದ್ದರೆ, ಪಾಕಿಸ್ತಾನದ ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರಗಳು ನಿಲ್ಲುತ್ತಿದ್ದವು. ಈಗ ಭಾರತದ ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರಗಳು, ಪಾಕಿಸ್ತಾನದ ಜೊತೆಗೆ ಕೆಲವೇ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಭಾರತ ಎಂದರೆ ಕೇವಲ ತಾಜ್‌ಮಹಲ್ ಅಲ್ಲ. ಸಾಂಸ್ಕೃತಿಕತೆಯ ತೊಟ್ಟಿಲು. ಗಂಗಾ ಶುದ್ಧೀಕರಣ, ಸಬರಮತಿ ಆಶ್ರಮದ ಅಭಿವೃದ್ಧಿ, ಏಕತಾ ಪ್ರತಿಮೆ ನಿರ್ಮಾಣದ ಮಹತ್ವ, ತನ್ನ ಸಂಕೀರ್ಣವಾದ ಕೆತ್ತಿದ ದೇವಾಲಯಗಳು ಮತ್ತು ಕಲ್ಲು ಕತ್ತರಿಸಿದ ಗುಹೆಗಳಿಗೆ ಹೆಸರುವಾಸಿಯಾಗಿರುವ ಮಾಮಲ್ಲಾಪುರಂ ಅಥವಾ ಮಹಾಬಲಿಪುರಂ ಪ್ರಸಿದ್ಧತೆಯನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ ಮೋದಿ.
‘ಸ್ನೇಹಕ್ಕೆ ಬದ್ಧ ಸಮರಕ್ಕೂ ಸಿದ್ಧ’ ನಂಬಿಕೆಯಂತೆ ಸ್ನೇಹ ಹಸ್ತ ಚಾಚಿದರೆ ದುರುಪಯೋಗಪಡಿಸಿಕೊಂಡು ಭಯೋತ್ಪಾದನೆ ನಡೆಸಿದ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟೆ್ರೖಕ್, ಭಾರತದ ಜಾಗವನ್ನು ಅತಿಕ್ರಮಿಸಲು ಬಂದ ಚೀನಿ ಸೈನಿಕರನ್ನು ಹೆಡೆಮುರಿಕಟ್ಟುವಲ್ಲಿ ನಮ್ಮ ಸೇನೆಯ ಸಾಮರ್ಥ್ಯವನ್ನು ಜಾಗತಿಕ ನಾಯಕರು ಬೆರಗುಗಣ್ಣಿನಲ್ಲಿ ನೋಡುವಂತೆ ಮಾಡಿದವರು ಪ್ರಧಾನಿ ಮೋದಿ.