2 3 crore litres synthetic milk made with detergent powder: ದುಷ್ಕರ್ಮಿಗಳು ಡಿಟರ್ಜೆಂಟ್ ಪೌಡರ್‌ನಿಂದ ತಯಾರಿಸಲಾದ ಹಾಲಿನ ಪುಡಿಯಿಂದ ಸುಮಾರು 23,04,070 ಲೀ. ಸಿಂಥೆಟಿಕ್ ಹಾಲನ್ನು ತಯಾರಿಸಿ ವಿತರಿಸಿದ ಆಘಾತಕಾರಿ ಮಾಹಿತಿ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

  • ಶುದ್ಧ ಹಾಲಿನಲ್ಲಿ ನಕಲಿ ಹಾಲು ಮಿಕ್ಸ್‌ ಮಾಡಿ ಮಾರುವ ದಂಧೆ
  • ಧಾರಾಶಿವದ ಭೂಮ್ ತಾಲೂಕಲ್ಲಿ ದಿಗ್ಭ್ರಮೆ ಮೂಡಿಸಿದ ಹಗರಣ
  • ಡಿಟರ್ಜೆಂಟ್ ಪೌಡರ್, ತಾಳೆ ಎಣ್ಣೆ ಬಳಸಿ ಹಾಲಿನ ಪುಡಿ ತಯಾರಿ
  • 9.22 ಕೋಟಿ ರು. ಮೌಲ್ಯದ 23 ಲಕ್ಷ ಲೀ. ನಕಲಿ ಹಾಲು ಮಾರಾಟ
  • ಡಿಟರ್ಜೆಂಟ್‌ ಪುಡಿ ಹಾಲಿನಿಂದ ಜೀವಕ್ಕೇ ಕುತ್ತು ಬರುವ ಸಾಧ್ಯತೆ!

ಮುಂಬೈ (ಜು.15): ಆಹಾರೋತ್ಪನ್ನಗಳ ಶುದ್ಧತೆ ತೀವ್ರ ಸವಾಲಿನದಾಗಿರುವ ದಿನಗಳಲ್ಲಿ, ದುಷ್ಕರ್ಮಿಗಳು ಡಿಟರ್ಜೆಂಟ್ ಪೌಡರ್‌ನಿಂದ ತಯಾರಿಸಲಾದ ಹಾಲಿನ ಪುಡಿಯಿಂದ ಸುಮಾರು 23,04,070 ಲೀ. ಸಿಂಥೆಟಿಕ್ (ಕೃತಕ) ಹಾಲನ್ನು ತಯಾರಿಸಿ ವಿತರಿಸಿದ ಆಘಾತಕಾರಿ ಮಾಹಿತಿ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಕಳೆದ 6 ತಿಂಗಳಲ್ಲಿ ಸುಮಾರು 2,30,470 ಕೆಜಿ ಕಳಪೆ ಹಾಲಿನ ಪೌಡರ್ ಅನ್ನು ಕಲಬೆರಕೆಗೆ ಬಳಸಿದ್ದಾರೆ. ಈ ಭಾರೀ ಪ್ರಮಾಣದ ಹಾಲಿನ ಪೌಡರ್ ಬಳಸಿ ಸುಮಾರು 23,04,070 ಲೀ. ಕೃತಕ ಹಾಲನ್ನು ತಯಾರಿಸಲಾಗಿದೆ. ಕೃತಕ ಹಾಲನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಲು ಮತ್ತು ಅಗತ್ಯ ಕೊಬ್ಬಿನ ಪ್ರಮಾಣವನ್ನು ಕಾಯ್ದುಕೊಳ್ಳಲು ಆರೋಪಿಗಳು ಡಿಟರ್ಜೆಂಟ್ ಪೌಡರ್, ತಾಳೆ ಎಣ್ಣೆ ಮತ್ತು ಅತ್ಯಂತ ಕಳಪೆ ರಾಸಾಯನಿಕ ಪೌಡರ್ ಬಳಸುತ್ತಿದ್ದರೆಂದು ತಿಳಿದುಬಂದಿದೆ. ಈ ಹಾಲಿನ ಮೌಲ್ಯ ಸುಮಾರು 9.22 ಕೋಟಿ ರು. ಎಂದು ಅಂದಾಜಿಸಲಾಗಿದೆ.

2.3 ಕೋಟಿ ಲೀ. ಕಲಬೆರಕೆ ಹಾಲು ಪೂರೈಕೆ: 

ಆರೋಪಿಗಳು ಪ್ರತಿ 100 ಲೀ. ಶುದ್ಧ ಹಾಲಿಗೆ 10 ಲೀ. ಕೃತಕ ಹಾಲನ್ನು ಮಿಶ್ರಣ ಮಾಡುತ್ತಿದ್ದರು. ಅಂದರೆ ಶೇ.10ರಷ್ಟು ಕಲಬೆರಕೆ ಮಾಡಲಾಗುತ್ತಿತ್ತು. ಶೇ.10ರಷ್ಟು ಅನುಪಾತದ ಆಧಾರದ ಮೇಲೆ, ಭೂಮ್ ಪ್ರದೇಶದ ಹಾಲು ಸಂಗ್ರಹ ಕೇಂದ್ರಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಒಟ್ಟು 2.3 ಕೋಟಿ ಲೀ.ಗಿಂತ ಹೆಚ್ಚು ಕಲಬೆರಕೆ ಹಾಲು ಸರಬರಾಜು ಮಾಡಲಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.

ಮೇವು ಮಾರಾಟದ ಸೋಗಿನಲ್ಲಿ ಅಕ್ರಮ:

‘ದಾಳಿಯಲ್ಲಿ 61 ಚೀಲಗಳ ಕಲಬೆರಕೆ ಹಾಲಿನ ಪೌಡರ್ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಾಳಾಸಾಹೇಬ್ ಗೋಡ್ಗೆ ಎಂಬಾತ ಭೂಮ್ ಪ್ರದೇಶದ ಹಲವು ಡೈರಿ ಘಟಕಗಳಿಗೆ ಕಲಬೆರಕೆ ಹಾಲಿನ ಪೌಡರ್ ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹಲವು ಹಾಲು ಸಂಗ್ರಹ ಕೇಂದ್ರಗಳು ಈ ಹಗರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಆದರೆ ಸಾವಿರಾರು ಲೀ. ಕಲಬೆರಕೆ ಹಾಲನ್ನು ಖರೀದಿಸಿದವರನ್ನು ಇನ್ನೂ ಗುರುತಿಸಲು ಅಥವಾ ಬಂಧಿಸಲು ಸಾಧ್ಯವಾಗಿಲ್ಲ. ಈ ಹಗರಣವನ್ನು ದನಗಳಿಗೆ ಮೇವು ಮಾರಾಟ ಮಾಡುವ ಸೋಗಿನಲ್ಲಿ ನಡೆಸಲಾಗುತ್ತಿತ್ತು. ಭೂಮ್ ತಾಲೂಕು ಪ್ರತಿದಿನ ಲಕ್ಷಾಂತರ ಲೀ. ಹಾಲು ರಫ್ತು ಮಾಡುತ್ತದೆ ಮತ್ತು 70ರಿಂದ 80 ಟನ್ ಖೋವಾ ಉತ್ಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವು ಅತ್ಯಂತ ಮಹತ್ವದ್ದಾಗಿದೆ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಗಣೇಶ್ ಕಣಗುಡೆ ತಿಳಿಸಿದ್ದಾರೆ.

ಆರೋಪಿಗಳಿಗಾಗಿ ಶೋಧ: 

ಈ ಅತ್ಯಂತ ಸೂಕ್ಷ್ಮ ಪ್ರಕರಣದಲ್ಲಿ ಪೊಲೀಸರು 7 ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣ ದಾಖಲಾಗಿ 8 ದಿನಗಳು ಕಳೆದರೂ ಎಲ್ಲಾ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ವೈದ್ಯರಿಂದ ಗಂಭೀರ ಎಚ್ಚರಿಕೆ:

ಡಿಟರ್ಜೆಂಟ್ ಪುಡಿ ಮತ್ತು ತಾಳೆ ಎಣ್ಣೆಯನ್ನು ಒಳಗೊಂಡ ಈ ರಾಸಾಯನಿಕ ಮಿಶ್ರಿತ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಯಕೃತ್ತು, ಮೂತ್ರಪಿಂಡ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಪೂರ್ಣ ಹಾನಿಯಾಗಬಹುದು. ಇದು ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ವೈದ್ಯಕೀಯ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.