1971ರಲ್ಲಿ ಪಾಕಿಸ್ತಾನದ ಆಕ್ರಮಣವನ್ನು ತಡೆಯಲು ಇಂದಿರಾ ಗಾಂಧಿ ಅವರು ಅಮೆರಿಕ ಅಧ್ಯಕ್ಷ ನಿಕ್ಸನ್‌ಗೆ ಬರೆದ ಪತ್ರ ಬಹಿರಂಗವಾಗಿದೆ. ಪ್ರಿಯಾಂಕಾ ಗಾಂಧಿ ಈ ಪತ್ರವನ್ನು ಸಂಸತ್ತಿನಲ್ಲಿ ಉಲ್ಲೇಖಿಸಿದ್ದಾರೆ.
ನವದೆಹಲಿ: ಪಹಲ್ಲಾಂ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂದೂರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಡೆದಿದ್ದಾರೆ ಎನ್ನಲಾದ ವಿಚಾರವಾಗಿ ಸಂಸತ್‌ನಲ್ಲಿ ಗದ್ದಲ ನಡೆಯುತ್ತಿರುವ ಹೊತ್ತಿನಲ್ಲಿಯೇ, 1971ರಲ್ಲಿ 'ಪಾಕಿಸ್ತಾನದ ಅನಿಯಂತ್ರಿತ ಆಕ್ರಮಣವನ್ನು ಅಮೆರಿಕದ ಪ್ರಭಾವದಿಂದ ನಿಲ್ಲಿಸಲು' ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಆಗ್ರಹಿಸಿರುವ ಪತ್ರ ಬಹಿರಂಗವಾಗಿದೆ. ಈ ಪತ್ರವು ಅಮೆರಿಕದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ನಲ್ಲಿಯೂ ಲಭ್ಯವಾಗಿದೆ. ಈ ಪತ್ರವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಹ ಮಂಗಳವಾರ ಸಂಸತ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ರಿಚರ್ಡ್ ನಿಕ್ಸನ್‌ಗೆ ಬರೆದ ಪತ್ರದಲ್ಲಿ 'ಪಾಕಿಸ್ತಾನದ ಅನಿಯಂತ್ರಿತ ದಾಳಿಯು ಭಾರತದ ಸಾರ್ವಭೌಮತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಪಾಕಿಸ್ತಾನವು ಪೂರ್ವ ಬೆಂಗಾಲ್‌ನಲ್ಲಿ (ಇಂದಿನ ಬಾಂಗ್ಲಾದೇಶ) ನಡೆಸುತ್ತಿರುವ ವಸಾಹತುಶಾಹಿ ಮತ್ತು ಹಿಂಸಾತ್ಮಕ ಆಡಳಿತದಿಂದಾಗಿ ಕೇವಲ ಪೂರ್ವ ಬಂಗಾಳಕ್ಕೆ ಮಾತ್ರವಲ್ಲದೇ ಭಾರತ ಸೇರಿ ದಕ್ಷಿಣ ಏಷ್ಯಾಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಸಾರ್ವಭೌಮತೆ ಮತ್ತು ರಕ್ಷಣೆಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ನಾವು ಯುದ್ಧವನ್ನು ಆರಂಭಿಸಿದ್ದೇವೆ.
ಅಮೆರಿಕ ಅಧ್ಯಕ್ಷ ನಿಕ್ಸನ್ ನಿಮ್ಮ ಪ್ರಭಾವನ್ನು ಬಳಸಿ ಪಾಕಿಸ್ತಾನಕ್ಕೆ ತನ್ನ ಆಕ್ರಮಣವನ್ನು ನಿಲ್ಲಿಸಲು ತಾಕೀತು ಮಾಡಬೇಕು ಎಂದು ಭಾರತದ ಜನತೆ ಮತ್ತು ಸರ್ಕಾರ ಮನವಿ ಮಾಡುತ್ತದೆ ಎಂದು ಮನವಿ ಮಾಡಿರುವ ಪತ್ರದಲ್ಲಿ ಉಲ್ಲೇಖವಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 1971ರಲ್ಲಿ ನಿಕ್ಸನ್ ಅವರಿಗೆ ಇಂದಿರಾ ಗಾಂಧಿ ಬರೆದ ಪತ್ರವನ್ನು ಉಲ್ಲೇಖಿಸಿ ಪಾಕಿಸ್ತಾನದ ವಿಭಜನೆಗೆ ಇಂದಿರಾ ಅವರ ರಾಜತಾಂತ್ರಿಕ ತಂತ್ರದ ಬಗ್ಗೆ ಕೊಂಡಾಡಿದರು.
