Mumbai cyclist accident : ಮಹಾರಾಷ್ಟ್ರ ಮುಂಬೈನಲ್ಲಿ ಫಿಟ್ನೆಸ್‌ಗಾಗಿ ಸೈಕಲ್ ತುಳಿಯುತ್ತಿದ್ದ ಉದ್ಯಮಿಯೊಬ್ಬರು ಹಿಂಬದಿಯಿಂದ ವೇಗವಾಗಿ ಬಂದ ಕಾರಿಗೆ ಬಲಿಯಾಗಿದ್ದಾರೆ. ವಿಚಿತ್ರ ಎಂದರೆ ಅವರು ಸೈಕಲ್ ಖರೀದಿ ಮಾಡಿ ರೈಡ್ ಹೊರಟ ಮೊದಲ ದಿನವೇ ಈ ದುರಂತ ಸಂಭವಿಸಿದ್ದು, ಮೊದಲ ರೈಡ್ ಲಾಸ್ಟ್ ರೈಡ್ ಆಗಿದೆ.
ಉದ್ಯಮಿಯ ಮೊದಲ ಸೈಕಲ್ ರೈಡ್ ಆಯ್ತು ಲಾಸ್ಟ್ ರೈಡ್
ಮುಂಬೈ: ಅವರೊಬ್ಬರು 42 ವರ್ಷದ ಉದ್ಯಮಿ. ಬದುಕಿನ ಬ್ಯುಸಿ ಶೆಡ್ಯೂಲ್ ನಡುವೆ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ ಎಂದು ಭಾವಿಸಿದ ಅವರು ಕನಿಷ್ಠ ಸೈಕಲ್ ತುಳಿಯುವುದರಿಂದಲಾದರೂ ದೇಹದ ಫಿಟ್‌ನೆಸ್ ನಿರ್ವಹಣೆ ಮಾಡೋಣ ಅಂತ ಇತ್ತೀಚೆಗೆ ಸೈಕಲ್ ಖರೀದಿಸಿದ್ದರು. ಆದರೆ ವೇಗವಾಗಿ ಬಂದ ಕಾರೊಂದು ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಚಿತ್ರ ಎಂದರೆ ಅವರು ಸೈಕಲ್ ಖರೀದಿ ಮಾಡಿದ ಮೊದಲ ದಿನವೇ ಈ ದುರಂತ ಸಂಭವಿಸಿದೆ.
ಫಿಟ್‌ನೆಸ್‌ಗಾಗಿ ಸೈಕಲ್ ಖರೀದಿಸಿ ಓಡ್ಸಿತ್ತಿದ್ದಾಗ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಕಾರು
ಹೌದು ಮಹಾರಾಷ್ಟ್ರ ಮುಂಬೈನಲ್ಲಿ ಫಿಟ್ನೆಸ್‌ಗಾಗಿ ಸೈಕಲ್ ತುಳಿಯುತ್ತಿದ್ದ ಉದ್ಯಮಿಯೊಬ್ಬರು ಹಿಂಬದಿಯಿಂದ ವೇಗವಾಗಿ ಬಂದ ಕಾರಿಗೆ ಬಲಿಯಾಗಿದ್ದಾರೆ. ಮುಂಬೈ ನಗರದ ಕಲ್ಯಾಣ್‌ನ ರಿಂಗ್ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, 17 ವರ್ಷದ ತರುಣ ಅತೀಯಾದ ವೇಗದಿಂದ ಕಾರು ಚಲಾಯಿಸುತ್ತಿದ್ದು ಮುಂದೆ ಸೈಕಲ್‌ನಲ್ಲಿ ಬದಿಯಲ್ಲಿ ಹೋಗುತ್ತಿದ್ದ ಉದ್ಯಮಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಉದ್ಯಮಿ ದೂರ ಹಾರಿ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಆತ ಪರಾರಿಯಾಗಿದ್ದು, ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕಾರಿನ ಮಾಲಕಿಯಾಗಿದ್ದ ಬಾಲಕನ ತಾಯಿಯನ್ನು ಕೂಡ ಸಹ ಆರೋಪಿ ಎಂದು ಪ್ರಕರಣ ದಾಖಲಿಸಲಾಗಿದೆ. ಕಾರನ್ನು ರಸ್ತೆಗಿಳಿಸುವ ಮೊದಲು ಆತ ತಾಯಿಯ ಅನುಮತಿ ಪಡೆದೇ ವಾಹನ ಚಾಲನೆ ಮಾಡಿದ್ದರಿಂದ ತಾಯಿಯ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಆರೋಪಿ ಬಾಲಕನ ತಂದೆ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇತರ ಗಂಭೀರ, ಜಾಮೀನು ರಹಿತ ಅಪರಾಧಗಳ ಜೊತೆಗೆ, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಪಘಾತದ ಬಳಿಕ ಇದೊಂದು ಸಣ್ಣ ಅಪಘಾತ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಬಾಲಕ
ಅಪಘಾತದ ನಂತರ ಈ ಬಾಲಕ ಇದೊಂದು ಸಣ್ಣ ಅಪಘಾತ ಎಂದು ಉಲ್ಲೇಖಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದರ ಬಗ್ಗೆ ತಂದೆಯ ಪ್ರತಿಕ್ರಿಯೆಯ ಬಗ್ಗೆ ಕಳವಳ ಆಗ್ತಿದೆ ಎಂದು ಬರೆದುಕೊಂಡಿದ್ದ. ನಂತರ ಆ ಪೋಸ್ಟ್ ಅನ್ನು ಆತ ಡಿಲೀಟ್ ಮಾಡಿದ್ದ ಎಂದು ವರದಿಯಾಗಿದೆ.. ಇತ್ತ ಮೃತರಾದ ಉದ್ಯಮಿಯನ್ನು ಶ್ರೀನಿವಾಸ್ ತಂಡ್ಲೆ ಎಂದು ಗುರುತಿಸಲಾಗಿದೆ. ಅವರು ಕಲ್ಯಾಣದಲ್ಲಿ ಹಲವು ಬಟ್ಟೆ ಶಾಪ್‌ಗಳನ್ನು ಹೊಂದಿದ್ದಾರೆ. ಅವರು ಒಂದು ದಿನ ಮೊದಲು ಸೈಕಲ್ ಖರೀದಿಸಿದ್ದರು. ಹಾಗೂ ಅಪಘಾತ ನಡೆದ ದಿನ ಆ ಸೈಕಲ್‌ನಲ್ಲಿ ಅವರ ಮೊದಲ ದಿನದ ಪಯಣವಾಗಿತ್ತು ಎಂದು ಅವರ ಸೋದರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಬ್ಬರು ಹೆಂಡಿರಿದ್ದರೂ ಪರಸ್ತ್ರೀ ಮೇಲೆ ಕಣ್ಣು : ಕಾಲುವೆಯಲ್ಲಿ ಮೂಟೆಯಲ್ಲಿ ಪತ್ತೆಯಾದ ಮುನ್ನಾ
ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ವಿಡಿಯೋದಲ್ಲಿ ಕಾರು ವೇಗವಾಗಿ ಬಂದು ರಸ್ತೆಯ ಪಕ್ಕದಲ್ಲಿ ಸಾಗುತ್ತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದನ್ನು ಕಾಣಬಹುದು. ಅಪಘಾತದ ರಭಸಕ್ಕೆ ಸೈಕಲ್ ಜೊತೆ ಶ್ರೀನಿವಾಸ್ ಅವರು ಕೂಡ ದೂರ ಹಾರಿ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು..
ಒಟ್ಟಿನಲ್ಲಿ ಫಿಟ್ & ಫೈನ್ ಆಗ್ಬೇಕು ಎಂಬ ಆಸೆಯಿಂದ ಸೈಕಲ್ ಖರೀದಿಸಿದ ಉದ್ಯಮಿಯ ಮೊದಲ ಸೈಕಲ್ ರೈಡ್ ಬದುಕಿನ ಕೊನೆಯ ರೈಡ್ ಆಗಿದ್ದು ಮಾತ್ರ ವಿಪರ್ಯಾಸವೇ ಸರಿ. ಇತ್ತ ಬಾಲಕನಿಗೆ ಕಾರು ನೀಡಿದ ಪೋಷಕರಿಗೆ ಕಠಿಣ ಶಿಕ್ಷೆಯಾಗಬೇಕಿದೆ.
ಇದನ್ನೂ ಓದಿ: ಮನೆ ಕೆಲಸದಾಕೆಯನ್ನು ಸ್ನೇಹಿತೆ ಮಾಡ್ಕೊಂಡಿದ್ದೆ ತಪ್ಪಾಯ್ತು: ಸಾಲ ವಾಪಸ್ ಕೇಳಿದ್ದಕ್ಕೆ ಮನೆಯೊಡತಿ ಕೊಲೆ


