ರಾಯ್‌ಪುರ(ಮಾ.23): ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ಶನಿವಾರ ರಾತ್ರಿ ನಡೆದ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್‌ ವೇಳೆ 17 ಯೋಧರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಇದೇ ವೇಳೆ ಐವರು ನಕ್ಸಲರು ಕೂಡಾ ಹತರಾಗಿರುವ ಶಂಕೆ ಇದೆ.

ಸುಕ್ಮಾ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ವೇಳೆ ವೇಳೆ ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಹಾಗೂ ಕ್ರೋಬಾ ಸೇರಿದಂತೆ ಸುಮಾರು 600 ಸಿಬ್ಬಂದಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆಯೇ, ಮಿನ್ಪಾ ಗ್ರಾಮದಲ್ಲಿರುವ ಕಾಡು ಪ್ರದೇಶಗಳಲ್ಲಿ ಶಸ್ತ್ರಸಜ್ಜಿತವಾಗಿ ಅಡಗಿದ್ದ ಸುಮಾರು 250ಕ್ಕೂ ಹೆಚ್ಚು ಮಾವೋವಾದಿ ಉಗ್ರರು, ರಕ್ಷಣಾ ಪಡೆಗಳ ಮೇಲೆಯೇ ಗುಂಡಿನ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಸುಮಾರು ಐವರು ನಕ್ಸಲರನ್ನು ಸದೆಬಡಿದಿದ್ದಾರೆ. ಆದಾಗ್ಯೂ, ಸುಮಾರು ಎರಡೂವರೆ ಗಂಟೆ ನಡೆದ ಈ ಗುಂಡಿನ ಕಾಳಗದಲ್ಲಿ 15 ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡರು. ಆದರೆ, ಆ ನಂತರ 17 ಭದ್ರತಾ ಸಿಬ್ಬಂದಿ ಕಾಣೆಯಾಗಿರುವುದು ಗೊತ್ತಾಗಿದೆ. ಹೀಗಾಗಿ, ಭಾನುವಾರ ಬೆಳಗ್ಗೆಯಿಂದಲೇ ಕಾರಾರ‍ಯಚರಣೆ ನಡೆಸಿ ಹುತಾತ್ಮರಾಗಿದ್ದ ಭದ್ರತಾ ಸಿಬ್ಬಂದಿ ಶವಗಳನ್ನು ಶೋಧಿಸಿವೆ. ಈ ವೇಳೆ 17 ಯೋಧರ ಶವ ಪತ್ತೆಯಾಗಿದೆ. ಶನಿವಾರ ಗುಂಡಿನ ಚಕಮಕಿ ವೇಳೆ ಇವರನ್ನೆಲ್ಲಾ ಅಪಹರಿಸಿ ಹತ್ಯೆ ಮಾಡಿರುವ ಶಂಕೆಡ ವ್ಯಕ್ತವಾಗಿದೆ.

ಇನ್ನು ಈ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಭದ್ರತಾ ಸಿಬ್ಬಂದಿಯನ್ನು ವಿಮಾನದ ಮೂಲಕ ರಾಯ್ಪುರಕ್ಕೆ ಕರೆತಂದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ 15 ಮಂದಿ ಪೈಕಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಐಜಿಪಿ ಸುಂದರ್‌ ರಾಜ್‌ ಪಿ ಹೇಳಿದ್ದಾರೆ.